ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಕಲರಿಗೂ ಉತ್ತಮ ಸೇವೆ ಕೊಡಲೆಂದು ಸತ್ಯ ಸಾಯಿ ಗ್ರಾಮದಲ್ಲಿ ಉತ್ತಮ ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು. ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವದ 90ನೇ ದಿನದ ಆಶೀರ್ವಚನ ನೀಡಿದ ಸದ್ಗುರು, ಇತ್ತೀಚೆಗೆ ಆರೋಗ್ಯ ಸೇವೆಗಳು ದುಬಾರಿಯಾಗಿವೆ. ಎಲ್ಲರಿಗೂ ಎಲ್ಲ ಸೌಲಭ್ಯಗಳು ಸಿಗಬೇಕು ಎಂದು ಪ್ರತಿಪಾದಿಸಿದರು. ನಗದು ರಹಿತ ಚಿಕಿತ್ಸೆಗೆ ವ್ಯವಸ್ಥೆಹೊರಗಿನ ಆಸ್ಪತ್ರೆಗಳಲ್ಲಿ ಸಾಮಾನ್ಯ ಜನರಿಗೆ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಸಹಾಯ ಮಾಡುವ ಉದ್ದೇಶದಿಂದ ನಮ್ಮ ಆಸ್ಪತ್ರೆಯಲ್ಲಿ ನಗದು ರಹಿತ ವ್ಯವಸ್ಥೆ ಮಾಡಲಾಗಿದೆ. ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಸಂಸ್ಥೆಯಲ್ಲಿ ವೈದ್ಯಕೀಯ, ನರ್ಸಿಂಗ್, ಪ್ಯಾರಾ ಮೆಡಿಕಲ್ ಉಚಿತ ಕೋರ್ಸ್ ಗಳನ್ನು ಆರಂಭಿಸಿದ್ದೇವೆ. ಇಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ವ್ಯಾಸಂಗ ಮುಗಿದ ನಂತರ ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡುತ್ತಾರೆ ಎಂದರು. ಆಧ್ಯಾತ್ಮಿಕ ಸೇವಾ ಕೇಂದ್ರ
ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಮಾತನಾಡಿ, ಇಲ್ಲಿ ದೊರೆಯುವ ಸೇವೆಯು ಜಗತ್ತಿನ ಯಾವ ಮೂಲೆಯಲ್ಲೂ ನಾನು ನೋಡಿಲ್ಲ. ಇದನ್ನು ನಂಬುವುದಕ್ಕೂ ಆಗುತ್ತಿಲ್ಲ. ಕೆಲವು ವರ್ಷಗಳ ಹಿಂದೆ ಸಾಕಷ್ಟು ಮಂದಿಗೆ ತಿಳಿಯದ ಈ ಸಂಸ್ಥೆ ಇದೀಗ ಜಗತ್ತಿನ ಆಧ್ಯಾತ್ಮಿಕ ಮತ್ತು ಸೇವಾ ಕೇಂದ್ರವಾಗಿ ಗುರುತಿಸಿಕೊಂಡಿದೆ ಎಂದರು. ಇದೇ ವೇಳೆ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಸಂಸ್ಥೆಯ ಸದಸ್ಯರು ಮತ್ತವರ ಕುಟುಂಬದವರಿಗಾಗಿ ಹೆಲ್ತ್ ಕಾರ್ಡ್ ಅನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಬಿಡುಗಡೆ ಮಾಡಿದರು. ಜೊತೆಗೆ ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ನ 7 ಕೇಂದ್ರಗಳನ್ನು ಲೋಕಾರ್ಪಣೆಗೊಳಿಸಿದರು.