ಗದಗ: ಮಾನವೀಯ ಮೌಲ್ಯ, ಸಮಾಜದಲ್ಲಿ ಸಾಮರಸ್ಯ ಹಾಗೂ ಸಹಬಾಳ್ವೆ ಬೋಧಿಸುವ ಲಾವಣಿ ಹಾಗೂ ಗೀ ಗೀ ಪದಗಳ ಕಲೆ ಉಳಿಸಿ ಬೆಳೆಸುವ ಕೆಲಸವಾಗಬೇಕು. ಇಂದಿನ ಯುವ ಕಲಾವಿದರು ನಮ್ಮ ನಾಡಿನ ಮೂಲ ಕಲೆಗಳಲ್ಲೊಂದಾದ ಲಾವಣಿ ಹಾಗೂ ಗೀಗೀ ಪದ ಕಲೆಯ ಬಗ್ಗೆ ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾ. ಡಾ. ಜಿ.ಬಿ. ಪಾಟೀಲ ಹೇಳಿದರು.
ಉಚಿತ ವಸತಿ, ಊಟೋಪಚಾರದೊಂದಿಗೆ ನೀಡಲಿರುವ ಲಾವಣಿ ಹಾಗೂ ಗೀಗೀ ಪದಗಳ ತರಬೇತಿ ಶಿಬಿರದಲ್ಲಿ ಉದಯೋನ್ಮುಖ ಕಲಾವಿದರು ತರಬೇತಿ ಪಡೆದು, ತಂಡ ಕಟ್ಟಿಕೊಂಡು ಕಲೆ ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ತರಬೇತಿ ಹಾಗೂ ವಿಚಾರ ಸಂಕೀರಣದೊಂದಿಗೆ ಜಿಲ್ಲೆಯ ಗ್ರಾಮೀಣ ಸ್ಥಳವೊಂದರಲ್ಲಿ ಗೀಗೀ ಪದ ಕಾರ್ಯಕ್ರಮ ಆಯೋಜಿಸುವ ಮೂಲಕ ಜಾನಪದ ವಾತಾವರಣ ನಿರ್ಮಾಣ ಮಾಡೋಣ ಎಂದರು.ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಶಂಕ್ರಣ್ಣ ಸಂಕಣ್ಣವರ ಮಾತನಾಡಿ, ಅಕಾಡೆಮಿಯಿಂದ ಉದಯೋನ್ಮುಖ ಕಲಾವಿದರಿಗೆ ಲಾವಣಿ, ಗೀಗೀ ಪದಗಳ ತರಬೇತಿ ನೀಡುವ ಒಂದು ಒಳ್ಳೆಯ ಅವಕಾಶ ಒದಗಿದ್ದು, ಎಲ್ಲರ ಸಹಕಾರದಿಂದ ಈ ಕಾರ್ಯ ಯಶಸ್ವಿಗೊಳಿಸೋಣ ಎಂದರು.