ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ತಾಲೂಕು ಆಡಳಿತ ಸೌಧಕ್ಕೆ ಗುರುವಾರ ಭೇಟಿ ಕೊಟ್ಟು ಕಂದಾಯ ಇಲಾಖೆಗೆ ಸಂಬಂಧಿಸಿದ ರೈತರ ಭೂದಾಖಲೆಗಳನ್ನು ಪರಿಶೀಲನೆ ನಡೆಸಿದ ವೇಳೆ ಕಳೆದ 2018 ರಿಂದ ಈವರೆಗೆ ಒಟ್ಟು 2385 ಆಫ್‌ಲೈನ್ ದಾಖಲೆಗಳು ಬಾಕಿ ಇರುವುದನ್ನು ಕಂಡು ಗರಂ ಆದ ಉಪಲೋಕಾಯುಕ್ತರು ಮುಂದಿನ 20 ದಿನದಲ್ಲಿ ಎಲ್ಲಾ ದಾಖಲೆಗಳನ್ನು ಆನ್‌ಲೈನ್‌ಗೆ ಪರಿವರ್ತಿಸಬೇಕೆಂದು ನಿರ್ದೇಶನ ನೀಡಿದರು.
ಮಂಡ್ಯ ಮತ್ತು ಮದ್ದೂರಿನಲ್ಲಿ ಕಂದಾಯ ಇಲಾಖೆ ಅಧಿಕಾರಿ, ಗುಮಾಸ್ತರು ಇದು ನನಗೆ ಸಂಬಂಧವಿಲ್ಲ. ಹೊಸದಾಗಿ ಬಂದಿದ್ದೇನೆ ಎಂದು ಸಬೂಬು ಹೇಳಿದರೆ ನಾಗಮಂಗಲದ ಗುಮಾಸ್ಥರು ನಾನು ಬಂದು ಹತ್ತು ದಿನವಾಗಿದೆ ಎಂದು ಹೊಸ ಡೈಲಾಗ್ ಹೊಡೆಯುತ್ತಿದ್ದೀರಿ. ನಿಮ್ಮ ಸಬೂಬು ಕೇಳಲು ನಾನು ಬಂದಿಲ್ಲ. ನಿಗಧಿತ ಅವಧಿಯಲ್ಲಿ ಜನರ ಕೆಲಸ ಮಾಡಿಕೊಡಿ. ಇಲ್ಲದಿದ್ದರೆ ಮನೆಗೆ ಹೋಗಲು ಸಿದ್ದವಾಗಿರಿ ಎಂದು ಎಚ್ಚರಿಸಿದರು.ಕಸಬಾ ಹೋಬಳಿಯಲ್ಲಿ 353 ಆರ್‌ಟಿಸಿ ತಿದ್ದುಪಡಿ ಅರ್ಜಿಗಳು ಬಾಕಿ ಇರುವುದನ್ನು ಗಮನಿಸಿದ ಉಪಲೋಕಾಯುಕ್ತರು, ಕಡತಗಳ ನಿರ್ವಹಣೆ ಮಾಡುವುದು ನಿಮಗೆ ಗೊತ್ತಿಲ್ಲವೆ. ಬಾಕಿ ಅರ್ಜಿಗಳನ್ನು 20 ದಿನದೊಳಗೆ ವಿಲೇವಾರಿ ಮಾಡಬೇಕು. ಸಾಧ್ಯವಾದಷ್ಟು ಆನ್‌ಲೈನ್ ಮೂಲಕ ಒದಗಿಸುವ ಜೊತೆಗೆ ದಾಖಲೆ ಹಾಗೂ ಕಡತಗಳ ಡಿಜಿಟಲೀಕರಣಕ್ಕೆ ಆದ್ಯತೆ ನೀಡಬೇಕು. ಬಾಕಿ 500 ಕಡತಗಳನ್ನು ಪರಿಶೀಲಿಸಿ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಬೇಕು ಎಂದು ಸೂಚಿಸಿದರು.
ಉಪಲೋಕಾಯುಕ್ತರ ಭೇಟಿ ನೀಡಿರುವ ಮಾಹಿತಿ ಅರಿತು ನೂರಾರು ರೈತರು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆಗೈದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು, ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ವಾಸ್ತವ್ಯವಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಳಂಬ ಮಾಡದೆ ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕು. ಆಡಳಿತದಲ್ಲಿ ಪಾರದರ್ಶಕತೆ ಹಾಗೂ ವೇಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.