ಹುಬ್ಬಳ್ಳಿ: ಕಳೆದ ಒಂದುವರೆ ತಿಂಗಳ ಹಿಂದೆಯಷ್ಟೇ ಹತ್ಯೆಯಾದ ನೇಹಾ ಹಿರೇಮಠ ಹೆಸರಲ್ಲಿ ತಂದೆ ನಿರಂಜನಯ್ಯ ಹಿರೇಮಠ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಆದಕಾರಣ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಪ್ರಮಾಣ ಪತ್ರ ರದ್ದುಪಡಿಸಬೇಕು ಎಂದು ಸಮತಾ ಸೇನೆ ಒತ್ತಾಯಿಸಿದೆ. ಈ ನಡುವೆ ಬೇಡ ಜಂಗಮ ಜಾತಿಗೆ ಸೇರಿದ್ದು, ನ್ಯಾಯಬದ್ಧವಾಗಿಯೇ ಜಾತಿ ಪ್ರಮಾಣ ಪತ್ರ ಪಡೆದಿದ್ದೇವೆ. ಯಾವುದೇ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿಲ್ಲ ಎಂದು ನಿರಂಜನಯ್ಯ ಹಿರೇಮಠ ಸ್ಪಷ್ಟಪಡಿಸಿದ್ದಾರೆ.
ನೇಹಾ ಹಿರೇಮಠ ಹೆಸರಲ್ಲಿ ಬೆಂಗಳೂರು ವಿಳಾಸದಲ್ಲಿ ವಾಸವಾಗಿರುವಂತೆ ಬೇಡ ಜಂಗಮ ಎಂದು ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆಯಲಾಗಿದೆ. ಆದರೆ ನಿರಂಜನಯ್ಯ ಹಿರೇಮಠ ಹುಬ್ಬಳ್ಳಿ ನಿವಾಸಿಯಾಗಿದ್ದಾರೆ. ಬೆಂಗಳೂರು ವಿಳಾಸದಿಂದ ಪಡೆದಿದ್ದು ಏಕೆ? ಎಂದು ಪ್ರಶ್ನಿಸಿರುವ ಸಮತಾ ಸೇನೆಯು, ಜತೆಗೆ ಲಿಂಗಾಯತ ಸಮುದಾಯದ ಗುರುಗಳ ಸ್ಥಾನದಲ್ಲಿದ್ದಾರೆ. ಆದರೂ ಎಸ್ಸಿ ಪ್ರಮಾಣ ಪತ್ರ ಪಡೆದಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಜಾತಿ ಪ್ರಮಾಣ ಪತ್ರವನ್ನು ರದ್ದುಮಾಡಬೇಕು ಎಂದು ಸೇನೆಯ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸ್ಪಪ್ಟನೆ: ಈ ನಡುವೆ ನಿರಂಜನಯ್ಯ ಹಿರೇಮಠ ಮಾಧ್ಯಮಗಳೊಂದಿಗೆ ಮಾತನಾಡಿ, ನಾವು ಮೋಸ ಮಾಡಿ ಪ್ರಮಾಣ ಪತ್ರ ಪಡೆದಿಲ್ಲ. ಬೇಡ ಜಂಗಮ ಜಾತಿಗೆ ಸೇರಿದ್ದೇವೆ. ಕೇಂದ್ರ ಸರ್ಕಾರದ ನಿಯಮದಂತೆ ಎಸ್ಸಿ ಪ್ರಮಾಣ ಪತ್ರ ಪಡೆಯಲು ಅರ್ಹರು. ಕೇಂದ್ರ ಸರ್ಕಾರದ ಎಸ್ಸಿ ಜಾತಿಗೆ ಸೇರಿರುವ 103 ಜಾತಿಗಳ ಪಟ್ಟಿಯಲ್ಲಿ ಬೇಡ ಜಂಗಮ 19 ನೆಯ ಸ್ಥಾನದಲ್ಲಿದೆ. ಬೇಕಾದರೆ ಪರಿಶೀಲಿಸಬಹುದು. ಕರ್ನಾಟಕ ಸರ್ಕಾರವೇ ಕೊಟ್ಟಂತಹ ಪ್ರಮಾಣಪತ್ರ, ನಾವು ಯಾವುದೇ ರೀತಿ ಮೋಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈರಣ್ಣ ನಾಪತ್ತೆ ಆಗಿಲ್ಲ: ಇತ್ತೀಚಿಗೆ ಹತ್ಯೆಯಾಗಿರುವ ಅಂಜಲಿ ವಿಷಯದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ವಿಜಯ್ ಅಲಿಯಾಸ್ ಈರಣ್ಣ ನನ್ನ ಪಿಎ ಆಗಿರುವುದು ನಿಜ. ಆದರೆ ಆತ ನಾಪತ್ತೆಯಾಗಿಲ್ಲ ಎಂದು ನೇಹಾ ಹಿರೇಮಠ ತಂದೆಯೂ ಆಗಿರುವ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ವಿಜಯ ವಿರುದ್ಧ ಪ್ರಕರಣ ದಾಖಲಾಗಿದ್ದು ನಿಜ. ಆ ಕೇಸ್ ಕೋರ್ಟ್‌ನಲ್ಲಿ ನಡೆಯುತ್ತಿದೆ. ಆತ ಕೋರ್ಟ್‌ಗೂ ತಪ್ಪಿಸಿಲ್ಲ. ನಿರಂತರವಾಗಿ ಹೋಗುತ್ತಿದ್ದಾನೆ. ಅವನನ್ನು ಬಚಾವ್ ಮಾಡುವ ಪ್ರಯತ್ನವನ್ನೇನೂ ನಾನು ಮಾಡಿಲ್ಲ. ಆತ ಕಾಣೆಯೂ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಂಜಲಿ ಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಅಂಜಲಿ ಕುಟುಂಬದ ಪರವಾಗಿ ನಾನು ನಿಂತಿದ್ದೇನೆ; ನಿಲ್ಲುತ್ತೇನೆ ಎಂದರು.