
ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ಎರಡನೇ ವಿಕಿರಣ ರಕ್ಷಾ ಕವಚವನ್ನು ಕಾರವಾರ ನಗರದ ಮೂಲಕ ಬುಧವಾರ ಅತ್ಯಂತ ಎಚ್ಚರಿಕೆಯಿಂದ ಕೈಗಾ ಸ್ಥಾವರಕ್ಕೆ ಸಾಗಿಸಲಾಯಿತು. 30 ಅಡಿಗೂ ಹೆಚ್ಚು ಎತ್ತರ ಹಾಗೂ ಸುಮಾರು 120 ಟನ್ ತೂಕ ಹೊಂದಿರುವ ಈ ಬೃಹತ್ ಉಪಕರಣವನ್ನು ವಿಶೇಷ ಸ್ವಯಂಚಾಲಿತ ವ್ಯವಸ್ಥೆಯುಳ್ಳ ಮಲ್ಟಿ- ಆಕ್ಸಲ್ ವಾಹನದ ಮೂಲಕ ಸಾಗಿಸಲಾಗುತ್ತಿದೆ.ಗುಜರಾತ್‌ನ ಹಜಿರಾದಿಂದ ಹೊರಟಿದ್ದ ಈ ಬೃಹತ್ ಯಂತ್ರೋಪಕರಣವು ಎರಡು ತಿಂಗಳಿಗೂ ಹೆಚ್ಚು ಕಾಲದ ಸುದೀರ್ಘ ಪ್ರಯಾಣದ ಬಳಿಕ ಕಾರವಾರ ತಲುಪಿದೆ. ನಗರ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ತಂಗಿದ್ದ ಸರಕು ಸಾಗಣೆ ವಾಹನವು ಸ್ಥಳೀಯ ಆಡಳಿತ ಹಾಗೂ ವಿದ್ಯುತ್ ಇಲಾಖೆಯ ಸಹಕಾರದೊಂದಿಗೆ ನಗರವನ್ನು ದಾಟಿ ಕೈಗಾ ಕಡೆಗೆ ತನ್ನ ಪ್ರಯಾಣವನ್ನು ಮುಂದುವರಿಸಿದೆ.ಸಾಗಣೆ ಪ್ರಕ್ರಿಯೆ ಕುರಿತು ಮಾತನಾಡಿದ ಸೂಪರ್ ಓಡಿಸಿ ಸಂಸ್ಥೆಯ ಅಧಿಕಾರಿ ಡಿ.ಕೆ. ಪಾಂಡ್ಯ, ಮಾರ್ಗಮಧ್ಯೆ ಘಟ್ಟ ಪ್ರದೇಶಗಳು, ಕಿರಿದಾದ ರಸ್ತೆಗಳು, ಟೋಲ್ ಗೇಟ್‌ಗಳು ಹಾಗೂ ಯಂತ್ರದ ಅಗಲ ಮತ್ತು ಎತ್ತರಕ್ಕೆ ಅನುಗುಣವಾಗಿ ಮಾರ್ಗವನ್ನು ಹೊಂದಿಸುವುದು ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಸೂಪರ್ ಓಡಿಸಿ ಸಾಗಣೆ ಸಂಸ್ಥೆಯ ನುರಿತ ಸಿಬ್ಬಂದಿ ಸೂಕ್ತ ಯೋಜನೆ ಹಾಗೂ ತಾಂತ್ರಿಕ ವ್ಯವಸ್ಥೆಗಳ ನೆರವಿನಿಂದ ಈ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.ಬೃಹತ್ ಉಪಕರಣದ ಸಾಗಣೆಗೆ ಅನುಕೂಲವಾಗುವಂತೆ ಕಾರವಾರ ನಗರದ ವಿವಿಧೆಡೆ ರಸ್ತೆಗೆ ಅಡ್ಡಲಾಗಿದ್ದ ವಿದ್ಯುತ್ ತಂತಿಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿತ್ತು. ಇದರಿಂದ ನಗರದ ಹಲವು ಭಾಗಗಳಲ್ಲಿ ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದರು. ಮತ್ತೊಂದೆಡೆ, ಸವಿತಾ ವೃತ್ತದಿಂದ ಹಬ್ಬುವಾಡ ಹಾಗೂ ಬಾಂಡಿಶಿಟ್ಟಾ ರಸ್ತೆಯವರೆಗೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಟ್ರಾಫಿಕ್ ಸಮಸ್ಯೆಯೂ ಎದುರಾಯಿತು.ಕಾರವಾರ ನಗರದ ರಸ್ತೆಯಲ್ಲಿ ಎರಡನೇ ಬಾರಿಗೆ ಇಂತಹ ಬೃಹತ್ ಯಂತ್ರೋಪಕರಣ ಸಾಗಾಟ ನಡೆದಿರುವುದು ಸಾರ್ವಜನಿಕರ ಗಮನ ಸೆಳೆಯಿತು. ಬೃಹತ್ ವಾಹನ ರಸ್ತೆ ಮೂಲಕ ಸಾಗುತ್ತಿದ್ದ ದೃಶ್ಯವನ್ನು ನೋಡಲು ಜನರು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದರು. ಹಲವರು ತಮ್ಮ ಮೊಬೈಲ್‌ಗಳಲ್ಲಿ ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದರು.ಸಾಗಾಟದ ವೇಳೆ ಹಲವು ತಾಂತ್ರಿಕ ಹಾಗೂ ಭೌಗೋಳಿಕ ಸವಾಲುಗಳು ಎದುರಾದರೂ ಸೂಕ್ತ ಯೋಜನೆಯೊಂದಿಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಡಿ.ಕೆ. ಪಾಂಡ್ಯ ತಿಳಿಸಿದ್ದು, ಕಾರವಾರ ನಗರದಲ್ಲಿ ಸುಗಮ ಸಾಗಾಟಕ್ಕೆ ಸಹಕರಿಸಿದ ಜಿಲ್ಲಾಡಳಿತ, ವಿದ್ಯುತ್ ಇಲಾಖೆ ಹಾಗೂ ಸಾರ್ವಜನಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.