ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಔಷಧಿ ವಿತರಣಾ ಕೊಠಡಿಗೆ ತೆರಳಿ ಪರಿಶೀಲಿಸಿದ ಉಪಲೋಕಾಯುಕ್ತರು, ರೋಗಿಗಳಿಗೆ ನೀಡುವ ಮಾತ್ರೆ ಔಷಧಿಗಳ ಬಗ್ಗೆ ಸರಿಯಾದ ನಿರ್ವಹಣೆ ಮಾಡದಿರುವುದನ್ನು ಕಂಡು ನೀವು ಎಂತಹ ಆರೋಗ್ಯಾಧಿಕಾರಿ. ರೋಗಿಗಳಿಗೆ ನೀಡುವ ಮಾತ್ರೆ ಔಷಧಿಗಳನ್ನು ಒಂದು ಕವರ್‌ನಲ್ಲಿ ಹಾಕಿ ಕೊಡಲು ಆಗುವುದಿಲ್ಲವೇ, ಸಂಜೆಯೊಳಗೆ ಆ ವ್ಯವಸ್ಥೆ ಮಾಡಬೇಕೆಂದು ಎಚ್ಚರಿಕೆ ನೀಡಿದರು.
ವೈದ್ಯರು ಬರೆಯುವ ಔಷಧಿ ಚೀಟಿಯಲ್ಲಿ ರೋಗಿ ಹೆಸರು, ದಿನಾಂಕ, ಯಾವ ಸಮಯಕ್ಕೆ ಔಷಧಿ ತೆಗೆದುಕೊಳ್ಳಬೇಕೆಂದು ನಮೂದಿಸಿಲ್ಲ. ಆಸ್ಪತ್ರೆ ವೈದ್ಯರು ತಮಗಿಷ್ಟ ಬಂದಂತೆ ಕರ್ತವ್ಯ ನಿರ್ವಹಿಸುತ್ತಿದ್ದೀರಿ. ಏನಾದರೂ ವ್ಯತ್ಯಾಸವಾದರೆ ಯಾರ ಮೇಲೆ ನಾವು ಕ್ರಮ ತೆಗೆದುಕೊಳ್ಳಬೇಕು. ಸ್ವಲ್ಪವೂ ಜವಾಬ್ದಾರಿಯಿಲ್ಲ. ನಾನು ಮೂರನೇ ಬಾರಿಗೆ ಈ ಆಸ್ಪತ್ರೆಗೆ ಭೇಟಿ ಕೊಡುತ್ತಿದ್ದೇನೆ. ಇಲ್ಲಿ ವೈದ್ಯರು ಅಭಿವೃದ್ಧಿ ಹೊಂದಿದ್ದಾರೆ ಹೊರತು ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಿಲ್ಲ ಎಂದು ಗುಡುಗಿದರು.ಕಳೆದ ತಿಂಗಳು 5 ಲಕ್ಷ ರು. ಮೌಲ್ಯದ ಔಷಧಿಗಳನ್ನು ಹೊರಗಿನಿಂದ ಖರೀದಿಸಲಾಗಿದೆ ಎಂದು ಫಾರ್‍ಮಸಿಸ್ಟ್ ಹೇಳುತ್ತಿದ್ದಂತೆ ಬಿ.ವೀರಪ್ಪ ಗಾಬರಿಗೊಂಡರು. ತಾಲೂಕು ಆಸ್ಪತ್ರೆಗೆ ಪೂರೈಕೆಯಾಗಿರುವ ಮತ್ತು ರೋಗಿಗಳಿಗೆ ವಿತರಿಸಿರುವ ಔಷಧಿ ಎಷ್ಟು?. ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಔಷಧಿಗಳನ್ನು ಹೊರಗಿನಿಂದ ಒಂದು ದಿನಕ್ಕೆ ಎಷ್ಟು ರು.ಗಳಿಗೆ ಖರೀದಿಸಬಹುದು. ಇದರ ಮಾಹಿತಿ ಕೊಡಿ ಎಂದು ಕೇಳುತ್ತಿದ್ದಂತೆ ತಡಬಡಾಯಿಸಿದ ಫಾರ್‍ಮಸಿಸ್ಟ್‌ಗೆ 14 ವರ್ಷದಿಂದ ಕೆಲಸ ಮಾಡುತ್ತಿರುವ ನಿಮಗೆ ಸಾಮಾನ್ಯ ಜ್ಞಾನವಿಲ್ಲವೆ. ಇಲ್ಲಿಗೆ ಬರುವ ರೋಗಿಗಳನ್ನು ಆ ದೇವರೇ ಕಾಪಾಡಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಹೊರರೋಗಿಗಳ ವಿಭಾಗದಲ್ಲಿ ಕಾರ್ಯನಿರ್ವಹಿಸುವ ವೇಳೆ ಚಿಕಿತ್ಸೆ ನೀಡುವ ವೈದ್ಯರ ಹೆಸರನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿಯುವಂತೆ ಪ್ರದರ್ಶಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಧಿಕಾರಿಗಳು ನಿಯಮಿತವಾಗಿ ಭೇಟಿ ಕೊಟ್ಟು ಅಲ್ಲಿನ ಮೂಲ ಸೌಕರ್ಯ ಹಾಗೂ ಸಾರ್ವಜನಿಕರಿಗೆ ದೊರೆಯುತ್ತಿರುವ ಸೇವೆಗಳ ಕುರಿತು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಸಾರ್ವಜನಿಕರಿಗೆ ಆರೋಗ್ಯ ಸೇವೆಗಳಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯ ಕ್ರಮವಹಿಸಿ ಆಸ್ಪತ್ರೆ ಸ್ವಚ್ಛತೆ, ಮೂಲಸೌಕರ್ಯ, ಔಷಧ ಪೂರೈಕೆ ಮತ್ತು ಸೇವೆಗಳ ಗುಣಮಟ್ಟದ ಬಗ್ಗೆ ನಿರಂತರ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಉಪಲೋಕಾಯುಕ್ತರ ಉಪ ನಿಬಂಧಕ ಎನ್.ವಿ.ಅರವಿಂದ್, ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್‌ಬಾಬು, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಿ.ಸಿ.ಬೆಟ್ಟಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.