Welcome to the special session to discuss the Kasturirangan report

- ಸ್ವಾಗತಾರ್ಹ

-ರೈತ ಹೋರಾಟ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್ । ಪಕ್ಷಭೇದ ಮರೆತು ಮಲೆನಾಡ ಸಮಸ್ಯೆ ಚರ್ಚೆಗೆ ಒತ್ತಾಯ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸೆ.21, 22 ಮತ್ತು 23ರಂದು ಮೂರು ದಿನಗಳ ವಿಶೇಷ ಅಧಿವೇಶನ ಕರೆದಿರುವುದನ್ನು ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಸ್ವಾಗತಿಸಿದೆ. ಈ ಅಧಿವೇಶನದಲ್ಲಿ ಮಲೆನಾಡಿನ ಎಲ್ಲ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಪಕ್ಷಭೇದ ಮರೆತು ಮಲೆನಾಡಿನ ಜನರ ಸಮಸ್ಯೆಗಳ ಕುರಿತು ನಿಖರ ಹಾಗೂ ದೃಢವಾಗಿ ಧ್ವನಿ ಎತ್ತಬೇಕು ಎಂದು ಸಮಿತಿ ಅಧ್ಯಕ್ಷ ಎಸ್. ವಿಜಯ್ ಕುಮಾರ್ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಶೇಷ ಅಧಿವೇಶನಕ್ಕೂ ಮುನ್ನ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಹೋರಾಟಗಾರರೊಂದಿಗೆ ಸಭೆ ನಡೆಸಿ, ಕಸ್ತೂರಿರಂಗನ್ ವರದಿಯಲ್ಲಿರುವ ನ್ಯೂನತೆ ಕುರಿತು ನಿರ್ದಿಷ್ಟ ವಿಚಾರಗಳನ್ನು ಸಂಗ್ರಹಿಸಿ, ಅಧಿವೇಶನದಲ್ಲಿ ಒಕ್ಕೊರಲಿನಿಂದ ಮಂಡಿಸಬೇಕು ಎಂದರು.ಮಲೆನಾಡಿನ ರೈತರು ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿ ದ್ದಾರೆ. ಬೋಳುಗುಡ್ಡಗಳಲ್ಲಿ ಗಿಡಗಳನ್ನು ನೆಟ್ಟು ಕೃಷಿ ಮಾಡುತ್ತಿರುವುದರಿಂದ ಹಸಿರು ಹೊದಿಕೆ ಹೆಚ್ಚಿದೆ. ಮಳೆ, ನದಿ-ತೊರೆಗಳ ಹರಿವು ಹಾಗೂ ಪರಿಸರ ಸಮತೋಲನಕ್ಕೆ ಕೊಡುಗೆ ನೀಡುತ್ತಿದ್ದಾರೆ. ಲಕ್ಷಾಂತರ ಮರ ಬೆಳೆಸಿ ಶುದ್ಧ ಗಾಳಿ ಮತ್ತು ಆಮ್ಲಜನಕ ಒದಗಿಸುವ ಮಲೆನಾಡಿನ ಜನರ ಕೊಡುಗೆಯನ್ನು ವಿಧಾನಸಭೆಯಲ್ಲಿ ಸಮರ್ಥವಾಗಿ ಪ್ರಸ್ತಾಪಿಸಬೇಕು ಎಂದು ಹೇಳಿದರು.ಜಾಗತಿಕ ತಾಪಮಾನ ಏರಿಕೆಗೆ ಯುದ್ಧ, ಹವಾನಿಯಂತ್ರಿತ ವ್ಯವಸ್ಥೆಗಳು, ಕಚೇರಿಗಳು, ವಾಹನಗಳು ಹಾಗೂ ಕೈಗಾರಿಕೆ ಗಳಿಂದ ಹೆಚ್ಚುತ್ತಿರುವ ಉಷ್ಣಾಂಶ ಸೇರಿದಂತೆ ಹಲವು ಕಾರಣಗಳಿವೆ. ಪರಿಸರ ಸಂರಕ್ಷಣೆ ಹೊಣೆಯನ್ನು ಕೇವಲ ಮಲೆನಾಡಿನ ರೈತರ ಮೇಲೆ ಹೊರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.ಕೇರಳ ಮಾದರಿ;

ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರವೇ ಭೂ ವಿಭಜನೆ ನಡೆಸಿ, ಭೌತಿಕ ಸರ್ವೆ ಮೂಲಕ ಕೃತಕ ಹಾಗೂ ಸ್ವಾಭಾವಿಕ ಅರಣ್ಯಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಬೇಕು. ಗ್ರಾಮ- ಅರಣ್ಯದ ಗಡಿಗಳನ್ನು ಗುರುತಿಸಿ, ಕೃಷಿಭೂಮಿ, ಗೋಮಾಳ, ಶಾಲೆ, ಆಟದ ಮೈದಾನ, ಸ್ಮಶಾನ ಹಾಗೂ ಇತರ ಸಾರ್ವಜನಿಕ ಉದ್ದೇಶದ ಭೂಮಿಯನ್ನು ಕಸ್ತೂರಿರಂಗನ್ ವರದಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಸಮಿತಿ ಆಗ್ರಹಿಸಿದೆ.

ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಒಗ್ಗಟ್ಟಿನಿಂದ ಈ ವಿಚಾರ ಚರ್ಚಿಸಿ, ಮಲೆನಾಡಿನ ಜನರ ಹಿತ ಕಾಪಾಡಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ವಿಜಯ್ ಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕರಾದ ಕೆ.ಕೆ. ರಘು, ವಾಸು ಪೂಜಾರಿ, ಪ್ರಕಾಶ್, ಹರೀಶ್, ನಾಗೇಶ್, ಮೋಹನ್ ಹಾಗೂ ಮಲ್ಲಪ್ಪ ಉಪಸ್ಥಿತರಿದ್ದರು.