ಕೊಪ್ಪಳ: ಕಲೆ ಮತ್ತು ಸಂಸ್ಕೃತಿಯು ಮನುಷ್ಯನ ಬದುಕಿನಲ್ಲಿ ಉತ್ಸಾಹ, ಸಂತಸ ಹಾಗೂ ನೆಮ್ಮದಿ ಮೂಡಿಸುವುದರ ಜತೆಗೆ ಜೀವನ ಅರ್ಥಪೂರ್ಣವಾಗಿಸಿ ಆಯುಷ್ಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.
ನಮ್ಮ ನಾಡಿನ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕಲೆ ಮನುಷ್ಯನ ಮನಸ್ಸಿಗೆ ನೆಮ್ಮದಿ ನೀಡುವ ಶಕ್ತಿ ಹೊಂದಿದ್ದು, ಕಲೆಯೊಂದಿಗೆ ಬದುಕುವವರು ಆರೋಗ್ಯಕರ ಹಾಗೂ ಸಂತಸದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಕರಾವಳಿ ಭಾಗದ ಜನರ ಜೀವನಶೈಲಿ, ಸಂಸ್ಕೃತಿ ಹಾಗೂ ಶಿಸ್ತನ್ನು ಶ್ಲಾಘಿಸಿದ ಅವರು, ಕರಾವಳಿಯ ಜನರಲ್ಲಿ ಶಿಸ್ತು, ಸಮಯಪ್ರಜ್ಞೆ ಹಾಗೂ ಸಂಘಟನಾ ಮನೋಭಾವ ಗಮನಾರ್ಹವಾಗಿದೆ. ಅಲ್ಲಿನ ಕಲೆ, ಜಾನಪದ ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳು ಕರ್ನಾಟಕದ ಹೆಮ್ಮೆಯಾಗಿವೆ ಎಂದು ಹೇಳಿದರು.ಯುವಜನತೆ ಆಧುನಿಕತೆಯೊಂದಿಗೆ ನಮ್ಮ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು. ಕಲೆ ಕೇವಲ ಮನರಂಜನೆಯ ಸಾಧನವಲ್ಲ, ಅದು ಸಮಾಜವನ್ನು ಒಗ್ಗೂಡಿಸುವ ಹಾಗೂ ಉತ್ತಮ ಮೌಲ್ಯ ಬೆಳೆಸುವ ಶಕ್ತಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರಾವಳಿ ಬಳಗದ ಗೌರವಾಧ್ಯಕ್ಷ ಜೀವನ್ ಶೆಟ್ಟಿ ಹಾಗೂ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ, ಹಾಲಾಡಿಯ ಭಾಗವತ ರಾಘವೇಂದ್ರ ಮಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.