ಗುಟ್ಕಾ ನಿಷೇಧ ಹೇಳಿಕೆಯಿಂದ ಅಡಕೆ ಮಾರುಕಟ್ಟೆ ತಲ್ಲಣ

KannadaprabhaNewsNetwork |  
Published : Aug 21, 2026, 02:00 AM IST
19ಎಚ್.ಎಲ್.ಐ2. ಅಗಸ್ಟ್ 21ರ  ಶುಕ್ರವಾರ  ಗುಟ್ಕಾ ನಿಷೇಧ ಹಿಂಪಡೆಯುವಂತೆ ಆಗ್ರಹಿಸಿ ಹೊನ್ನಾಳಿ ಪಟ್ಟಣದಲ್ಲಿ ರೈತ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ  ಬುಧವಾರ  ಪ್ರವಾಸಿ  ಮಂದಿರದಲ್ಲಿ  ಕರೆದಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ,ಕರಿಬಸಪ್ಪಗೌಡ  ಮಾತನಾಡಿದರು. | Kannada Prabha

ಸಾರಾಂಶ

ಕಳೆದ 20 ದಿನಗಳಿಂದ ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಹೇಳಿಕೆ ನೀಡಿ ಅಡಕೆ ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ. ಸರ್ಕಾರದ ಈ ಹೇಳಿಕೆಗಳಿಂದ ಅಡಕೆ ಮಾರುಕಟ್ಟೆ ತಲ್ಲಣಗೊಂಡಿದ್ದು, ಅಡಕೆ ಬೆಳೆಗಾರರು ಮತ್ತಷ್ಟು ಕಂಗಲಾಗಿದ್ದಾರೆ ಎಂದು ರೈತ ಸಂಘ-ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ. ಕರಿಬಸಪ್ಪಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಪ್ರತಿಭಟನೆ ಆಯೋಜನೆ ಹಿನ್ನೆಲೆ ಪೂರ್ವಭಾವಿ ಸಭೆಯಲ್ಲಿ ರಾಜ್ಯಾಧ್ಯಕ್ಷ ಕರಿಬಸಪ್ಪಗೌಡ

- - -

- ಆ.21ರಂದು ರೈತ ಸಂಘ, ಹಸಿರು ಸೇನೆಯಿಂದ ಬೃಹತ್‌ ಪ್ರತಿಭಟನೆ

- ಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ಯು.ಟಿ. ಖಾದರ್‌ ಹೇಳಿಕೆಗಳಿಂದ ಗೊಂದಲ

- ರಾಜ್ಯ ಸರ್ಕಾರದಲ್ಲಿ ಯಾರು ಸಿಎಂ ಎಂಬುದೇ ಗೊತ್ತಾಗುತ್ತಿಲ್ಲ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕಳೆದ 20 ದಿನಗಳಿಂದ ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಹೇಳಿಕೆ ನೀಡಿ ಅಡಕೆ ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ. ಸರ್ಕಾರದ ಈ ಹೇಳಿಕೆಗಳಿಂದ ಅಡಕೆ ಮಾರುಕಟ್ಟೆ ತಲ್ಲಣಗೊಂಡಿದ್ದು, ಅಡಕೆ ಬೆಳೆಗಾರರು ಮತ್ತಷ್ಟು ಕಂಗಲಾಗಿದ್ದಾರೆ ಎಂದು ರೈತ ಸಂಘ-ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ. ಕರಿಬಸಪ್ಪಗೌಡ ಆಕ್ರೋಶ ವ್ಯಕ್ತಪಡಿಸಿದರು.

ಆ.21ರ ಶುಕ್ರವಾರ ಗುಟ್ಕಾ ನಿಷೇಧ ಹಿಂಪಡೆಯುವಂತೆ ಆಗ್ರಹಿಸಿ ಹೊನ್ನಾಳಿ ಪಟ್ಟಣದಲ್ಲಿ ಅವಳಿ ತಾಲೂಕುಗಳ ರೈತ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ಬುಧವಾರ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ನಿಕೋಟಿನ್ ಅಂಶ ಇರುವುದು ತಂಬಾಕಿನಲ್ಲಿ. ಬೇಕಾದರೆ ತಂಬಾಕು ನಿಷೇಧ ಮಾಡಲಿ. ಅದನ್ನು ಬಿಟ್ಟು ಗುಟ್ಕಾ ನಿಷೇಧ ಮಾಡುವ ಹಿಂದಿನ ಮರ್ಮ ಏನೆಂದು ರಾಜ್ಯ ಸರ್ಕಾರ ಅಡಕೆ ಬೆಳೆಗಾರರಿಗೆ ತಿಳಿಸಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದನದಲ್ಲಿ ಮಾತನಾಡಿ, ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ಗುಟ್ಕಾ ನಿಷೇಧ ಸರ್ಕಾರ ಹಿಂಪಡೆಯಲಿದೆ ಎಂದು ಹೇಳಿಕೆ ನೀಡುತ್ತಾರೆ. ಕೆಲವೇ ಕ್ಷಣದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿ ಯಾವುದೇ ಕಾರಣಕ್ಕೂ ಗುಟ್ಕಾ ನಿಷೇಧ ಹಿಂಪಡೆಯುವುದಿಲ್ಲ ಎಂದು ಹೇಳಿಕೆ ನೀಡುತ್ತಾರೆ. ರಾಜ್ಯ ಸರ್ಕಾರದಲ್ಲಿ ಯಾರು ಸಿಎಂ ಎಂದು ಗೊತ್ತಾಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಸರ್ಕಾರದ ಹೇಳಿಕೆಯಿಂದ ಅಡಕೆ ದರ ಕುಸಿತ ಕಂಡಿದೆ. ಹೀಗೆ ಇನ್ನೊಂದು ವಾರ ಅಡಕೆ ದರ ಕುಸಿತ ಕಂಡರೆ ಕಾಂಗ್ರೆಸ್ ಸರ್ಕಾರವನ್ನು ಜನತೆ ಮನೆಗೆ ಕಳುಹಿಸಲಿದ್ದಾರೆ. ಇದು ಖಚಿತ. ಮೊದಲು ಸರ್ಕಾರ ಎಚ್ಚೆತ್ತುಕೊಂಡು ತಂಬಾಕು ನಿಷೇಧ ಮಾಡಿ, ಗುಟ್ಕಾ ನಿಷೇಧವನ್ನು ಹಿಂಪಡೆಯಬೇಕು. ಅವಳಿ ತಾಲೂಕಿನಲ್ಲಿ ಅಂದಾಜು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಸರಿಯಾಗಿ ಮಳೆ ಬಾರದೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಅಡಕೆ ಬೆಳೆಗಾರರಿಗೆ ರಾಜ್ಯ ಸರ್ಕಾರ ಗಾಯದ ಮೇಲೆ ಬರೆ ಎಳೆಯಲು ಹೊರಟಿದೆ ಎಂದು ಟೀಕಿಸಿದರು.

ಆ.21 ಬೃಹತ್ ಪ್ರತಿಭಟನೆ:

ಗುಟ್ಕಾ ನಿಷೇಧವನ್ನು ಹಿಂಪಡೆಯದ ರಾಜ್ಯ ಸರ್ಕಾರದ ವಿರುದ್ಧ ಆ.21ರಂದು ಹೊನ್ನಾಳಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಅವಳಿ ತಾಲೂಕಿನಿಂದ ಪಕ್ಷಾತೀತವಾಗಿ ಅಡಕೆ ಬೆಳೆಗಾರರು ಆಗಮಿಸಲಿದ್ದಾರೆ ಎಂದು ವಿವರಿಸಿದರು.

ಕೇಂದ್ರದ ವಿರುದ್ಧವೂ ಆಕ್ರೋಶ:

ಕೇಂದ್ರ ಸರ್ಕಾರ ಕಾರ್ಪೋರೇಟ್ ವಲಯಕ್ಕೆ ರೆಡ್‌ಕಾರ್ಪೆಟ್ ಹಾಕಿ, ರೈತರಿಗೆ ಮೋಸ ಮಾಡುತ್ತಿದೆ. ಇದನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡಲು ದೆಹಲಿಗೆ ಹೋಗುತ್ತಿರುವ ರೈತರನ್ನು ರಸ್ತೆಯಲ್ಲಿಯೇ ತಡೆಯುತ್ತಿದ್ದಾರೆ. ಅಲ್ಲಲ್ಲಿ ತಡೆಗೋಡೆ ಹಾಗೂ ತಂತಿಬೇಲಿಗಳನ್ನು ನಿರ್ಮಿಸಿ ರೈತರು ಮುಂದಕ್ಕೆ ಹೋಗದಂತೆ ಮಾಡುತ್ತಿದ್ದಾರೆ. ಈ ನಡೆ ಖಂಡಿಸಿ ಅಂದು ಕೇಂದ್ರ ಸರ್ಕಾರದ ವಿರುದ್ಧವೂ ಪ್ರತಿಭಟನೆ ನಡೆಸಲ್ಲಿದ್ದೇವೆ. ರೈತರ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚೆಲ್ಲಾಟ ಆಡುತ್ತಿದೆ. ರೈತರನ್ನು ಗೊಂದಲಕ್ಕೆ ನೂಕುತ್ತಿರುವುದನ್ನು ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರತಿಕೃತಿ ದಹಿಸಲಾಗುವುದು ಎಂದು ಕರಿಬಸಪ್ಪಗೌಡ ಹೇಳಿದರು.ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ.ಬಸಪ್ಪ ಮಾತನಾಡಿ, ಗುಟ್ಕಾ ನಿಷೇಧ ಎಂಬ ಹೇಳಿಕೆ ರಾಜ್ಯ ಸರ್ಕಾರದಿಂದ ಬಿಡುಗಡೆ ಆದ ಕೂಡಲೇ ರೈತರು ತೀವ್ರ ಆತಂಕಕ್ಕೆ ಈಡಾಗಿದ್ದಾರೆ. ಸರ್ಕಾರದ ಈ ನಡೆಯಿಂದ ನಾವುಗಳು ಎಲ್ಲಿ ಬೀದಿಗೆ ಬೀಳುತ್ತೆವೋ ಎಂದು ಜನತೆ ಆತಂಕದಲ್ಲಿದ್ದಾರೆ. ಈಗಲಾದರೂ ರಾಜ್ಯ ಸರ್ಕರ ಎಚ್ಚೆತ್ತು ಅಡಕೆ ಬೆಳೆಗಾರರಲ್ಲಿ ಮೂಡಿರುವ ಆಂತಕಗಳನ್ನು ದೂರ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಸಭೆಯಲ್ಲಿ ರೈತ ಸಂಘದ ಮುಖಂಡರಾದ ಹಿರೇಕಲ್ಮಠದ ಬಸವರಾಜಪ್ಪ, ಮುರುಗೇಶ್, ಹಾಲೇಶ್, ರಾಜಣ್ಣ, ಬಸವನಗೌಡ, ಆನಂದಪ್ಪ, ಸುರೇಶ್ ಇನ್ನಿತರ ರೈತರು ಉಪಸ್ಥಿತರಿದ್ದರು.

- - -

-19ಎಚ್.ಎಲ್.ಐ2: ಸಭೆಯಲ್ಲಿ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ,ಕರಿಬಸಪ್ಪಗೌಡ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಿ
ಚಿಕನ್ ಕಂಪನಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಾಳಿ, ಪರಿಶೀಲನೆ