ಬೆಳೆ ಹಾನಿ ಪರಿಹಾರ ಮತ್ತು ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ತಡೆಗಟ್ಟಲು, ಸರ್ಕಾರವು ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿದೆ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು :ಬೆಳೆ ಹಾನಿ ಪರಿಹಾರ, ಕನಿಷ್ಟ ಬೆಂಬಲ ಬೆಲೆ ಯೋಜನೆಯ ದುರ್ಬಳಕೆ ತಡೆಯಲು ಮುಂದಾಗಿರುವ ರಾಜ್ಯ ಸರ್ಕಾರ, ಪ್ರಸಕ್ತ ಸಾಲಿನಿಂದ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಟೂಲ್ ಅಳವಡಿಸಿದೆ. ಇದರಿಂದಾಗಿ ಇನ್ನು ಮುಂದೆ ಸಮೀಕ್ಷೆಯಲ್ಲಿ ‘ಕಳ್ಳಾಟ’ಕ್ಕೆ ಅವಕಾಶವಿಲ್ಲ ಎನ್ನಲಾಗುತ್ತಿದೆ.
ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯದಿದ್ದರೂ ಅಥವಾ ಬೇರೊಂದು ಬೆಳೆ ಬೆಳೆದಿದ್ದರೂ ಇದನ್ನು ಮರೆಮಾಚಿ ಅತಿವೃಷ್ಟಿ-ಅನಾವೃಷ್ಟಿ ಸಂದರ್ಭದಲ್ಲಿ ಕೋಟ್ಯಂತರ ರುಪಾಯಿ ನಕಲಿ ಪರಿಹಾರ ಪಡೆದ ಪ್ರಕರಣಗಳು ರಾಜ್ಯದ ಹಲವೆಡೆ ವರದಿಯಾಗಿದ್ದವು. ವಿಧಾನ ಮಂಡಲ ಅಧಿವೇಶನದಲ್ಲೂ ಈ ವಿಷಯ ಸದ್ದು ಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಬೆಳೆ ಸಮೀಕ್ಷೆಯನ್ನು ನಿಖರವಾಗಿಸಲು ಕ್ರಮ ಕೈಗೊಂಡಿದೆ.
ಮೊಬೈಲ್ ಆ್ಯಪ್ ಮೂಲಕ ರೈತರು ಅಥವಾ ಪಿ.ಆರ್.(ಸಮೀಕ್ಷೆಗೆ ನೇಮಕವಾದ ಸ್ಥಳೀಯರು)ಗಳು ಪ್ರತಿ ವರ್ಷ ಪೂರ್ವ ಮುಂಗಾರು, ಮುಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆಗಳ ಸಮೀಕ್ಷೆ ಕೈಗೊಳ್ಳಬಹುದಾಗಿದ್ದು, ಪ್ರತಿಯೊಂದು ಜಮೀನಿನ ಫೋಟೋ ಅಪ್‌ಲೋಡ್ ಮಾಡಬೇಕು. ಆದರೆ ಬೆಳೆ ಬೆಳೆಯದಿದ್ದರೂ ಪಕ್ಕದ ಜಮೀನಿನ ಬೆಳೆಯ ಫೋಟೋ ತೆಗೆದು ಬಳಿಕ ಬೆಳೆ ಬೆಳೆಯದಿದ್ದ ಜಮೀನಿಗೆ ಆಗಮಿಸಿ ಆ್ಯಪ್‌ಗೆ ಜಿಯೋ ಟ್ಯಾಗ್ ಫೋಟೋ ಅಪ್‌ಲೋಡ್ ಮಾಡುವುದು, ಫೋಟೋಗಳ ಫೋಟೋ ತೆಗೆದು ಅಪ್‌ಲೋಡ್ ಮಾಡಲಾಗುತ್ತದೆ ಎಂಬ ಆರೋಪ ಕೇಳಿಬಂದಿತ್ತು.
ಸಮೀಕ್ಷೆಯ ನಿಖರತೆ ಹೇಗೆ?: ಆದರೆ ಈಗ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್(ಎಐ) ಟೂಲ್ ಅಳವಡಿಸಲಾಗಿದೆ. ಹೀಗಾಗಿ 30 ರಿಂದ 150 ಡಿಗ್ರಿ ಒಳಗೆ ತೆಗೆದ ಫೋಟೋಗಳನ್ನು ಮಾತ್ರ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಇಲ್ಲದಿದ್ದರೆ ಅಂತಹ ಫೋಟೋಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಫೋಟೋಗಳಲ್ಲಿ ಸ್ಪಷ್ಟತೆ ಇರದಿದ್ದರೂ ಸಹ ಅಂತಹ ಫೋಟೋಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಕೆಲವರು ಮುಸ್ಸಂಜೆ ಅಥವಾ ರಾತ್ರಿ ಸಮಯದಲ್ಲಿ ಬೆಳೆ ಇಲ್ಲದಿದ್ದರೂ ಫೋಟೋ ತೆಗೆದು ಅಪ್‌ಲೋಡ್ ಮಾಡುತ್ತಿದ್ದರು. ಇದಕ್ಕೆ ಇನ್ನು ಮುಂದೆ ‘ಬ್ರೇಕ್’ ಬೀಳಲಿದೆ.
ಸಮೀಕ್ಷೆ ಯಾವುದಕ್ಕೆಲ್ಲಾ ಬಳಕೆ?: ಬೆಳೆಗಳ ವಿಸ್ತೀರ್ಣದ ಲೆಕ್ಕಹಾಕಲು, ಬೆಳೆ ಕಟಾವು ಪ್ರಯೋಗ ಕೈಗೊಳ್ಳಲು, ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಅಡಿ ಬೆಳೆ ಹಾನಿ ಪರಿಹಾರ ಪಾವತಿಸಲು, ಬೆಳೆ ವಿಮೆ ಪಾವತಿಗೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯ ಪ್ರಯೋಜನಕ್ಕೆ, ಪಹಣಿಯಲ್ಲಿ ಬೆಳೆ ವಿವರ ನಮೂದಿಸಲು, ರೈತರಿಗೆ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಮಂಜೂರು ಮಾಡಲು ಸೇರಿದಂತೆ ಹಲವು ಮಹತ್ತರ ಕಾರ್ಯಗಳಿಗೆ ಬೆಳೆ ಸಮೀಕ್ಷೆ ಅತ್ಯಗತ್ಯವಾಗಿದೆ.
ಸಮೀಕ್ಷೆ ಆ್ಯಪ್‌ನಲ್ಲಿ ಬದಲಾವಣೆ ಏಕೆ?: ಬೆಳೆ ಹಾನಿ ಪರಿಹಾರ ವಿತರಣೆ ಸಂದರ್ಭದಲ್ಲಿ ಬೆಳೆ ಸಮೀಕ್ಷೆ ಕೈಗೊಂಡಿರುವುದನ್ನು ಪ್ರಮುಖವಾಗಿ ಪರಿಗಣಿಸಲಿದ್ದು ಆಯಾ ಬೆಳೆ, ವಿಸ್ತೀರ್ಣದ ಆಧಾರದಲ್ಲಿ ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಪರಿಹಾರದ ಹಣ ಪಾವತಿಸಲಾಗುತ್ತದೆ. ಆದರೆ ಕೆಲವೆಡೆ ಬೆಳೆ ಬೆಳೆಯದಿದ್ದರೂ, ಪಾಳುಬಿದ್ದ ಜಮೀನುಗಳಿಗೂ ಪರಿಹಾರ ಪಡೆದ ನಿದರ್ಶನ ಕಂಡುಬಂದಿದ್ದವು. ಕನಿಷ್ಠ ಬೆಂಬಲ ಬೆಲೆ ಯೋಜನೆಯೂ ದುರುಪಯೋಗವಾಗಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
ಬೆಳೆ ಸಮೀಕ್ಷೆಯಲ್ಲಿ ನಡೆಯುತ್ತಿದ್ದ ಅಕ್ರಮ ತಡೆಗಟ್ಟಲು ಸಮೀಕ್ಷೆ ಆ್ಯಪ್‌ನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್(ಎಐ) ಟೂಲ್ ಅಳವಡಿಸಲಾಗಿದೆ. ಫೋಟೋ ಸ್ಪಷ್ಟವಾಗಿದ್ದು, 30 ರಿಂದ 150 ಡಿಗ್ರಿ ಒಳಗೆ ತೆಗೆದಿದ್ದರೆ ಮಾತ್ರ ಅಪ್‌ಲೋಡ್ ಮಾಡಬಹುದು. ಇಲ್ಲದಿದ್ದರೆ ಫೊಟೋ ಅಪ್‌ಲೋಡ್ ಆಗುವುದಿಲ್ಲ.
। ವೈ.ಎಸ್.ಪಾಟೀಲ್, ಕೃಷಿ ಇಲಾಖೆ ಆಯುಕ್ತ