ಚಂದ್ರು ಕೊಂಚಿಗೇರಿ
ಹೌದು, ತಾಲೂಕಿನ ಮೈಲಾರ-ತೋರಣಗಲ್ಲು, ಅರಭಾವಿ-ಚಳಕೇರಿ ರಾಜ್ಯ ಹೆದ್ದಾರಿ ಸೇರಿದಂತೆ ಇನ್ನಿತರ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆ ಟೆಂಡರ್ ಕರೆದು, ಕಾಮಗಾರಿ ಆದೇಶ ನೀಡಿದೆ. ಗುತ್ತಿಗೆದಾರರು ಟೆಂಡರ್ ನಿಯಮಗಳಂತೆ ಕಾಮಗಾರಿ ಆರಂಭಿಸಿ, ರಸ್ತೆಗೆ ಇನ್ನು ಡಾಂಬರೀಕರಣ ಹಾಕಬೇಕು ಎನ್ನುವಷ್ಟರಲ್ಲಿ ಮಧ್ಯಪ್ರಾಚ್ಯ ಯುದ್ಧ ಶುರುವಾಗಿತ್ತು. ಇದರ ಪರಿಣಾಮದಿಂದ ಡಾಂಬರ್ ಬೆಲೆ ಗಗನಕ್ಕೇರಿದೆ.
ಯುದ್ಧಕ್ಕೂ ಮುನ್ನವೇ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಅಗ್ರಿಮೆಂಟ್ ಪ್ರಕಾರ ವಿಧಿ ಇಲ್ಲದೇ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಈಗ ಡಾಂಬರ್ ಖರೀದಿಸಲು ಹೋದರೆ ಸಿಕ್ಕಾಪಟ್ಟೆ ಬೆಲೆ ಏರಿಕೆಯಾಗಿದೆ. ಇನ್ನು ಸ್ವಲ್ಪ ದಿನ ತಡೆದರೆ ಬೆಲೆ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿರುವ ಗುತ್ತಿಗೆದಾರರು, ರಸ್ತೆ ಮೇಲೆ ಜೆಲ್ಲಿ ಕಲ್ಲು ಹಾಕಿ ಬಿಟ್ಟಿದ್ದಾರೆ.ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಯನ್ನು ಆಯ್ದ ಮೂರು ಕಡೆಗಳಲ್ಲಿ ಹಾಳಾಗಿರುವ ರಸ್ತೆಯನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಕಲ್ಲಿನ ಪುಡಿ ಮಿಶ್ರಿತ ಜೆಲ್ಲಿ ಕಲ್ಲು ಹಾಕಿದ್ದಾರೆ. ವಾಹನಗಳ ಓಡಾಟದಿಂದ ರಸ್ತೆಗೆ ಹಾಕಿದ್ದ ಜೆಲ್ಲಿ ಕಲ್ಲು ಕಿತ್ತು ಹೋಗುತ್ತಿವೆ. ಜತೆಗೆ ರಸ್ತೆ ತುಂಬೆಲ್ಲ ಧೂಳು ಎಗರುತ್ತಿದೆ. ದೊಡ್ಡ ವಾಹನಗಳ ಹಿಂದೆ ಬೈಕ್ ಸವಾರರು ಧೂಳು ಮೆತ್ತಿಕೊಂಡು ಹೋಗುವ ಸ್ಥಿತಿ ಇದೆ.
ತಾಲೂಕಿನಲ್ಲಿ ಒಟ್ಟಾರೆ 10 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಎಲ್ಲ ಕಡೆಗೂ ಪರಿಸ್ಥಿತಿ ಹೀಗೆ ಇದೆ. ರಸ್ತೆ ಧೂಳು ಮುಕ್ತ ಮಾಡಲು ತಿಳಿದಾಗೊಮ್ಮೆ ನೀರು ಸಿಂಪರಣೆ ಮಾಡುತ್ತಾರೆ.
ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಗೆ ಕಲ್ಲಿನ ಪುಡಿ, ಜೆಲ್ಲಿ ಕಲ್ಲು ಹಾಕಿದ್ದಾರೆ. ಮೈಲಾರಕ್ಕೆ ಬರುವ ಭಕ್ತರು ಧೂಳು ಮೆತ್ತಿಕೊಂಡೇ ಬರುತ್ತಾರೆ. ದೊಡ್ಡ ವಾಹನದ ಹಿಂದೆ ಹೋದರೆ ದಾರಿಯೇ ಕಾಣುತ್ತಿಲ್ಲ. ಅಷ್ಟೊಂದು ಧೂಳು ಇದೆ. ಸಂಬಂಧ ಪಟ್ಟವರು ಬೇಗನೆ ಕಾಮಗಾರಿ ಪೂರ್ಣಗೊಳಿಸಲಿ ಎನ್ನುತ್ತಾರೆ ಮೈಲಾರ ಗ್ರಾಮಸ್ಥರು.