ಒಕ್ಕಲಿಗರ ಸಂಘ ಚುನಾವಣೆಗೆ ಆಕಾಂಕ್ಷಿಗಳ ಕಸರತ್ತು ಶುರು

KannadaprabhaNewsNetwork |  
Published : Aug 27, 2026, 01:45 AM IST
 ಬಿ.ಆರ್.ಸುರೇಶ್,  | Kannada Prabha

ಸಾರಾಂಶ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಇನ್ನೂ ನಾಲ್ಕು ತಿಂಗಳಿರುವಾಗಲೇ ಆಕಾಂಕ್ಷಿಗಳು ಕಸರತ್ತು ಶುರು ಮಾಡಿದ್ದಾರೆ. ಜಿಲ್ಲೆಯಲ್ಲಿರುವ ನಾಲ್ಕು ಸ್ಥಾನಗಳಿಗೆ ಹೊಸ ಮುಖಗಳಾಗಿ ಹತ್ತಕ್ಕೂ ಹೆಚ್ಚು ಅಖಾಡಕ್ಕಿಳಿಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇವರೊಂದಿಗೆ ಹಳೆಯ ಮುಖಗಳಲ್ಲಿ ಕೆಲವರು ಮತ್ತೆ ಚುನಾವಣೆ ಎದುರಿಸುವುದಕ್ಕೆ ಸಜ್ಜಾಗುತ್ತಿರುವುದಾಗಿ ತಿಳಿದುಬಂದಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಇನ್ನೂ ನಾಲ್ಕು ತಿಂಗಳಿರುವಾಗಲೇ ಆಕಾಂಕ್ಷಿಗಳು ಕಸರತ್ತು ಶುರು ಮಾಡಿದ್ದಾರೆ. ಜಿಲ್ಲೆಯಲ್ಲಿರುವ ನಾಲ್ಕು ಸ್ಥಾನಗಳಿಗೆ ಹೊಸ ಮುಖಗಳಾಗಿ ಹತ್ತಕ್ಕೂ ಹೆಚ್ಚು ಅಖಾಡಕ್ಕಿಳಿಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇವರೊಂದಿಗೆ ಹಳೆಯ ಮುಖಗಳಲ್ಲಿ ಕೆಲವರು ಮತ್ತೆ ಚುನಾವಣೆ ಎದುರಿಸುವುದಕ್ಕೆ ಸಜ್ಜಾಗುತ್ತಿರುವುದಾಗಿ ತಿಳಿದುಬಂದಿದೆ.

ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ಸಹೋದರ ಬಿ.ಆರ್.ಸುರೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಯು.ಸಿ. ಶಿವಕುಮಾರ, ಮಾಜಿ ಶಾಸಕ ಎಂ.ಶ್ರೀನಿವಾಸ್ ಅಳಿಯ ಎಚ್.ಎನ್.ಯೋಗೇಶ್, ಜೆಡಿಎಸ್ ಮುಖಂಡ ಮುದ್ದನಘಟ್ಟ ಮಹಾಲಿಂಗೇಗೌಡ, ಜೆಡಿಎಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ಕಂಸಾಗರ ರವಿ, ಹೆಮ್ಮಿಗೆ ಕಾಳೇಗೌಡ, ವಕೀಲ ವಿಶಾಲ್‌ರಘು ಸೇರಿದಂತೆ ಹಲವು ಹೊಸ ಮುಖಗಳು ಒಕ್ಕಲಿಗರ ಸಂಘದ ಚುನಾವಣಾ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

೨೦೨೧ರ ಡಿಸೆಂಬರ್ ೧೨ರಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ಜಿಲ್ಲೆಯಿಂದ ನಾಲ್ಕು ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಶೋಕ್ ಜಯರಾಂ, ಮೂಡ್ಯ ಚಂದ್ರು, ಎನ್.ಬಾಲಕೃಷ್ಣ ಹಾಗೂ ರಾಘವೇಂದ್ರ ಅವರು ಆಯ್ಕೆಯಾಗಿದ್ದರು.

ಚುನಾವಣೆಗೆ ನಾಲ್ಕು ತಿಂಗಳಿರುವಾಗಲೇ ಒಕ್ಕಲಿಗರ ಸಂಘದ ಚುನಾವಣೆಯ ಅಭ್ಯರ್ಥಿಗಳೆಂದು ಹೇಳಿಕೊಂಡು ಮತದಾರರನ್ನು ಭೇಟಿಯಾಗುತ್ತಾ ಸದ್ದಿಲ್ಲದೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಮುಖಂಡರುಗಳನ್ನು ಒಗ್ಗೂಡಿಸಿಕೊಂಡು ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡುತ್ತಾ ಈಗಿನಿಂದಲೇ ಮತದಾರರನ್ನು ಸೆಳೆಯುವ ತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ಸಹೋದರ ಬಿ.ಆರ್.ಸುರೇಶ್ ಕೂಡ ಒಕ್ಕಲಿಗರ ಸಂಘದ ಚುನಾವಣೆ ಮೂಲಕ ರಾಜಕೀಯ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ಅಣ್ಣನೊಂದಿಗೆ ರಾಜಕೀಯ ಸಂಪರ್ಕದಲ್ಲಿರುವ ಬಿ.ಆರ್.ಸುರೇಶ್ ಮತದಾರರನ್ನು ಓಲೈಸುವ ಪ್ರಕ್ರಿಯೆಯಲ್ಲಿ ಈಗಾಗಲೇ ನಿರತರಾಗಿದ್ದಾರೆ. ಜೆಡಿಎಸ್‌ನ ಹಲವು ಸ್ಥಳೀಯ ಮುಖಂಡರು ಅವರಿಗೆ ಬೆನ್ನು ತಟ್ಟಿ ಚುನಾವಣಾ ಅಖಾಡ ಪ್ರವೇಶಿಸುವಂತೆ ಹುರುಪು ತುಂಬುತ್ತಿದ್ದಾರೆ.

ಬಿ.ಆರ್.ರಾಮಚಂದ್ರ ಜೊತೆ ಎಲ್ಲೆಡೆ ಸುತ್ತಾಡುವುದರೊಂದಿಗೆ ಅಣ್ಣನ ಅನುಪಸ್ಥಿತಿಯಲ್ಲಿ ಬಿ.ಆರ್.ಸುರೇಶ್ ಕಾಣಿಸಿಕೊಳ್ಳುತ್ತಾ ಮತದಾರರು ಕೈಬಿಟ್ಟು ಹೋಗದಂತೆ ಜಾಗೃತಿ ವಹಿಸುತ್ತಿದ್ದಾರೆ. ಸುರೇಶ್ ಬಹಿರಂಗವಾಗಿಯೇ ಒಕ್ಕಲಿಗರ ಸಂಘದ ಚುನಾವಣಾ ಅಭ್ಯರ್ಥಿ ಎಂದು ಗುರುತಿಸಿಕೊಂಡು ಎಲ್ಲೆಡೆ ಬಿರುಸಿನಿಂದ ಓಡಾಡುತ್ತಿದ್ದಾರೆ.

ಜೆಡಿಎಸ್ ಮುಖಂಡ ಮುದ್ದನಘಟ್ಟ ಮಹಾಲಿಂಗೇಗೌಡ ಕೂಡ ಒಕ್ಕಲಿಗರ ಸಂಘದ ನಿರ್ದೇಶಕರಾಗುವ ಆಕಾಂಕ್ಷೆಯಲ್ಲಿದ್ದಾರೆ. ಹಾಲಿ ನಿರ್ದೇಶಕರಾಗಿರುವ ಸಹೋದರ ರಾಘವೇಂದ್ರ ಅವರನ್ನೇ ಮತ್ತೆ ಕಣಕ್ಕಿಳಿಸುವ ಆಶಯವನ್ನೂ ಹೊಂದಿದ್ದಾರೆ. ರಾಘವೇಂದ್ರ ಅವರು ಸಂಘದ ಉಪಾಧ್ಯಕ್ಷ, ಕಾರ್ಯದರ್ಶಿ ಹುದ್ದೆಯನ್ನೂ ಅಲಂಕರಿಸಿ ಸಂಘದಲ್ಲಿ ಉತ್ತಮ ಕಾರ್ಯಚಟುವಟಿಕೆಗಳನ್ನು ಮಾಡಿದ್ದಾರೆನ್ನಲಾಗಿದೆ. ಅವರೇ ಮತ್ತೆ ಕಣಕ್ಕಿಳಿಯಬೇಕೆಂದು ಹಲವರು ಒತ್ತಡ ಹಾಕುತ್ತಿದ್ದಾರೆ. ಆದರೆ, ಈ ಬಾರಿ ಅಣ್ಣನನ್ನು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವಂತೆ ರಾಘವೇಂದ್ರ ಒತ್ತಾಯಿಸುತ್ತಿದ್ದಾರೆ.

ಮಹಾಲಿಂಗೇಗೌಡರು ಕೂಡ ಜೆಡಿಎಸ್ ಮುಖಂಡರಾಗಿ ಹಲವು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ, ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಗುರುತಿಸಿಕೊಂಡಿದ್ದಾರೆ. ಜೆಡಿಎಸ್ ನಾಯಕರೊಂದಿಗೆ, ಚುಂಚನಗಿರಿ ಶ್ರೀ, ವಿಶ್ವ ಒಕ್ಕಲಿಗರ ಮಠದ ಶ್ರೀಗಳು ಸೇರಿದಂತೆ ಇತರೆ ಮಠದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇಬ್ಬರಲ್ಲಿ ಯಾರು ಅಂತಿಮವಾಗಿ ಕಣಕ್ಕಿಳಿಯುವರೆಂಬುದನ್ನು ಕಾದುನೋಡಬೇಕಿದೆ.

ಮನ್‌ಮುಲ್ ನಿರ್ದೇಶಕರಾಗಿ ಸತತ ಮೂರು ಬಾರಿ ಆಯ್ಕೆಯಾಗಿ ಒಂದು ವರ್ಷದ ಅವಧಿಗೆ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದ ಯು.ಸಿ.ಶಿವಕುಮಾರ್ ಇದೀಗ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದುವರೆಗೆ ಮನ್‌ಮುಲ್ ಚುನಾವಣೆ ಹೊರತುಪಡಿಸಿ ಬೇರೆ ಚುನಾವಣೆಗಳ ಕಡೆಗೆ ಒಲವು ತೋರದಿದ್ದ ಶಿವಕುಮಾರ್ ಈಗ ಒಕ್ಕಲಿಗರ ಸಂಘದ ನಿರ್ದೇಶಕರಾಗುವುದಕ್ಕೆ ಗಟ್ಟಿ ಮನಸ್ಸು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು, ನಾಯಕರೆಲ್ಲರ ಜೊತೆ ಉತ್ತಮ ಒಡನಾಟವನ್ನು ಹೊಂದಿರುವ ಜೊತೆಗೆ, ಮನ್‌ಮುಲ್ ಅಧ್ಯಕ್ಷ ಸ್ಥಾನಕ್ಕೆ ಒಂದು ವರ್ಷದ ಅವಧಿಗೆ ಆದ ಒಪ್ಪಂದದಂತೆ ರಾಜೀನಾಮೆ ನೀಡುವ ಮೂಲಕ ಎಲ್ಲರ ನಂಬಿಕೆ, ವಿಶ್ವಾಸ ಉಳಿಸಿಕೊಂಡಿದ್ದಾರೆ. ಇದು ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಪಕ್ಷದವರಿಂದ ನಿರೀಕ್ಷಿತ ಬೆಂಬಲ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಕಂಸಾಗರ ರವಿ ಕೂಡ ಒಕ್ಕಲಿಗರ ಸಂಘದ ನಿರ್ದೇಶಕರಾಗುವುದಕ್ಕೆ ಹೊರಟಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದ ರವಿ ಜೆಡಿಎಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಎಲ್ಲರೊಂದಿಗೆ ಗುರುತಿಸಿಕೊಂಡಿದ್ದಾರೆ. ಜೆಡಿಎಸ್ ನಾಯಕರೊಂದಿಗೆ ಉತ್ತಮ ಸಂಪರ್ಕವನ್ನಿಟ್ಟುಕೊಂಡಿರುವ ಕಂಸಾಗರ ರವಿ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಎಲ್ಲರ ಬೆಂಬಲ ಕೋರುತ್ತಿದ್ದಾರೆ. ಮತದಾರರನ್ನೂ ಸಂಪರ್ಕಿಸುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಕೈಹಿಡಿಯುವಂತೆ ಮನವಿ ಮಾಡುತ್ತಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಾಜಿ ಶಾಸಕ ಎಂ.ಶ್ರೀನಿವಾಸ್ ಅಳಿಯ ಎಚ್.ಎನ್.ಯೋಗೇಶ್ ಕೂಡ ಜಿಪಂ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಾಜಕೀಯ ಪ್ರವೇಶಿಸಿದರು. ಎಂ.ಶ್ರೀನಿವಾಸ್ ಕೂಡ ನಾಲ್ಕು ಬಾರಿ ಒಕ್ಕಲಿಗರ ಸಂಘದ ನಿರ್ದೇಶಕರಾಗಿದ್ದರು. ಅವರ ಆಶೀರ್ವಾದದಿಂದಲೇ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ವಯಸ್ಸಿನ ಕಾರಣದಿಂದ ಎಂ.ಶ್ರೀನಿವಾಸ್ ರಾಜಕಾರಣದಿಂದ ದೂರ ಉಳಿದಿದ್ದು, ಆ ಜಾಗಕ್ಕೆ ಹೆಚ್.ಎನ್.ಯೋಗೇಶ್ ಬರುವ ಪ್ರಯತ್ನ ನಡೆಸುತ್ತಿದ್ದಾರೆ. ಎಂ.ಶ್ರೀನಿವಾಸ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ಬೆಂಬಲದೊಂದಿಗೆ ಒಕ್ಕಲಿಗರ ಚುನಾವಣೆಯನ್ನು ಎದುರಿಸಿ ಗೆದ್ದುಬರುವುದಕ್ಕೆ ಯೋಗೇಶ್ ಮುಂದಾಗಿದ್ದಾರೆ.

ಒಮ್ಮೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವುದರೊಂದಿಗೆ ರಾಜಕೀಯ ಪ್ರವೇಶಿಸಿರುವ ಹೆಮ್ಮಿಗೆ ಕಾಳೇಗೌಡ ಈ ಬಾರಿ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅಣಿಯಾಗುತ್ತಿದ್ದಾರೆ. ಇವರ ಜೊತೆಗೆ ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ವಿಶಾಲ್ ರಘು ಕೂಡ ಒಕ್ಕಲಿಗರ ಸಂಘದ ಚುನಾವಣೆ ಮೂಲಕ ರಾಜಕೀಯ ಪ್ರವೇಶಿಸುವ ಆಕಾಂಕ್ಷೆಯನ್ನು ಹೊಂದಿದ್ದಾರೆ. ಬಹಿರಂಗವಾಗಿ ಈಗಲೇ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳದೆ ಮತದಾರರನ್ನು ಭೇಟಿಯಾಗುತ್ತಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರುತ್ತಾ ಮುನ್ನಡೆದಿದ್ದಾರೆ. ಇನ್ನು ಹಳೆಯ ಮುಖಗಳಲ್ಲಿ ನೆಲ್ಲೀಗೆರೆ ಬಾಲು ಮತ್ತೆ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನ್ಯಾಯಬೆಲೆ ಅಂಗಡಿಗಳಲ್ಲಿ ಬಿಗಡಾಯಿಸಿದ ಸರ್ವರ್ ಸಮಸ್ಯೆ
ಮಠಗಳು ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದು: ಸುತ್ತೂರು ಶ್ರೀಗಳು