ಪೇದೆ ಮೇಲೆ ಹಲ್ಲೆ ಪ್ರಕರಣ: ಸಾಮೂಹಿಕ ವರ್ಗಾವಣೆಗೆ ಪೊಲೀಸರ ಮನವಿ

KannadaprabhaNewsNetwork |  
Published : Feb 16, 2024, 01:50 AM IST
15ಕೆಪಿಆರ್‌ಸಿಆರ್02:  | Kannada Prabha

ಸಾರಾಂಶ

ದೇವದುರ್ಗ ಶಾಸಕಿ ಕರೆಮ್ಮ ಪುತ್ರ ಹಾಗೂ ಸಹೋದರನಿಂದ ಪೇದೆ ಮೇಲೆ ಹಲ್ಲೆ ಮಾಡಿದ್ದರ ಹಿನ್ನೆಲೆ 59 ಪೊಲೀಸರ ಒಕ್ಕೊರಲು ಶಾಸಕಿ ಹಾಗೂ ಬೆಂಬಲಿಗರಿಂದ ರಕ್ಷಣೆ ನೀಡಬೇಕು, ಸಾಮೂಹಿಕ ವರ್ಗಾವಣೆ ಮಾಡಬೇ ಎಸ್ಪಿಗೆ ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ ರಾಯಚೂರು

ಅಕ್ರಮ ಮರಳು ತಡೆದ ವಿಚಾರಕ್ಕೆ ಸಂಬಂಧಿಸಿದಂತೆ ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ ಪುತ್ರ ಹಾಗೂ ಬೆಂಬಲಿಗರು ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿರುವ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಶಾಸಕಿ ಹಾಗೂ ಬೆಂಬಲಿಗರಿಂದ ರಕ್ಷಣೆ ನೀಡಬೇಕು ಹಾಗೂ ಸಾಮೂಹಿಕ ವರ್ಗಾವಣೆ ಮಾಡಬೇಕು ಎಂದು ಠಾಣೆಯ ಪೊಲೀಸ್‌ ಸಿಬ್ಬಂದಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ದೇವದುರ್ಗ ಪೊಲೀಸ್ ಠಾಣೆಗಳ ವಿವಿಧ ವಿಭಾಗಗಳ ಒಟ್ಟು 59 ಪೊಲೀಸರು ಒಕ್ಕೊರಲಿನ ಮನವಿ ಸಲ್ಲಿಸಿದ್ದಾರೆ. ದೇವದುರ್ಗದ ಕಾನೂನು ಸುವ್ಯವಸ್ಥೆ ವಿಭಾಗದ 36 ಹಾಗೂ ಸಂಚಾರಿ ಠಾಣೆಯ 23 ಮುಖ್ಯಪೇದೆ, ಪೇದೆಗಳು ಸೇರಿಕೊಂಡು ಎಸ್ಪಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ದೇವದುರ್ಗ ತಾಲೂಕಿನಲ್ಲಿ ಜೂಜಾಟ, ಅಕ್ರಮ ಮರಳು ದಂಧೆ, ಇಸ್ಪೀಟ್, ಮಟಕಾ, ಕೋಳಿ ಪಂದ್ಯ, ಐಎಂವಿ, ಡಿಡಿ ಪ್ರಕರಣಗಳಲ್ಲಿ ದಾಳಿ ಮಾಡಿದಾಗ ಯಾರನ್ನೇ ಹಿಡಿದುಕೊಂಡು ಬಂದರೂ ನಮ್ಮನ್ನು ಕೇಳಬೇಕು. ಪ್ರಕರಣ ದಾಖಲಿಸುವಾಗ ನಮ್ಮ ಬೆಂಬಲಿಗರು ಹೌದೋ ಅಲ್ಲವೋ ಎಂದು ಖಚಿತಪಡಿಸಬೇಕು ಎಂದು ಶಾಸಕರು ತಿಳಿಸುತ್ತಿದ್ದಾರೆ. ನಮ್ಮ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡ್ತಾರೆ ಎಂದು ಪೊಲೀಸರು ದೂರಿನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಶಾಸಕಿ ಕರೆಮ್ಮ ಜಿ.ನಾಯಕ ವರ್ತನೆಯಿಂದ ನೈತಿಕ ಸ್ಥೈರ್ಯ ಕುಸಿದು, ಮಾನಸಿಕ ಯಾತನೆ ಅನುಭವಿಸುತ್ತಿದ್ದೇವೆ. ಜೀವದ ಭಯದಲ್ಲಿ ನಾವು ಕೆಲಸ ಮಾಡುವಂತಾಗಿದೆ. ಒಂದು ವೇಳೆ ರಾಜಕೀಯ ಹಸ್ತಕ್ಷೇಪದಿಂದ ಪೊಲೀಸ್ ಸಿಬ್ಬಂದಿ ವರ್ಗಾವಣೆ ಅಥವಾ ಅಮಾನತಾದರೆ ನಮ್ಮ ಕುಟುಂಬ ಆತಂಕಕ್ಕೆ ಒಳಗಾಗಬಹುದು. ಒಂದು ವೇಳೆ ಶಿಸ್ತು ಕ್ರಮ ಜರುಗಿಸುವುದಾದರೆ, ದೇವದುರ್ಗ ಠಾಣೆಯ ಎಲ್ಲ ಸಿಬ್ಬಂದಿಯನ್ನು ಸಾಮೂಹಿಕ ವರ್ಗಾವಣೆ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ನಿಖಿಲ್‌ ಬಿ., ದೇವದುರ್ಗದ ಪೊಲೀಸರು ಕಚೇರಿಯ ಇನ್ ವಾರ್ಡ್‌ನಲ್ಲಿ ದೂರು ನೀಡಿದ್ದು, ಈ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?