ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಯಕ್ಷಗಾನ ಕಲಾರಂಗದ ಆಶ್ರಯದಲ್ಲಿ ನಿರ್ಮಿಸಲಾಗಿರುವ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ಮೆಂಟ್ ಟ್ರೈನಿಂಗ್ - ರಿಸರ್ಚ್ ಸೆಂಟರ್ (ಐವೈಸಿ) ನೂತನ ಕಟ್ಟಡವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು, ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥರು, ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥರು ಜಂಟಿಯಾಗಿ ಭಾನುವಾರ ಲೋಕಾರ್ಪಣೆಗೊಳಿಸಿದರು.ನಂತರ ಆಶೀರ್ವಚನ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು, ಯಾರಿಂದ ಹತ್ತು ಮಂದಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೋ ಅವರದ್ದೇ ನಿಜವಾದ ಬದುಕು. ಯಾವುದೇ ಕೆಲಸ ಕಾರ್ಯಗಳು ಸಮಾಜಕ್ಕೆ ಉಪಯೋಗವಾಗಬೇಕು. ಅದೇ ರೀತಿ ಈ ನೂತನ ಮಂದಿರ ಸಮಾಜಕ್ಕೆ ಹತ್ತಿರವಾಗಿ ಬೆಳೆಯಲಿ ಎಂದು ಹರಸಿದರು.
ಸಭಾಂಗಣ ಉದ್ಘಾಟಿಸಿದ ಇನ್ಫೋಸಿಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸುನೀಲ್ ಕುಮಾರ್ ಧಾರೇಶ್ವರ್ ಮಾತನಾಡಿ, ಆಧುನಿಕ ಯುಗದಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಅನೇಕ ಸವಾಲುಗಳು ಎದುರಾಗಿದೆ. ಜೊತೆಗೆ ಕ್ಷೀಣಿಸುತ್ತಿರುವ ಕಲಾ ಪೋಷಕರಿಂದಾಗಿ ಸಂಪದ್ಭರಿತ ಕಲೆಗೆ ಆಪತ್ತು ಎದುರಾಗಿದೆ. ಕಲೆ ಮತ್ತು ಕಲಾಪೋಷಣೆ ಒಟ್ಟಿಗೆ ಹೆಜ್ಜೆ ಹಾಕಿದಾಗ ಅದು ಉಳಿಯುತ್ತದೆ. ಉಳಿಸಿ, ಬೆಳೆಸುವ ಜವಾಬ್ದಾರಿಯನ್ನು ನಾವೆಲ್ಲರೂ ನಿರ್ವಹಿಸಬೇಕು ಎಂದರು.ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್, ಉದ್ಯಮಿ ರಮೇಶ್ಚಂದ್ರ ಹೆಗ್ಡೆ, ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ. ಬೀ. ವಿಜಯ್ ಬಲ್ಲಾಳ್ ಇದ್ದರು.
ಯಕ್ಷ ಕಲಾರಂಗದ ಅಧ್ಯಕ್ಷ ಗಂಗಾಧರ್ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು.ಸಭಾ ಕಾರ್ಯಕ್ರಮ ಆರಂಭಕ್ಕೂ ಮುನ್ನ ಗಜಮುಖನಿಗೆ ನರ್ತನ ಸೇವೆ ನಡೆಯಿತು. ಯಕ್ಷಗಾನ ಕಿರೀಟದ ಬೆಳ್ಳಿಯ ಪ್ರತಿಕೃತಿಯನ್ನು ಇನ್ಫೋಸಿಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸುನೀಲ್ ಕುಮಾರ್ ಧಾರೇಶ್ವರ್, ಡಾ.ಎಚ್.ಎಸ್.ಬಲ್ಲಾಳ್, ಡಾ. ಜಿ.ಶಂಕರ್, ರಮೇಶ್ಚಂದ್ರ ಹೆಗ್ಡೆ ಅವರಿಗೆ ಯತಿತ್ರಯರು ನೀಡಿ ಗೌರವಿಸಿದರು.
..............ಫಲವನ್ನು ಬಯಸದೆ ಕೆಲಸ ಮಾಡಿದಾಗ, ದೇವರೇ ಫಲವನ್ನು ಕೊಡುತ್ತಾನೆ ಎಂಬುದಕ್ಕೆ ಯಕ್ಷ ಕಲಾರಂಗ ಉತ್ತಮ ನಿದರ್ಶನ. ಕೋಟಿ ಹಣವನ್ನು ಠೇವಣಿ ಇಟ್ಟುಕೊಂಡು ಸಮಾಜಕ್ಕೆ ಸೇವೆ ನೀಡುವ ಸಂಸ್ಥೆಗಳ ನಡುವೆ, ಸೇವೆ ನೀಡುವ ಕಾಲಕ್ಕೆ ದೇವರೇ ನಾನಾ ರೂಪದಲ್ಲಿ ಹಣವನ್ನು ಒದಗಿಸುವ ಏಕೈಕ ಸಂಸ್ಥೆ ಯಕ್ಷಗಾನ ಕಲಾರಂಗ. ಯಕ್ಷಗಾನ ಕಲಾರಂಗ ದಾನಿಗಳನ್ನು ಹುಡುಕುವ ಅವಶ್ಯಕತೆ ಇಲ್ಲ. ದಾನಿಗಳೇ ಯಕ್ಷಗಾನ ಕಲಾರಂಗಕ್ಕೆ ಸರತಿ ಸಾಲಿನಲ್ಲಿ ನಿಂತು ದಾನವನ್ನು ನೀಡುತ್ತಿದ್ದಾರೆ. ಇದು ಈ ಸಂಸ್ಥೆಯ ಪ್ರಾಮಾಣಿಕತೆ ಸಾಕ್ಷಿಯಾಗಿದೆ.
। ಶ್ರೀ ವಿಶ್ವವಲ್ಲಭತೀರ್ಥರು, ಸೋದೆ ಮಠ--------
ಇತಿಹಾಸ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಪುರಾತನ ಕಾಲದ ಸಾಮಾಜಿಕ, ರಾಜಕೀಯ ಎಲ್ಲವು ಒಂದೇ ವೇದಿಕೆಯಲ್ಲಿ ಇಂದಿನ ಯುವ ಪೀಳಿಗೆಗೆ ತಿಳಿಸಿಕೊಡುವ ಏಕೈಕ ಮಾಧ್ಯಮ ಯಕ್ಷಗಾನ. ಸತತ ಪರಿಶ್ರಮದಿಂದ ಸಾಧನೆ ಸಿಗುತ್ತದೆ ಎಂಬುದಕ್ಕೆ ಯಕ್ಷಗಾನ ಕಲಾರಂಗ ಸಂಸ್ಥೆಯೇ ಉದಾಹರಣೆ. ಈ ಸಂಸ್ಥೆಯಿಂದ ಯಕ್ಷಗಾನವನ್ನು ಅನೇಕ ಯುವಪೀಳಿಗೆಗೆ ಅಭ್ಯಸಿಸುತ್ತಿದ್ದು, ಇವರ ಸೇವೆಗೆ ದೇವರು ಒಳ್ಳೆಯದು ಮಾಡಲಿ.। ಶ್ರೀ ಈಶಪ್ರಿಯತೀರ್ಥರು, ಅದಮಾರು ಮಠ