ಐಮಂಗಲದ ಹರಳಯ್ಯ ಗುರುಪೀಠದ ಶ್ರೀಗಳ ಮೇಲೆ ಹಲ್ಲೆ :ದೂರು ದಾಖಲು

KannadaprabhaNewsNetwork |  
Published : Jul 07, 2026, 02:00 AM IST
ಚಿತ್ರ 3 | Kannada Prabha

ಸಾರಾಂಶ

ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಹರಳಯ್ಯ ಶ್ರೀಗಳು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಐಮಂಗಲ‌ ಬಳಿಯ ಶಿವಶರಣ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಶ್ರೀಗಳ ಮೇಲೆ ಅವರ ಮಠದ ಬಳಿಯೇ ಹಲ್ಲೆ ನಡೆಸಲಾಗಿದೆ.

ಶ್ರೀಗಳು ದೂರಿನಲ್ಲಿ ಜುಲೈ 5ರಂದು ರಾತ್ರಿ 8:30ರ ಸುಮಾರಿಗೆ ಗುರುಪೀಠದ ಪಕ್ಕದ ಜಮೀನಿನವರಾದ ಆದಿರಾಳು ಗ್ರಾಮದ ಲಿಂಗಾಯಿತ ಸಮಾಜದ ಸಿದ್ದೇಶ್ವರ ಹಾಗೂ ಆತನ ತಮ್ಮ ಆಕಾಶ್ ಎನ್ನುವವರು ಗುರುಪೀಠದ ಬೆಳವಣಿಗೆಯನ್ನು ಸಹಿಸದೆ ಹಲ್ಲೆ ನಡೆಸಿದ್ದಾರೆ. ಈಗಾಗಲೇ ಅವರ ಜಮೀನಿನಲ್ಲಿ ಗುರುಪೀಠವನ್ನು ಒತ್ತುವರಿಯಾಗಿ ಕಟ್ಟಲಾಗಿದೆ ಎಂದು ನ್ಯಾಯಾಲಯದಲ್ಲಿ ದಾವೆ ಇದ್ದು ಅದು ವಿಚಾರಣೆಯ ಹಂತದಲ್ಲಿದೆ. ಭಾನುವಾರ ರಾತ್ರಿ ಶ್ರೀಗಳು ಹಾಗೂ ಅವರ ಶಾಲಾ ವಾಹನದ ಚಾಲಕ ಭೀಮರಾಜ್ ಹಾಗೂ ರಂಗಪ್ಪ ಎನ್ನುವವರು ಮಠದಲ್ಲಿದ್ದಾಗ ಬೈಕ್‌ನಲ್ಲಿ ಮಠದ ಬಳಿ ಬಂದ ಸಿದ್ದೇಶ್ವರ ಹಾಗೂ ಆಕಾಶ್ ಅವಾಚ್ಯವಾಗಿ ನಿಂದಿಸುತ್ತಾ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.

ನನ್ನನ್ನು ಕೊಲೆ ಮಾಡುವ ಉದ್ದೇಶದಿಂದಲೇ ತಲೆ, ಮೂಗು, ಎದೆಗೆ ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದ ಚಾಲಕರಾದ ಭೀಮರಾಜ್ ಮತ್ತು ರಂಗಪ್ಪನವರ ಮೇಲೂ ಹಲ್ಲೆ ನಡೆಸಿದ್ದು ಪ್ರಾಣ ಬೆದರಿಕೆ ಹಾಕಿದ್ದಾರೆ. ಅಲ್ಲಿಂದ ಐಮಂಗಲ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗಲೂ ಸಹ ಹಿಂದೆಯೇ ಬಂದ ಸಿದ್ದೇಶ್ವರ ಹಾಗೂ ಆಕಾಶ್ ಠಾಣೆಯಲ್ಲಿ ಪೋಲೀಸರ ಎದುರು ಕುರ್ಚಿಯಲ್ಲಿ ಕುಳಿತಿದ್ದ ನನಗೆ ಕಾಲಿನಿಂದ ಒದ್ದು ಕೆಡವಿ ಕುರ್ಚಿ ಮುರಿದು ಹಾಕಿ ಹೊರಟು ಹೋಗಿದ್ದಾರೆ. ಆದ್ದರಿಂದ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಸ್ವಾಮೀಜಿ ದೂರು ಸಲ್ಲಿಸಿದ್ದಾರೆ.

*ಮತ್ತೊಂದು ದೂರು: ಬಸವ ಹರಳಯ್ಯ ಸ್ವಾಮೀಜಿಗಳು ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ಠಾಣೆಯಲ್ಲಿ ಸಿಪಿಸಿ ಮೌನೇಶ್ವರ ಪಹರೆ ಕರ್ತವ್ಯದಲ್ಲಿದ್ದಾಗ ಠಾಣೆಗೆ ಬಂದ ಸಿದ್ದೇಶ್ವರ ಮತ್ತು ಆಕಾಶ್ ರನ್ನು ನೋಡಿ ಹರಳಯ್ಯ ಶ್ರೀಗಳು ನೀವೇ ಬಟ್ಟೆ ಹರಿದುಕೊಂಡು ದೂರು ಕೊಡಲು ಬಂದಿದ್ದೀರಾ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಿದ್ದೇಶ್ವರ ಹಾಗೂ ಆಕಾಶ್ ಹರಳಯ್ಯ ಶ್ರೀಗಳಿಗೆ ಅಡ್ಡ ಹಾಕಿಕೊಂಡು ಕಾಲಿನಿಂದ ಹೊಡೆದಾಗ ಕುರ್ಚಿ ಮುರಿದು ಬಿದ್ದು ಶ್ರೀಗಳು ಕೆಳಗೆ ಬಿದ್ದಿದ್ದಾರೆ. ನಂತರ ಪೊಲೀಸರು ಇಬ್ಬರನ್ನು ಸಮಾಧಾನ ಪಡಿಸಿ ಗಲಾಟೆ ಬಿಡಿಸಿದ್ದಾರೆ. ಠಾಣೆಗೆ ನುಗ್ಗಿ ಗಲಾಟೆ ಮಾಡಿರುವ ಈ ಇಬ್ಬರ ಮೇಲೂ ಸೂಕ್ತ ಕ್ರಮ ಕೈಗೊಳ್ಳಿ ಎಂದು ಠಾಣೆಯ ಸಿಪಿಸಿ ಮೌನೇಶ್ವರ ದೂರು ದಾಖಲಿಸಿದ್ದಾರೆ. ಗಾಯಾಳು ಹರಳಯ್ಯ ಶ್ರೀಗಳು, ಚಾಲಕ ಭೀಮರಾಜ್ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಐಮಂಗಲ‌ ಠಾಣೆ ಸಿಪಿಐ ಗುಡ್ಡಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೆಸ್ಸೆಸ್‌ ಪಥಸಂಚಲನಕ್ಕೆ ಅನುಮತಿ ಕಡ್ಡಾಯ: ಪ್ರಿಯಾಂಕ್‌
ಬಂಟ್ವಾಳದ ಈ ಶಾಲೇಲಿ ಮಕ್ಕಳ ಸುರಕ್ಷತೆಗೆ ಆರ್‌ಎಫ್‌ಐಡಿ ಟ್ಯಾಗ್‌!