ಅಶ್ಲೀಲ ವಿಡಿಯೋ ಹಂಚಿಕೆ ಮಾಡಿದವರ ಬಂಧಿಸಿ ತನಿಖೆ ಮಾಡಲು ಆಗ್ರಹ

KannadaprabhaNewsNetwork | Updated : May 10 2024, 10:47 AM IST

ಸಾರಾಂಶ

ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ಪ್ರಚಾರ ಸಂಬಂಧ ಐವರ ಮೇಲೆ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ. .  

 ಹಾಸನ :  ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ಪ್ರಚಾರ ಸಂಬಂಧ ಐವರ ಮೇಲೆ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿ 24 ಗಂಟೆಗಳಾಗಿದ್ದರೂ ಅವರನ್ನೇಕೆ ಬಂಧಿಸಿಲ್ಲ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಮತ್ತು ವಕೀಲ ಎಸ್. ದ್ಯಾವೇಗೌಡ ಪ್ರಶ್ನಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ಲೋಕಸಭಾ ಚುನಾವಣೆ ಏ.೨೬ ರಂದು ನಡೆದಿದೆ. ಅಂದು ಪ್ರಜ್ವಲ್ ರೇವಣ್ಣ ಅವರ ಭಾವಚಿತ್ರ ಬಳಸಿಕೊಂಡು ನಕಲಿ ವಿಡಿಯೋ, ಆಡಿಯೋಗಳನ್ನು ಸೃಷ್ಟಿ ಮಾಡಿ ಇವರಿಗೆ ಮತದಾನ ಮಾಡಬೇಡಿ ಎಂದು ಮನೆ ಮನೆಗೆ ಹಂಚಲಾಗಿತ್ತು. ವಿಡಿಯೋ ವಿತರಣೆ ಮಾಡಲಾಗಿದೆ ಎಂದು ಹೇಳಿ ಪಕ್ಷದ ಏಜೆಂಟ್ ಆದ ವಕೀಲ ಪೂರ್ಣಚಂದ್ರ ಅವರು ಐದು ಜನರ ಮೇಲೆ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಬುಧವಾರ ಜಾಮೀನು ಅರ್ಜಿ ತಿರಸ್ಕೃತವಾಯಿತು. ದೂರು ದಾಖಲಾದ ಕೂಡಲೇ ಈ ಐವರನ್ನು ಬಂಧಿಸಬಹುದಿತ್ತು. ಈ ನಕಲಿ ವೀಡಿಯೋ ಹಂಚಿಕೆ ಸಂಬಂಧದ ಆರೋಪದಲ್ಲಿ ಆರೋಪಿಗಳ ಬಂಧನವಾಗಿಲ್ಲ’ ಎಂದು ದೂರಿದರು.

‘ರೇವಣ್ಣ ಅವರ ಅರ್ಜಿ ವಜಾ ಆದ ಒಂದು ಗಂಟೆಯೊಳಗೆ ಬಂಧನವಾಗುತ್ತದೆ. ಆದರೆ ಈ ಪ್ರಕರಣದ ಆರೋಪಿಗಳ ಅರ್ಜಿ ವಜಾ ಆಗಿ ಒಂದು ದಿನ ಆದರೂ ಬಂಧನ ಆಗಿಲ್ಲ. ಅವರ ಬಂಧನ ಮಾಡದಿರಲು ಸರ್ಕಾರದ ಒತ್ತಡ ಇದೆಯಾ? ಮತ್ತೋರ್ವ ಆರೋಪಿ ಜಾಮೀನಿಗೆ ಅರ್ಜಿಯನ್ನೇ ಹಾಕಿಲ್ಲ ಆದರೂ ಬಂಧನವಾಗಿಲ್ಲ. ಪೊಲೀಸರು ಆರೋಪಿಗಳ ಬಂಧನ ಯಾಕೆ ಮಾಡಿಲ್ಲ’ ಎಂದು ಪ್ರಶ್ನಿಸಿದರು.

ಈ ಪ್ರಕರಣವನ್ನು ಮಾತ್ರ ಏಕೆ ಎಸ್‌ಐಟಿಗೆ ವಹಿಸಿಲ್ಲ ಎಂದು ಹೇಳಿದರು. ಇವರನ್ನು ತಕ್ಷಣ ಬಂಧಿಸಿ ಕ್ರಮ ಜರುಗಿಸಬೇಕು. ಇವತ್ತಿನ ತಂತ್ರಜ್ಞಾನ ಬಳಸಿ ಆರೋಪಿಗಳು ಎಲ್ಲಿದ್ದಾರೆ ಎಂಬುದನ್ನು ತಕ್ಷಣ ಪತ್ತೆ ಹಚ್ಚುವಂತೆ ಮನವಿ ಮಾಡಿದರು.

ಜೆಡಿಎಸ್ ಪಕ್ಷದ ಮುಖಂಡರು ಹಾಗೂ ವಕೀಲರಾದ ಶೇಷಾದ್ರಿ, ಸುದೀಪ್, ನಿಂಗರಾಜು, ಗೋಪಾಲೇಗೌಡ, ನಯನ್ ಇತರರು ಇದ್ದರು.

Share this article