ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರತಿಭಟನೆಯಲ್ಲಿ ಭಾಗವಹಿದ ಕರವೇ ರಾಜ್ಯ ವಕ್ತಾರ ಬಿ.ಎಂ.ಪಾಟೀಲ ಮಾತನಾಡಿ, ಮುಳುಗಡೆ ನಗರ ಬಾಗಲಕೋಟೆ ಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ನಿವೇಶನಗಳನ್ನು ಪಡೆದುಕೊಂಡು ಯಾವುದೇ ಉತ್ಪಾದಕ ಚಟುವಟಿಕೆಗಳನ್ನು ಮಾಡದಿರುವುದರ ಕುರಿತು ತೃತೀಯ ಸಂಸ್ಥೆ ತನಿಖೆಗೊಳಪಡಿಸಿ ನಿಬಂಧನೆಗಳ ಉಲ್ಲಂಘಿಸಿದವರಿಂದ ನಿವೇಶನಗಳನ್ನು ಹಿಂಪಡೆದು ಪರಿಸರ ಸ್ನೇಹಿ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮುಳುಗಡೆ ನಗರ ಬಾಗಲಕೋಟೆಯನ್ನು ಸುಸಜ್ಜಿತವಾಗಿ ಸಕಲ ಸೌಲಭ್ಯಗಳೊಂದಿಗೆ ಪುನರ್ ನಿರ್ಮಿಸಿ ಮುಳುಗಡೆ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಲು ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಡಿ ನವನಗರ ನಿರ್ಮಾಣ ಆರಂಭವಾಯಿತು. ನಂತರ ಮುಳುಗಡೆ ಸಂತ್ರಸ್ಥರಿಗೆ ಕೇವಲ ವಸತಿಗಾಗಿ ನವನಗರ ಅಭಿವೃದ್ಧಿ ಮಾಡಲಾಯಿತೇ ಹೊರತು ಔದ್ಯೋಗಿಕ, ಶೈಕ್ಷಣಿಕ ಬೆಳವಣಿಗೆಯ ಕುರಿತು ಗಂಭೀರವಾಗಿ ಯೋಚಿಸದೇ ಮುಳುಗಡೆ ಸಂತ್ರಸ್ಥರನ್ನು ಸ್ಥಳಾಂತರಿಸಿ ಅವರ ಬದುಕು ಸಾಗಿಸಲು ಉದ್ಯೋಗಾವ ಕಾಶಗಳಿಲ್ಲದ ಕಾರಣ ಸಂತ್ರಸ್ಥರಿಗೆ ಘೋರ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯವಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಮುಳುಗಿದ್ದು ಬಾಗಲಕೋಟೆ ಜಿಲ್ಲೆಯ ಕೃಷಿ ಭೂಮಿ,ವಸತಿ, ವಾಣಿಜ್ಯ ಕಟ್ಟಡಗಳು, ಉದ್ಯಮಗಳು ಫಲ ಮಾತ್ರ ವಿಜಯಪುರ ಜಿಲ್ಲೆಗೆ ಆಗಿದೆ, ಮುಳುಗಿದ್ದು ಬಾಗಲಕೋಟೆ ಬೆಳೆದಿದ್ದು ವಿಜಯಪುರ ಅಖಂಡ ವಿಜಯಪುರ ಜಿಲ್ಲೆ ಅವಿಭಾಜ್ಯ ವಿಜಯಪುರ ಜಿಲ್ಲೆ ಎಂದು ರಾಜಕೀಯ ಭಾಷಣಗಳನ್ನು ಮಾಡುವ ನಾಯಕರು ರಾಜ್ಯ ಮತ್ತು ರಾಷ್ಟ್ರದ ಹಿತಕ್ಕಾಗಿ ತಮ್ಮ ಭವಿಷ್ಯವನ್ನೇ ಮುಡಿಪಾಗಿಟ್ಟು ತ್ಯಾಗ ಮಾಡಿದ ಮುಳುಗಡೆ ಸಂತ್ರಸ್ಥರ ಬದುಕನ್ನು ಬೀದಿಗೆ ತಂದಿದ್ದಾರೆ ಎಂದರು.ನಂತರ ಕರವೇ ಜಿಲ್ಲಾಧಕ್ಷ ಬಸವರಾಜ ಧರ್ಮಂತಿ ಮಾತನಾಡಿ, ಬೃಹತ್ ಕೈಗಾರಿಕೆ ಮತ್ತು ಮಧ್ಯಮ ಕೈಗಾರಿಕೆ ಹಾಗೂ ವಿಜಯಪುರ/ಬಾಗಲಕೋಟೆ ಜಿಲ್ಲಾ ಮೇಲುಸ್ತುವಾರಿ ಸಚಿವರು ಆಗಿರುವ ಎಂ.ಬಿ.ಪಾಟೀಲ್ ಅವರು, ಸ್ವಕ್ಷೇತ್ರ ಇರುವ ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ಅಂದಾಜು 500 ಕೋಟಿ ರೂ.ಗಳ ಬಂಡವಾಳ ತಂದಿದ್ದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಮುಳುಗಡೆ ಸಂತ್ರಸ್ಥರ ಬಾಗಲಕೋಟೆಯನ್ನು ನಿರ್ಲಕ್ಷಿಸುತ್ತಿರುವುದನ್ನು ಎಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ, ಬಾಗಲಕೋಟೆ ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸುತ್ತದೆ ಎಂದರು.
-ಬಿ.ಎಂ.ಪಾಟೀಲ, ಕರವೇ ರಾಜ್ಯ ವಕ್ತಾರ