ನೀರಿಲ್ಲದೆ ಒಣಗಿದ ಆಸಂಗಿ ಬ್ಯಾರೇಜ್

KannadaprabhaNewsNetwork |  
Published : Jul 12, 2026, 04:00 AM IST
ಪೋಟೋ: 11 ಜಿಎಲ್‌ಡಿ1- ನೀರಿಲ್ಲದೇ ಒಣಗಿದ ಗುಳೇದಗುಡ್ಡ ತಾಲೂಕಿನ ಆಸಂಗಿ ಬ್ಯಾರೇಜ್  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಗುಳೇದಗುಡ್ಡ ಹಾಗೂ ಹುನಗುಂದ ತಾಲೂಕಿನ ಬಹುಸಂಖ್ಯಾತ ಹಳ್ಳಿಗಳಿಗೆ ಮಲಪ್ರಭಾ ಜೀವನದಿ. ಜನ-ಜಾನುವಾರು ಮತ್ತು ಕೃಷಿಗೆ ಈ ನದಿ ನೀರನ್ನೇ ರೈತರು ಅವಲಂಬಿಸಿದ್ದಾರೆ. ಬೇಸಿಗೆ ಬಂದರೆ ಬರಗಾಲದ ವಾತಾವರಣವಿರುವ ಈ ಪ್ರದೇಶ ಈಗ ಮತ್ತಷ್ಟು ನೀರಿಗಾಗಿ ಹಲಬುವಂತಾಗಿದೆ. ತಾಲೂಕಿನ ಆಸಂಗಿ ಬ್ಯಾರೇಜ್ ನೀರಿಲ್ಲದೇ ಬಣಬಣ ಎಂದು ರಣಗೂಡುತ್ತಿದೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಬಾಗಲಕೋಟೆ ಜಿಲ್ಲೆಯ ಬಾದಾಮಿ, ಗುಳೇದಗುಡ್ಡ ಹಾಗೂ ಹುನಗುಂದ ತಾಲೂಕಿನ ಬಹುಸಂಖ್ಯಾತ ಹಳ್ಳಿಗಳಿಗೆ ಮಲಪ್ರಭಾ ಜೀವನದಿ. ಜನ-ಜಾನುವಾರು ಮತ್ತು ಕೃಷಿಗೆ ಈ ನದಿ ನೀರನ್ನೇ ರೈತರು ಅವಲಂಬಿಸಿದ್ದಾರೆ. ಬೇಸಿಗೆ ಬಂದರೆ ಬರಗಾಲದ ವಾತಾವರಣವಿರುವ ಈ ಪ್ರದೇಶ ಈಗ ಮತ್ತಷ್ಟು ನೀರಿಗಾಗಿ ಹಲಬುವಂತಾಗಿದೆ. ತಾಲೂಕಿನ ಆಸಂಗಿ ಬ್ಯಾರೇಜ್ ನೀರಿಲ್ಲದೇ ಬಣಬಣ ಎಂದು ರಣಗೂಡುತ್ತಿದೆ.

ಪ್ರತಿವರ್ಷ ಬೇಸಿಗೆ ದಿನಗಳಲ್ಲಿ ಈ ಭಾಗದ ಶಾಸಕರು ನವಿಲುತೀರ್ಥ ಜಲಾಶಯದಿಂದ ಮಲಪ್ರಭೆಗೆ ನೀರು ಬಿಡಿಸಿ ಜನ, ಜಾನುವಾರುಗಳಿಗೂ ಕುಡಿಯಲು ಕನಿಷ್ಟ ಅನುಕೂಲ ಮಾಡುತ್ತ ಬಂದಿದ್ದರು. ಆದರೆ ಸದ್ಯ ಮಲಪ್ರಭೆ ನೀರಿಲ್ಲದೇ ಬರಿದಾಗಿದೆ. ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಗುಳೇದಗುಡ್ಡ ತಾಲೂಕಿನ ಚಿಮ್ಮಲಗಿ, ಲಾಯದಗುಂದಿ ಹಾಗೂ ಆಸಂಗಿ ಬ್ಯಾರೇಜುಗಳು ತುಂಬಿ ಹರಿಯಬೇಕಾದ ದಿನಗಳಲ್ಲಿ ಬರಿದಾಗಿ ಬಿಕೋ ಎನ್ನುತ್ತಿವೆ. ಇದರಿಂದ ಈ ಭಾಗಗಳ ರೈತರು ಆತಂಕ ಪಡುವಂತಾಗಿದೆ.

ಆಸಂಗಿ ಬ್ಯಾರೇಜಿನಲ್ಲಿ ಸಂಗ್ರಹವಾದ ನೀರು ಸುಮಾರು 25 ಗ್ರಾಮಗಳಿಗೆ ಕುಡಿಯಲು ನೀರು, ಸಾವಿರಾರು ಎಕರೆ ಭೂಮಿಗೆ ನೀರು ಸಿಗುತ್ತದೆ. ಆದರೆ, ಈಗ ಮಲಪ್ರಭೆ ನೀರಿಲ್ಲದೇ ಒಣಗಿರುವುದರಿಂದ ರೈತರಲ್ಲಿ ಆತಂಕದ ಸ್ಥಿತಿ ಕಂಡು ಬರುತ್ತಿದೆ. ಬೇಸಿಗೆ ಮಗಿದು ಮಳೆಗಾಲ ಬಂದರೂ ಮಳೆಯಾಗುತ್ತಿಲ್ಲ. ಮಳೆ ಕೊರತೆಯಿಂದ ಜಲಮೂಲ ಬರಿದಾಗಿವೆ. ಇದರಿಂದ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಬೇಸಿಗೆಯಲ್ಲಿನ ಪರಿಸ್ಥಿತಿ ಈಗ ಮಳೆಯ ದಿನಗಳಲ್ಲಿಯೂ ಬರದ ಸ್ಥಿತಿ ಬಂದೋದಗಿ, ಬಿತ್ತಿದ ಬೀಜ ನೆಲದಿಂದ ಹೊರಬರದಾಗಿದೆ. ಬರದ ಛಾಯೆ ಎಲ್ಲೆಡೆ ಕಂಡು ಬರುತ್ತಿದೆ.

ಬಹುಗ್ರಾಮಗಳಿಗೂ ನೀರಿಗೆ ಬರ: ಅಸಂಗಿ ಬ್ಯಾರೇಜಿನ ನೀರನ್ನು ತೆಗೆದುಕೊಂಡು ಅಸಂಗಿ ಗ್ರಾಮದ ಹತ್ತಿರ ಎರಡು ಕೆರೆಗಳನ್ನು ನಿರ್ಮಿಸಿ, ನೀರು ಸಂಗ್ರಹಿಸಿ ಆ ನೀರನ್ನು, ತೋಗುಣಸಿ, ತೋಗುಣಸಿ ತಾಂಡಾ, ಹುಲ್ಲಿಕೇರಿ, ಹಾನಾಪೂರ, ಹಾನಾಪೂರ ತಾಂಡಾ, ಮುರುಡಿ, ಕೋಟೆಕಲ್, ಪರ್ವತಿ, ಪಾದನಕಟ್ಟಿ, ಹಳದೂರ, ಅಲ್ಲೂರ, ಇಂಜನವಾರಿ, ಆಸಂಗಿ, ಕಟಗಿನಹಳ್ಳಿ, ಕೊಟ್ನಳ್ಳಿ ಹೀಗೆ ಆಸಂಗಿಭಾಗದ 7 ಹಳ್ಳಿಗಳಿಗೆ ಮತ್ತು ಗುಳೇದಗುಡ್ಡ ಭಾಗದ 14 ಹಳ್ಳಿಗಳಿಗೆ ಕುಡಿಯಲು ನೀರು ಪೂರೈಸಲಾಗುತ್ತಿದೆ. ಸದ್ಯ ಒಂದು ಕೆರೆಯಲ್ಲಿ ನೀರಿದ್ದು, ಮತ್ತೊಂದು ಕೆರೆ ಬರಿದಾಗಿದೆ. ಆ ಕೆರೆಯ ನೀರು ಇನ್ನು 15-20 ದಿನಗಳಲ್ಲಿ ಬರಿದಾದರೆ ಸುಮಾರು 25 ಗ್ರಾಮಗಳಿಗೆ ಕುಡಿಯುವ ನೀರಿಗೂ ಸಂಕಷ್ಟ ಬಂದೊದಗುತ್ತದೆಂದು ಗ್ರಾಮಸ್ಥರು ಹೇಳುತ್ತಾರೆ.

ಚಿಮ್ಮಲಗಿ ಬ್ಯಾರೇಜ್ ದಿಂದ ಚಿಮ್ಮಲಗಿ, ಮಂಗಳಗುಡ್ಡ, ನಾಗರಾಳ ಎಸ್ಪಿ, ಪಟ್ಟದಕಲ್, ಸಿದ್ದನಕೊಳ್ಳ, ಉಪನಾಳ, ಭೀಮನಗಡ, ಐಹೊಳೆ ಗ್ರಾಮಗಳಿಗೆ ಅನುಕೂಲವಾಗುತ್ತದೆ. ಶಾಸಕರು ಆದಷ್ಟು ಬೇಗ ನವಿಲುತೀರ್ಥ ಜಲಾಶಯದಿಂದ ನೀರನ್ನು ಬಿಡಿಸಬೇಕೆಂದು ಈ ಭಾಗದ ಅನೇಕ ಗ್ರಾಮಗಳ ರೈತರು ಮನವಿ ಮಾಡಿಕೊಂಡಿದ್ದಾರೆ.

ಬಾದಾಮಿ ಮತಕ್ಷೇತ್ರದ ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ ಅವರು ನವೀಲುತೀರ್ಥ ಜಲಾಶಯದಿಂದ ಮುಂಜಾಗ್ರತಾ ಕ್ರಮವಾಗಿ 1 ಟಿಎಂಸಿ ನೀರು ಬಿಡಿಸಬೇಕು. ಇದರಿಂದ ಬಾಗಲಕೋಟ, ಧಾರವಾಡ, ಗದಗ, ಬೆಳಗಾವಿ ಹೀಗೆ 4 ಜಿಲ್ಲೆಗಳ ರೈತರಿಗೆ ಅನುಕೂಲವಾಗುತ್ತದೆ. ಅಂದಾಗ ಜನ, ಜಾನುವಾರುಗಳಿಗೆ ಕುಡಿಯಲು ನೀರು ಅನುಕೂಲವಗುತ್ತದೆ.

- ಪ್ರಕಾಶ ಗೌಡರ, ಪಿಕೆಪಿಎಸ್ ಮಾಜಿ ಅಧ್ಯಕ್ಷರು, ಆಸಂಗಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡ್ರಗ್ಸ್ ಜಾಲದ ವಿರುದ್ಧ ಪೊಲೀಸ್ ಸಮರ
ಲೋಕ ಅದಾಲತ್‌ ನಲ್ಲಿ 890 ಪ್ರಕರಣಗಳು ಇತ್ಯರ್ಥ