ಸಭೆಗೂ ಮುನ್ನ ರೈತ ಬಣ ವಾಗ್ವಾದ

KannadaprabhaNewsNetwork |  
Published : Nov 04, 2026, 02:00 AM IST
ಬೆಳಗಾವಿಯಲ್ಲಿ ರೈತರಿಂದ ಪ್ರತಿಭಟನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಕಬ್ಬಿನ ಬೆಲೆ ನಿಗದಿ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆ ರೈತರ ನಡುವಿನ ಪ್ರತಿಷ್ಠೆಯ ಕಾಳಗಕ್ಕೆ ಸಾಕ್ಷಿಯಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಬ್ಬಿನ ಬೆಲೆ ನಿಗದಿ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆ ರೈತರ ನಡುವಿನ ಪ್ರತಿಷ್ಠೆಯ ಕಾಳಗಕ್ಕೆ ಸಾಕ್ಷಿಯಾಯಿತು. ಸಭೆಯಲ್ಲಿ ಭಾಗವಹಿಸುವವರ ಆಯ್ಕೆ ವಿಚಾರವಾಗಿ ರೈತ ಮುಖಂಡರೇ ಪರಸ್ಪರ ಕಿತ್ತಾಡಿಕೊಂಡ ಪರಿಣಾಮ ಸಭೆ ಆರಂಭವಾಗುವ ಮೊದಲೇ ಗೊಂದಲದ ಗೂಡಾಯಿತು. ಮತ್ತೊಂದೆಡೆ, ಸಚಿವರು ಕೆಲವರೊಂದಿಗೆ ಪ್ರತ್ಯೇಕವಾಗಿ ಗೌಪ್ಯ ಸಭೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ರೊಚ್ಚಿಗೆದ್ದ ರೈತರು, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ ಸಭೆ ಸಂಜೆ 6 ಗಂಟೆಯಾದರೂ ಆರಂಭವಾಗಲಿಲ್ಲ. ಸಭೆಯಲ್ಲಿ ಯಾರು ಪಾಲ್ಗೊಳ್ಳಬೇಕು ಎಂಬ ವಿಚಾರವೇ ರೈತ ಮುಖಂಡರ ನಡುವಿನ ಸಂಘರ್ಷಕ್ಕೆ ಕಾರಣವಾಯಿತು. ಜಿಲ್ಲಾಧಿಕಾರಿಗಳು 11 ರೈತ ಮುಖಂಡರ ಹೆಸರಿನ ಪಟ್ಟಿ ಸಿದ್ಧಪಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇತರೆ ಬಣಗಳ ಮುಖಂಡರು, ಒಂದೇ ಬಣದ 11 ಮಂದಿಗೆ ಅವಕಾಶ ನೀಡುವುದೇಕೆ? ನಾವೂ ರೈತರು. ನಾವೂ ಹೋರಾಟ ಮಾಡಿದ್ದೇವೆ. ಎಲ್ಲರಿಗೂ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.

ಇದರಿಂದ ಆಕ್ರೋಶಗೊಂಡ ವಿವಿಧ ಬಣಗಳ ಸದಸ್ಯರು ಏಕಾಏಕಿ ಸಭಾಂಗಣದೊಳಗೆ ನುಗ್ಗಿ ಕುಳಿತರು. ಇನ್ನೂ ಕೆಲವರು ಕಚೇರಿ ಹೊರಗೆ ಪ್ರತಿಭಟನೆ ಆರಂಭಿಸಿದರು. ಸಭಾಂಗಣದೊಳಗಿದ್ದ ಮುಖಂಡರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ, ವಾಗ್ವಾದ ತಾರಕಕ್ಕೇರಿತು. ಒಬ್ಬರಿಗೊಬ್ಬರು ಏರುಧ್ವನಿಯಲ್ಲಿ ಕೂಗಾಡಿದರು. ಐದಾರು ಗಂಟೆಗಳ ಕಾಲ ಇದೇ ಹಗ್ಗಜಗ್ಗಾಟ ನಡೆದರೂ ಯಾರೊಬ್ಬರೂ ತಮ್ಮ ಪಟ್ಟು ಸಡಿಲಿಸಲಿಲ್ಲ.

ರೈತರ ಈ ವರ್ತನೆಯಿಂದ ಬೇಸತ್ತ ಅಧಿಕಾರಿಗಳು ಸಭಾಂಗಣದಿಂದ ಹೊರನಡೆದರು. ಜಿಲ್ಲೆಯ 29 ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಪ್ರತಿನಿಧಿಗಳು ರೈತರ ನಡುವಿನ ಗೊಂದಲವನ್ನು ಮೂಕಪ್ರೇಕ್ಷಕರಂತೆ ನೋಡುತ್ತ ಕುಳಿತರು. ಕೊನೆಗೆ ಸಭೆ ನಡೆಸುವುದಕ್ಕೂ ರೈತರು ಅವಕಾಶ ನೀಡಲಿಲ್ಲ. ಸಚಿವ ಸತೀಶ ಜಾರಕಿಹೊಳಿ, ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ರಾಹುಲ್‌ ಶಿಂಧೆ ಕೂಡ ಸಭಾಂಗಣದತ್ತ ಸುಳಿಯಲಿಲ್ಲ. ಇನ್ನೊಂದೆಡೆ, ರೈತರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಯಿಸುತ್ತಲೇ ಬೇರೆಡೆ ಪ್ರತ್ಯೇಕ ಸಭೆ ನಡೆಸಲಾಗಿದೆ ಎಂಬ ಆರೋಪ ರೈತರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು. ಈ ವೇಳೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳು ಮೊಳಗಿದವು. ರಾಣಿ ಚನ್ನಮ್ಮ ವೃತ್ತ ಬಂದ್ ಮಾಡಿ ಪ್ರತಿಭಟನೆ ನಡೆಸುವ ಮೂಲಕ ರೈತರು ತಮ್ಮ ಅಸಮಾಧಾನ ಹೊರಹಾಕಿದರು. ತಮಗೆ ಸಭೆಗೆ ತೆರಳಲು ಅ‍ವಕಾಶ ನೀಡದ ಕ್ರಮ ಖಂಡಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಜೈಲ್ ಭರೋಗೆ ಸಜ್ಜು:

ಕಬ್ಬಿಗೆ ಪ್ರತಿ ಟನ್‌ಗೆ ₹4,500 ದರ ನೀಡಬೇಕು, ರಾಜ್ಯ ಸರ್ಕಾರ ₹1,000 ಪ್ರೋತ್ಸಾಹಧನ ಘೋಷಿಸಬೇಕು ಹಾಗೂ ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ದರವನ್ನು ಪ್ರತಿ ಕೆ.ಜಿ.ಗೆ ₹60ಕ್ಕೆ ಹೆಚ್ಚಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನ.4ರಂದು ಜೈಲ್ ಭರೋ ಚಳವಳಿಗೆ ಕರೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾವೇರಿ ನೀರಾವರಿ ನಿಗಮದ ಕಚೇರಿಗೆ ರೈತರಿಂದ ಮುತ್ತಿಗೆ, ಪ್ರತಿಭಟನೆ
ಮಹಾಕಾವ್ಯಗಳ ಮೌಲ್ಯ ಮಕ್ಕಳಿಗೆ ತಿಳಿಸಿ