ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಶಿಕ್ಷಕರು ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವಲ್ಲಿ ವಿಫಲರಾಗಿದ್ದಾರೆ. ಮಮರೆದೊಡ್ಡಿ, ಗೊನ್ನೂರು ಬೈಲು, ಮುನಿಯಪ್ಪನದೊಡ್ಡಿ, ನಾಗಣ್ಣನಗರ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಹಾಲಿನ ದರ ಹೆಚ್ಚಳ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಘಟಕದಿಂದ ಪಟ್ಟಣದ ಮಲೆ ಮಹದೇಶ್ವರ ಬೆಟ್ಟದ ಮುಖ್ಯರಸ್ತೆ ಕೆಂಪೇಗೌಡ ಸರ್ಕಲ್ ನಿಂದ ಮೆರವಣಿಗೆ ಮೂಲಕ ಸಾಗಿ ತಹಸೀಲ್ದಾರ್‌ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ವೇಳೆ ಹಾಲನ್ನು ರಸ್ತೆಗೆ ಸುರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹಾಲಿನ ಖರೀದಿ ದರವನ್ನು ₹10 ಹೆಚ್ಚಿಸಬೇಕು. ಹಾಲಿಗೆ ನ್ಯಾಯಯುತ ಬೆಲೆ, ಜಾನುವಾರುಗಳಿಗೆ ಪಶು ವೈದ್ಯಕೀಯ ಸಲಹೆ, ಹಸುಗಳಿಗೆ ಮೇವಿನ ಕೊರತೆ ನೀಗಿಸಬೇಕು. ತಾಲೂಕಿನಲ್ಲಿ ಒಬ್ಬರೇ ಪಶು ವೈದ್ಯರು ಇರುವುದರಿಂದ ಹೆಚ್ಚುವರಿ ವೈದ್ಯರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ಬಹು ದಿನಗಳ ಬೇಡಿಕೆಯಾದ ಉಡುತೊರೆಹಳ್ಳ ಏತ ನೀರಾವರಿ ಯೋಜನೆಗೆ ₹490 ಕೋಟಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ವಿದ್ಯುತ್ ಮತ್ತು ನೆಟ್‌ವರ್ಕ್ ಸಮಸ್ಯೆ:

ಕೆ.ಇ.ಬಿಯಿಂದ ಸರಿಯಾದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಲೈನ್‌ಮೆನ್‌ಗಳು ಫೋನ್‌ಗೆ ಸ್ಪಂದಿಸುತ್ತಿಲ್ಲ ಹಾಗೂ ಇಂಟರ್ನೆಟ್ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಶಿಕ್ಷಕರು ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವಲ್ಲಿ ವಿಫಲರಾಗಿದ್ದಾರೆ. ಮಮರೆದೊಡ್ಡಿ, ಗೊನ್ನೂರು ಬೈಲು, ಮುನಿಯಪ್ಪನದೊಡ್ಡಿ, ನಾಗಣ್ಣನಗರ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿದರು.

ಪ್ರತಿಭಟನಾ ಮೆರವಣಿಗೆ ವೇಳೆ ರೈತರು ಹಾಲಿನ ದರ ಹೆಚ್ಚಳ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ರಸ್ತೆಗೆ ಹಾಲು ಸುರಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ತಾಲೂಕು ದಂಡಾಧಿಕಾರಿ ಚೈತ್ರ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಮನವಿಯನ್ನು ಸರ್ಕಾರಕ್ಕೆ ಹಿರಿಯ ಅಧಿಕಾರಿಗಳ ಮುಖಾಂತರ ತಲುಪಿಸಲಾಗುವುದು, ರೈತರು ಆಗ್ರಹಿಸಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧ್ಯಕ್ಷ ಮಹಾದೇವಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ರಮ್ಯಾ ರಮಣಂ ಹಾಗೂ ರಾಮನಗರ ಜಿಲ್ಲಾಧ್ಯಕ್ಷರಾದ ರತ್ನಮ್ಮ, ತಾಲೂಕು ಘಟಕದ ಅಧ್ಯಕ್ಷ ಪಳನಿ ಸ್ವಾಮಿ, ಗುಂಡ್ಲುಪೇಟೆ ಅಧ್ಯಕ್ಷ ಶಿವಣ್ಣ, ಗೋಪಾಲ್ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.