ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಈ ವೇಳೆ ಹಿರಿಯ ಸಾಮಾಜಿಕ ಹೋರಾಟಗಾರ ಹಾಗೂ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ವಿ.ಎನ್. ರಾಜಶೇಖರ್ ಮಾತನಾಡಿ, ಎಲ್ಲಾ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸಾರ್ವಜನಿಕ ಸೇವೆಗಳನ್ನು ಖಾಸಗೀಕರಿಸುತ್ತ ದೊಡ್ಡ ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದರ ಮಧ್ಯೆ ನರೇಗಾ ಯೋಜನೆಯನ್ನು ವಿಬಿ ಜಿ ರಾಮ್ ಜಿ ಎಂದು ಬದಲಿಸಿ ಉದ್ಯೋಗ ಖಾತ್ರಿಯ ಹಕ್ಕನ್ನೇ ಕಸಿದುಕೊಂಡು, ಹಳ್ಳಿಯ ಬಡಜನರ ಆಸರೆಯನ್ನು ಕಿತ್ತುಕೊಂಡಿದೆ. ವಿದ್ಯುತ್ ತಿದ್ದುಪಡಿ ಮಸೂದೆ- 2025ಅನ್ನು ಕಾಯ್ದೆ ಮಾಡಿ, ವಿದ್ಯುತ್ ಸರಬರಾಜು ಖಾಸಗೀಕರಣಗೊಳಿಸಲು ಮುಂದಾಗಿದ್ದು, ಇದುವರೆಗೂ ರಕ್ಷಿಸಲ್ಪಟ್ಟಿದ್ದ ವಿಮಾ ಕಂಪನಿಗಳನ್ನು ಶೇ.100ರಷ್ಟು ವಿದೇಶಿ ಮತ್ತು ದೇಶಿಯ ವ್ಯಾಪಾರಿ ಮನೆತನಗಳಿಗೆ ತೆರೆದಿರುವುದು ಅತ್ಯಂತ ಆತಂಕದ ವಿಷಯ. ಈಗ ಕಾರ್ಮಿಕರ ಪ್ರತಿರೋಧವನ್ನು ತಡೆಗಟ್ಟಲು, ವ್ಯಾಪಾರ ಸುಗಮಗೊಳಿಸುವ ಉದ್ಧೇಶದಿಂದ ತಮ್ಮ ಸರ್ಕಾರವು ಲೇಬರ್ ಕೋಡ್‌ಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಷ್ಕರದ ಹಕ್ಕನ್ನು ಕಸಿದುಕೊಳ್ಳುವ, ಕಾರ್ಮಿಕರ ಸಾಮೂಹಿಕ ಚೌಕಾಸಿ ಹಕ್ಕನ್ನು ಮೊಟಕುಗೊಳಿಸುವ, ನಿಗದಿತ ಅವಧಿಗೆ ಉದ್ಯೋಗದ ಮೂಲಕ ಕಾಯಂ ಸ್ವರೂಪದ ಕೆಲಸಗಳಿಗೆ ತಿಲಾಂಜಲಿ ನೀಡುತ್ತಿರುವುದು, ದಿನಕ್ಕೆ 12 ತಾಸು ಕೆಲಸದ ಅವಧಿ ಹೆಚ್ಚಿಸಿರುವುದು ಮತ್ತು ಮಹಿಳಾ ಉದ್ಯೋಗಿಗಳನ್ನು ರಾತ್ರಿ ಪಾಳಿಯಲ್ಲೂ ದುಡಿಸಿಕೊಳ್ಳುವ ಈ ಲೇಬರ್ ಕೋಡ್‌ಗಳು ಕಾರ್ಮಿಕರ ಆರೋಗ್ಯ, ಭದ್ರತೆ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ, ತ್ಯಾಗ- ಬಲಿದಾನಗಳ ಮೂಲಕ ಗಳಿಸಿಕೊಂಡ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರದ ವಿವಿಧ ಸ್ಕೀಂಗಳಲ್ಲಿ ದುಡಿಯುವ ಕೋಟ್ಯಂತರ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರನ್ನು ಸರ್ಕಾರಿ ನೌಕರರ ಸ್ಥಾನಮಾನ ನೀಡದೇ, ಕನಿಷ್ಠ ವೇತನ ಮತ್ತು ಪಿಎಫ್, ಇಎಸ್‌ಐ, ನಿವೃತ್ತಿ ಪರಿಹಾರಗಳನ್ನು ಒದಗಿಸದೇ ಬಿಡಿಗಾಸಿನಲ್ಲಿ ದುಡಿಸಿಕೊಂಡು ಶೋಷಿಸಲಾಗುತ್ತಿದೆ. ಗುತ್ತಿಗೆ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಬೀಡಿ ಕಾರ್ಮಿಕರು, ಗೃಹ ಕಾರ್ಮಿಕರು, ವಲಸೆ ಕಾರ್ಮಿಕರು, ಗಿಗ್ ಫ್ಲಾಟ್‌ಫಾರ್ಮ್ ಕಾರ್ಮಿಕರು, ಅಪಾರ ಸಂಖ್ಯೆಯ ಅನೌಪಚಾರಿಕ, ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಇಲ್ಲದೆ ನಿರ್ದಯ ಶೋಷಣೆಗೆ ಗುರಿ ಮಾಡಲಾಗಿದೆ. ಅಷ್ಟೇ ಅಲ್ಲದೆ ದೇಶದಾದ್ಯಂತ ಸರ್ಕಾರಿ ಶಾಲೆಗಳನ್ನು ಮುಚ್ಚಲು ಶುರು ಮಾಡಿದ್ದಾರೆ. ಇದರಿಂದ ಬಡ ಜನತೆ ಶಿಕ್ಷಣದ ಬೆಳಕಿನಿಂದ ವಂಚಿತರಾಗುತ್ತಾರೆ. ಆದ್ದರಿಂದ ದೇಶದ ಸಂಪತ್ತನ್ನು ಸಂರಕ್ಷಿಸಲು, ದುಡಿಯುವ ಜನರ ಜೀವನೋಪಾಯ ಮತ್ತು ಹಕ್ಕುಗಳನ್ನು ಉಳಿಸಲು, ಎಲ್ಲಾ ಮಾನವ ವಿರೋಧಿ ಮಸೂದೆ-ನೀತಿಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ರಾಜ್ಯದ ಎಲ್ಲ ಇಲಾಖೆಗಳಲ್ಲಿ ದೀರ್ಘಾವಧಿ ಸೇವೆಗೈದ ಗುತ್ತಿಗೆ, ಹೊರಗುತ್ತಿಗೆ, ತಾತ್ಕಾಲಿಕ ಕಾರ್ಮಿಕರನ್ನು ಅವರು ಕೆಲಸ ಮಾಡುತ್ತಿರುವ ಅದೇ ಹುದ್ದೆಯಲ್ಲಿ ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಪಾಲಿಸಬೇಕು. ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಸೌಲಭ್ಯಗಳನ್ನು ಹೆಚ್ಚಿಸಬೇಕು. ಈ ಸೌಲಭ್ಯಗಳನ್ನು ಸುಲಭವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಯುಟಿಯುಸಿ ಮುಖಂಡರಾದ ಸರಸ್ವತಮ್ಮ, ರೇಷ್ಮಾ, ಮಂಜುಳಾ, ಲಕ್ಷ್ಮೀ, ಸುಜಾತ, ಸುಶೀಲ, ಜಯಮ್ಮ, ಲಲಿತಾ, ಸುಗುಣ, ವೆಂಕಟಲಕ್ಷ್ಮೀ, ಪುಷ್ಪ, ತಿಮ್ಮಕ್ಕ, ಶಶಿಕಲಾ , ಮತ್ತಿತರರು ಇದ್ದರು.