ಪರ್ಕಳ: ಮೊಬೈಲ್ ಬಳಕೆಯಿಂದಾಗಿ ನಕಾರಾತ್ಮಕ ಮನೋಭಾವ ಬೇರುಬಿಟ್ಟು, ಮಕ್ಕಳನ್ನು ಪ್ರಗತಿ ಪಥದಿಂದ ತಪ್ಪು ದಾರಿಯತ್ತ ಸರಿಸುವ ಅಪಾಯ ಹೆಚ್ಚಾಗಿದೆ. ಹದಿಹರೆಯ ಪ್ರವೇಶಿಸುವಷ್ಟರಲ್ಲಿ ಹಲವು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ದಿಕ್ಕು ತಪ್ಪಿದ ಮಕ್ಕಳನ್ನು ಹೊರತರುವ ಶಕ್ತಿ ಚಿತ್ರಕಲೆ, ಸಂಗೀತ, ಕ್ರೀಡೆ ಹಾಗೂ ಇತರೆ ಸೃಜನಾತ್ಮಕ ಹವ್ಯಾಸಗಳಿಗಿದೆ. ಅವು ನಕಾರಾತ್ಮಕತೆಯನ್ನು ಸಕಾರಾತ್ಮಕ ಶಕ್ತಿಯಾಗಿ ಪರಿವರ್ತಿಸುತ್ತವೆ ಎಂದು ಡಾ. ಎ.ವಿ. ಬಾಳಿಗಾ ಆಸ್ಪತ್ರೆ, ದೊಡ್ಡಣಗುಡ್ಡೆಯ ವೈದ್ಯಕೀಯ ಅಧೀಕ್ಷಕ ಹಾಗೂ ಖ್ಯಾತ ಮನೋವೈದ್ಯ ಡಾ. ಪಿ. ವೆಂಕಟ್ರಾಯ ಭಂಡಾರಿ ಹೇಳಿದ್ದಾರೆ.
ಮಣಿಪಾಲದ ಚಿತ್ರ ಕಲಾವಿದ ಸತೀಶ್ಚಂದ್ರ ಒಂದೇ ಗಂಟೆಯಲ್ಲಿ ರಚಿಸಿದ ಅದ್ಭುತ ಜಲವರ್ಣ ಕಲಾಕೃತಿಯು ಪ್ರೇಕ್ಷಕರ ಹೃದಯ ಗೆದ್ದಿತು.ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಮಣಿಪಾಲ, ಉಡುಪಿ ಆರ್ಟಿಸ್ಟ್ಸ್ ಫೋರಂ ಕಾರ್ಯದಶಿ೯ ಸಕು ಪಾಂಗಾಳ, ಪರ್ಕಳ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ ಹಾಗೂ ಬೆಂಗಳೂರು ಗ್ಲೋಬಲ್ ಎಡ್ಜ್ ಸಾಫ್ಟ್‌ವೇರ್ ಕಂಪನಿಯ ತಾರಾ ಶಶಾಂಕ್ ಅವರು ಮುಖ್ಯ ಅತಿಥಿಗಳಾಗಿದ್ದರು.
ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸ್ವಾಗತಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಮಹೇಶ್ ಪ್ರಭು ವಂದಿಸಿದರು. ಖಜಾಂಚಿ ರವೀಂದ್ರ ಆಚಾರ್ಯ ಬಹುಮಾನ ವಿತರಣೆ ನಿರ್ವಹಿಸಿದರು. ಸ್ಪರ್ಧೆಯಲ್ಲಿ ೩೫೦ ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.