ಕನ್ನಡಪ್ರಭ ವಾರ್ತೆ ಬೇಲೂರುತಾಲೂಕು ಗಡಿಭಾಗದಲ್ಲಿರುವ ಕುಂಬಾರ ಕೊಪ್ಪಲಿನಲ್ಲಿ ಮತ್ತೆ ಕಾಡಾನೆಗಳ ದಾಳಿ ಮುಂದುವರಿದಿದ್ದು ಕಾಫಿ, ಅಡಿಕೆ ಗಿಡಗಳನ್ನು ನಾಶ ಮಾಡಿದ್ದು ಲಕ್ಷಾಂತರ ಮೌಲ್ಯದ ಬೆಳೆ ಹಾಳಾಗಿದೆ.ಚೀಕನಹಳ್ಳಿ ಸಮೀಪದ ಕುಂಬಾರ ಹಳ್ಳಿಯಲ್ಲಿ ಜನಾರ್ಧನ ಶೆಟ್ಟಿ, ಸವಿನ್, ದಿವಾಕರ ಶೆಟ್ಟಿ ಎಂಬುವರ ತೋಟಕ್ಕೆ ಆನೆಗಳು ದಾಳಿ ಮಾಡಿವೆ. ಈ ವರ್ಷದಲ್ಲಿ ಮೂರನೇ ಬಾರಿಗೆ ಈ ತೋಟಗಳು ಕಾಡಾನೆಯ ದಾಳಿಗೆ ತುತ್ತಾಗಿದೆ. ಮುಡಿಗೆರೆ ಹಾಗೂ ಬೇಲೂರು ತಾಲೂಕು ಗಡಿಭಾಗದಲ್ಲಿ ತೋಟಗಳಿದ್ದು ಆನೆಗಳು ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಅಲೆದಾಡುವ ಸಂದರ್ಭದಲ್ಲಿ ಈ ತೋಟಗಳನ್ನೇ ಮುಖ್ಯ ಗುರಿಯನ್ನಾಗಿಸಿ ಕೊಂಡಿವೆ. ಈ ಬಗ್ಗೆ ಕುಂಬಾರಹಳ್ಳಿ ಎಸ್ಟೇಟಿನ ಜನಾರ್ದನ ಶೆಟ್ಟಿ ಮಾತನಾಡಿ ಹಲವಾರು ವರ್ಷಗಳಿಂದ ಕಷ್ಟಪಟ್ಟು ಬೆಳೆದ ಅಡಿಕೆ ಕಾಫಿ ಗಿಡಗಳು ಕಾಡಾನೆಗಳ ನಿರಂತರ ದಾಂಧಲೆಗೆ ಮಣ್ಣು ಪಾಲಾಗುತ್ತಿವೆ. ಅರಣ್ಯ ಇಲಾಖೆಯಿಂದ ನೆಪ ಮಾತ್ರಕ್ಕೆ ಕಾಡಾನೆ ಹಿಡಿಯುವುದು ರೇಡಿಯೋ ಕಾಲರ್ ಅಳವಡಿಸುವುದು ನಡೆಯುತ್ತಲೇ ಇದೆ. ಇದರ ಬೆನ್ನಲ್ಲೇ ತೋಟಗಳ ಮೇಲೆ ಕಾಡಾನೆಗಳ ಲಗ್ಗೆ ನಿರಂತರವಾಗಿ ಮುಂದುವರಿಯುತ್ತಲೇ ಇದೆ. ಆನೆಗಳ ದಾಳಿಗೆ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದ್ದರು ಬಿಡಿಗಾಸು ಪರಿಹಾರ ಕೊಡಲಾಗುತ್ತಿದೆ. ಈಗಲೂ 20ಕ್ಕೂ ಹೆಚ್ಚು ಕಾಡಾನೆಗಳು ಗುಂಪು ಗುಂಪಾಗಿ ತಮಗೆ ಬೇಕೆಂದ ಜಾಗದಲ್ಲಿ ಬೀಡುಬಿಟ್ಟು ಬೆಳೆಗಳನ್ನು ನಾಶಪಡಿಸುತ್ತಿದೆ. ಕೆಲ ವರ್ಷಗಳ ಹಿಂದೆ ಕಾಡಾನೆಗಳು ಅಡಿಕೆ ಗಿಡಗಳನ್ನು ನಾಶಪಡಿಸಿ ಮುಂದೆ ಸಾಗುತ್ತಿದ್ದವು. ಆದರೆ ಈಗ ಅವುಗಳನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಂಡಿವೆ. ಆರು ಏಳು ತಿಂಗಳ ಸಣ್ಣಪುಟ್ಟ ಗಿಡಗಳನ್ನು ತಿಂದು ತೇಗುತ್ತಿವೆ. ಇದೇ ರೀತಿ ಆನೆಗಳ ಹಾವಳಿ ಮುಂದುವರಿದರೆ ಕಾಫಿ ಬೆಳೆಗಾರರು ಬೀದಿಗೆ ಬರುವುದರಲ್ಲಿ ಸಂಶಯವೇ ಇಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.