- ಕೊಂಕಲ್‌ನಲ್ಲಿ ಚಿತ್ರಕಲಾ ನೈಪುಣ್ಯತೆ ತರಬೇತಿ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಯಾದಗಿರಿ
ಚಿತ್ರಕಲೆ ಎಂಬುದು ಮಕ್ಕಳ ಮನಸ್ಸಿನ ಆನಂದದ ಅಭಿವ್ಯಕ್ತಿ. ಮಕ್ಕಳಲ್ಲಿ ಕಲಾ ಪ್ರತಿಭೆ ಇದ್ದೇ ಇರುತ್ತದೆ. ಆದರೆ, ಪ್ರೋತ್ಸಾಹದ ಕೊರತೆಯಿಂದ ಮಕ್ಕಳು ಅನ್ಯಮಾರ್ಗ ಹಿಡಿದು ಬದುಕಲ್ಲಿ ಕೆಲವೊಮ್ಮೆ ಗುರಿ ತಪ್ಪಿ ವಾಮ ಮಾರ್ಗ ಹಿಡಿದು ಹಾಳಾಗುತ್ತಾರೆ. ಆದರೆ, ಚಿತ್ರಕಲೆಯಂತಹ ಸೃಜನಾತ್ಮಕ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದಿದಲ್ಲಿ ರಾಜಾ ರವಿವರ್ಮ, ಎಸ್. ಎಂ. ಪಂಡಿತರಂತಹ ಶ್ರೇಷ್ಠ ಕಲಾವಿದರಾಗಲು ಸಾಧ್ಯವಿದೆ ಎಂದು ಖ್ಯಾತ ಚಿತ್ರಕಲಾವಿದ ವಿ. ಬಿ. ಬಿರಾದಾರ ಅಭಿಮತ ವ್ಯಕ್ತಪಡಿಸಿದರು.ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ "ಬೆಳೆವ ಕಲಾಸಿರಿ ಮೊಳಕೆಯಲ್ಲಿ ನೋಡು " ಎಂಬ ಶೀರ್ಷಿಕೆಯಡಿ, ಜಿಲ್ಲೆಯ ವಡಗೇರಾ ತಾಲೂಕಿನ ಕೊಂಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಚಿತ್ರಕಲಾ ನೈಪುಣ್ಯತೆ ತರಬೇತಿ ಕಾರ್ಯಾಗಾರ, ಭಾವಚಿತ್ರ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಬೆಂಗಳೂರು ಕೇಂದ್ರ ಸ್ಥಾನ ಮತ್ತು ಕರ್ನಾಟಕದ ಪ್ರಮುಖ ನಗರಗಳನ್ನೇ ಆವರಿಸಿಕೊಂಡು ಕಲಾಕಾರ್ಯ ಚಟುವಟಿಕೆಗಳನ್ನು ರೂಪಿಸುವ ಸಂದರ್ಭದಲ್ಲಿ ಈ ಕಾರ್ಯಕ್ರಮ ಗ್ರಾಮಮಟ್ಟಕ್ಕೂ ತಲುಪಿದ್ದು ಅತ್ಯಂತ ಸಂತೋಷದ ಸಂಗತಿ ಎಂದ ಬಿರಾದರ್, ಗ್ರಾಮಗಳು ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿರುತ್ತವೆ ಎಂದರು.
ಬಸವರಾಜ ಪಾಟೀಲ ಕೋದಂಡ ಮಾತನಾಡಿ, ಡಾ. ಬಸವರಾಜ ಕಲೆಗಾರ ನಮ್ಮ ಊರಿನ ಪ್ರತಿಭೆ, ಇಂದು ರಾಜ್ಯ ಮಟ್ಟದಲ್ಲಿ ಉತ್ತಮ ಹೆಸರು ಮಾಡಿ, ರಾಜ್ಯ ಸರ್ಕಾರದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ ಉತ್ತಮ ಸೇವೆ ಸಲ್ಲಿಸುವುದರೊಂದಿಗೆ ಯಾದಗಿರಿ ಜಿಲ್ಲೆಯ ಅನೇಕ ಪ್ರತಿಭಾವಂತರಿಗೆ ಅಕಾಡೆಮಿಯ ಗೌರವ ಹಾಗೂ ಉತ್ತಮ ಅವಕಾಶಗಳನ್ನು ಕಲ್ಪಿಸಿದ್ದಾರೆ ಎಂದು ಹೇಳಿದರು.
ಪ್ರೊ. ವೆಂಕಣ್ಣ ಡೊಣ್ಣೆಗೌಡರ ಅವರು ಮಾತನಾಡಿ, ಸುರಪುರ ಗರುಡಾದ್ರಿ ಚಿತ್ರಕಲೆ ನಮ್ಮ ನೆಲದ ಕಲೆ ಮಾತ್ರ ಆಗದೇ, ಇಡೀ ವಿಶ್ವದ ಕಲಾವಂತರೂ ಬಹು ಮೆಚ್ಚುವಂತಹ ಶ್ರೇಷ್ಠ ಕಿರು ರೂಪ ಕಲೆಯಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.
ತಾ.ಪಂ ಅಧಿಕಾರಿಗಳಾದ ಶಶಿಧರ ಹಿರೇಮಠ, ಶಾಲಾ ಮುಖ್ಯಗುರುಗಳಾದ ಶರಣಪ್ಪ ಶಿರಶ್ಯಾಡಿ, ಶರಣಪ್ಪ ತೆಲಗರ ಇದ್ದರು.
ಶಾಲಾ ಅಂಗಳ ತುಂಬಾ ಮಕ್ಕಳು ಹಾಗೂ ಊರಿನ ಜನತೆಯ ನಡುವೆ ಕಲಾವಿದರಾದ ಹಣಮಂತ ತಳವಾರ, ವಿ. ಬಿ. ಬಿರಾದಾರ, ಶ್ರೀಶೈಲ ಗುಡೇದ ಅವರಿಂದ ಭಾವಚಿತ್ರ ರಚನಾ ಕಾರ್ಯಾಗಾರ ನಡೆಯಿತು. ಮುಖ್ಯ ಶಿಕ್ಷಕಿಯಾದ ರಂಜಿತಾ ಅವರನ್ನು ಮುಂದೆ ಕೂಡಿಸಿಕೊಂಡು ಅವರ ಭಾವಚಿತ್ರವನ್ನು ರಚಿಸಿದರು. ಹಣಮಂತ ತಳವಾರ ಅವರು ಪರಿಶಿಷ್ಟ ಪಂಗಡದ 50 ಮಕ್ಕಳಿಗೆ ನಿಸರ್ಗ ಚಿತ್ರ ರಚಿಸುವ ಬಗೆ ವಿವರಿಸಿ ಹೇಳಿದರು.
-
29ವೈಡಿಆರ್1 : ಕೊಂಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ, ರಾಜ್ಯ ಲಲಿತಕಲಾ ಅಕಾಡೆಮಿ ವತಿಯಿಂದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಚಿತ್ರಕಲಾ ನೈಪುಣ್ಯತೆ ತರಬೇತಿ ಕಾರ್ಯಾಗಾರ, ಭಾವಚಿತ್ರ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಿ ಪ್ರಮಾಣ ಪತ್ರ ಪಡೆದು ಸಂಭ್ರಮಿಸಿದರು.-
29ವೈಡಿಆರ್2 :ರಾಜ್ಯ ಲಲಿತಕಲಾ ಅಕಾಡೆಮಿ ವತಿಯಿಂದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಚಿತ್ರಕಲಾ ನೈಪುಣ್ಯತೆ ತರಬೇತಿ ಕಾರ್ಯಾಗಾರದಲ್ಲಿ ಶಾಲಾ ಅಂಗಳ ತುಂಬಾ ಮಕ್ಕಳು ಹಾಗೂ ಊರಿನ ಜನತೆಯ ನಡುವೆ ಕಲಾವಿದರಾದ ಹಣಮಂತ ತಳವಾರ, ವಿ. ಬಿ. ಬಿರಾದಾರ, ಶ್ರೀಶೈಲ ಗುಡೇದ ಅವರಿಂದ ಭಾವಚಿತ್ರ ರಚನಾ ಕಾರ್ಯಾಗಾರ ನಡೆಯಿತು. ಶಿಕ್ಷಕಿಯಾದ ರಂಜಿತಾ ಅವರನ್ನು ಮುಂದೆ ಕೂಡಿಸಿಕೊಂಡು ಅವರ ಭಾವಚಿತ್ರವನ್ನು ರಚಿಸಿದರು.