ಕನ್ನಡಪ್ರಭ ವಾರ್ತೆ ಹಲಗೂರು
ಹಳ್ಳಿಗಳಲ್ಲಿ ಆಧುನಿಕತೆ ಬೆಳೆದಂತೆಲ್ಲ ನೆಮ್ಮದಿ, ಆತ್ಮೀಯತೆ, ಅನ್ಯೋನ್ಯತೆ ಕಣ್ಮರೆಯಾಗುತ್ತಿದೆ ಎಂದು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.ಹಂಡನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಸಿದ್ಧಿ ವಿನಾಯಕ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಗಳಲ್ಲಿ ಶುಭ ಕಾರ್ಯಗಳು, ದೇವರ ಕಾರ್ಯಗಳು ರಾಜಕೀಯ ಮೀರಿ ನಡೆಯಬೇಕು. ಹಳ್ಳಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸಬಾರದು ಎಂದರು.
ನಮ್ಮ ಬಾಲ್ಯದ ಬಗ್ಗೆ ನೆನೆಪು ಮಾಡಿಕೊಂಡರೆ ಈಗಲೂ ಭಾವುಕನಾಗಿದ್ದೇನೆ. ಈ ಹಿಂದೆ ಯಾವುದೇ ಸೌಲಭ್ಯ ಇರಲಿಲ್ಲ, ತಾಂತ್ರಿಕತೆ ಅನುಕೂಲಗಳು ಕಡಿಮೆ ಇದ್ದವು. ಆಗ ಎಲ್ಲರೂ ಪರಸ್ವರ ಅನ್ಯೋನ್ಯತೆ, ಪ್ರೀತಿ ವಿಶ್ವಾಸದಿಂದ ಬದುಕುತ್ತಿದ್ದರು. ಅಂತಹ ವಾತಾವರಣ ಇಲ್ಲವಾಗಿದೆ. ನಾವು ಸಂಕುಚಿತರಾಗುತ್ತಿದ್ದೇವೆ ಎಂದು ವಿಷಾದಿಸಿದರು.ಹಿಂದಿನ ದಿನಗಳಲ್ಲಿ ಯಾರ ಮನೆಯಲ್ಲಾದರೂ ಮದುವೆ ನಡೆದರೆ ಇಡೀ ಊರಿಗೆ ಊರೇ ನೆರೆದಿರುತ್ತಿತ್ತು. ಸೌದೆ ಒಡೆಯುವುದರಿಂದ ಮೊದಲುಗೊಂಡು ಚಪ್ಪರ ಹಾಕುವುದು, ಅಡುಗೆ ಮಾಡುವುದು, ಬಡಿಸುವುದು ಎಲ್ಲವನ್ನೂ ಊರಿನ ಜನರೇ ಮಾಡುತ್ತಿದ್ದರು. ಪಂಕ್ತಿಯಲ್ಲಿ ಕೂತು ಬೂಂದಿ ಪಾಯಸ ಸವಿಯುತ್ತಿದ್ದ ದಿನಗಳು ನನಗೆ ಇನ್ನೂ ನೆನಪಿವೆ ಎಂದರು.ಇಂದು ಗ್ರಾಮಗಳಲ್ಲಿ ಒಗ್ಗಟ್ಟು ಮುಖ್ಯ. ಯುವಕರಲ್ಲಿ ನನ್ನದೊಂದು ಮನವಿ ನೀವು ಯಾವುದೇ ಕುಟುಂಬದ ಸಮಸ್ಯೆಗಳಿಗೆ ಸ್ವ ಇಚ್ಛೆಯಿಂದ ಸ್ಪಂದಿಸಿ ಬಗೆಹರಿಸಲು ಕೈಜೋಡಿಸಿ. ಭಗವಂತ ನೀಡಿರುವ ಈ ಜೀವನವನ್ನು ಪ್ರಾಮಾಣಿಕತೆಯಿಂದ ಸರಿಪಡಿಸಿಕೊಳ್ಳೋಣ ಎಂದರು.
ರಾಜಕಾರಣದಲ್ಲಿ ಶೇಕಡ ನೂರರಷ್ಟು ಜನರನ್ನು ನಾವು ತೃಪ್ತಿಪಡಿಸಿ ಸಂತೋಷ ಪಡಿಸಿ ಪ್ರೀತಿ ಅಭಿಮಾನ ಗಳಿಸಲು ಸಾಧ್ಯವಿಲ್ಲ. ಆದರೆ, ಚುನಾವಣೆ ನಂತರವು ನೀವು ವೈಯಕ್ತಿಕ ಹಾಗೂ ರಾಜಕೀಯವಾಗಿ ದ್ವೇಷ ಮಾಡದೆ ಒಗ್ಗಟ್ಟಿನಿಂದ ಇರುವುದಕ್ಕೆ ಹಿರಿಯರಿಗೆ ಗೌರವದಿಂದ ಅಭಿನಂದಿಸುತ್ತೇನೆ ಎಂದರು.ಮಂಡ್ಯ ಜಿಲ್ಲೆಯ ಜನತೆ ನನ್ನ ಮೇಲೆ ಅಪಾರವಾಗಿ ವಿಶ್ವಾಸ ಇಟ್ಟುಕೊಂಡು ನಂಬಿಕೆಯಿಂದ ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿ ಹಾರೈಸಿದ್ದಾರೆ. ನಿಮ್ಮ ಋಣ ನನ್ನ ಮೇಲೆ ಇದೆ. ನಿಮ್ಮ ಋಣ ತೀರಿಸುವ ನಿಟ್ಟಿನಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಕುಮಾರಣ್ಣ ಲೋಕಸಭೆಗೆ ಆಯ್ಕೆಯಾದರೆ ನಮ್ಮ ಜಿಲ್ಲೆಗೆ ಏನಾದರೂ ಒಳ್ಳೆಯ ಕೆಲಸವಾಗುತ್ತದೆ ಎಂಬ ಭಾವನೆಯಿಂದ ಪಕ್ಷ ಭೇದ ಮರೆತು ನನ್ನನ್ನು ಆರಿಸಿದ್ದೀರಿ. ನಿಮ್ಮ ಆಶೀರ್ವಾದ, ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ಈ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ. ಮಂಡ್ಯ ಜನರ ನಿರೀಕ್ಷೆಗಳನ್ನು ನಾನು ತಪ್ಪದೇ ಈಡೇರಿಸುತ್ತೇನೆ ಎಂದು ವಚನ ನೀಡಿದರು.ಈಗಿನ ಪರಿಸ್ಥಿತಿಯಲ್ಲಿ ದೇಶದಲ್ಲಿ ಹಲವು ಸಮಸ್ಯೆಗಳಿದ್ದರೂ ನಮ್ಮ ಜಿಲ್ಲೆಗೆ ಒಂದು ಕಾರ್ಖಾನೆಯನ್ನು ತಂದು ನಿರುದ್ಯೋಗ ಸಮಸ್ಯೆ ನಿವಾರಿಸಿ ಯುವಕರ ಸಮಸ್ಯೆ ಸರಿಪಡಿಸಬೇಕೆಂಬ ಯೋಜನೆ ಹಾಕಿಕೊಂಡಿದ್ದೇನೆ. ಅದಕ್ಕೆ ಸ್ವಲ್ಪ ಸಮಯಬೇಕು, ಸರ್ಕಾರದ ಬೆಂಬಲವೂ ಬೇಕು ಎಂದರು.
ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಗ್ರಾಮದಲ್ಲಿ ಒಗ್ಗಟ್ಟಿನಿಂದ ಎಲ್ಲರೂ ವೈಮನಸ್ಸು ಇಲ್ಲದೆ ಇರುವುದರಿಂದ ನೂತನ ದೇವಸ್ಥಾನ ನಿರ್ಮಾಣವಾಗಲು ಸಹಕಾರಿಯಾಗಿದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಹೆಚ್ಚು ಮತಗಳನ್ನು ಈ ಗ್ರಾಮದಿಂದ ನೀಡಿರುವುದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಅಪಾರ ಅಭಿಮಾನಿಗಳು ಈ ಗ್ರಾಮದಲ್ಲಿದ್ದಾರೆ. ನಮ್ಮ ಪಕ್ಷಕ್ಕೆ ನಿಷ್ಠೆಯಿಂದ ದುಡಿಯುತ್ತಿರುವ ಈ ಗ್ರಾಮವನ್ನು ಎಂದಿಗೂ ನಾವು ಮರೆಯುವುದಿಲ್ಲ. ಇಲ್ಲಿ ವಾಸಿಸುವರಲ್ಲಿ ಎಲ್ಲರಲ್ಲೂ ಸಾಮರಸ್ಯ, ತಾಳ್ಮೆ, ಹೊಂದಾಣಿಕೆ ಇರುವುದರಿಂದ ನೂತನ ದೇವಸ್ಥಾನ ನಿರ್ಮಾಣವಾಗಲು ಸಾಧ್ಯವಾಗಿದೆ ಎಂದರು.
ಈ ವೇಳೆ ರಾಮನಗರದ ಶಿವಗಿರಿ ಕ್ಷೇತ್ರದಶ್ರೀಅನ್ನದಾನೇಶ್ವರ ಸ್ವಾಮೀಜಿ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.