ಮನೆಯಲ್ಲಿ ಮಕ್ಕಳಿಗೆ ಸಿಗುತ್ತಿಲ್ಲ ಸಂಸ್ಕಾರ, ಸಂಸ್ಕೃತಿ: ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ

KannadaprabhaNewsNetwork | Published : Jan 17, 2024 1:46 AM

ಸಾರಾಂಶ

ಮನುಷ್ಯನಿಗೆ ಹಣ ಬೇಕೇ ಹೊರತು, ಅದೇ ಪ್ರಧಾನವಾಗಬಾರದು. ಭಾರತೀಯ ಸಂಸ್ಕಾರ, ಸಂಸ್ಕೃತಿ, ಪರಂಪರೆಗಳ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿ, ಶ್ರೇಷ್ಠ ನಾಗರಿಕರನ್ನಾಗಿಸುವ ಕಾರ್ಯ ಪಾಲಕರದ್ದಾಗಬೇಕು. ಬೆಂಗಳೂರಿನಂತಹ ಮಾಯಾನಗರದ ಪಾಶಕ್ಕೆ ಬಲಿಯಾಗದಂತೆ ಎಚ್ಚರ ವಹಿಸಬೇಕು.

ಯಲ್ಲಾಪುರ:ಮನೆಯಲ್ಲಿ ಮಕ್ಕಳಿಗೆ ಸರಿಯಾದ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವು ಮೂಡಿಸುತ್ತಿಲ್ಲ. ಅವರು ಹಣ ಸಂಪಾದನೆಯ ಬೆನ್ನು ಹತ್ತುವ ಮನಃಸ್ಥಿತಿಯ ಶಿಕ್ಷಣ ನೀಡುತ್ತಿದ್ದು, ಇದನ್ನೇ ಮಹತ್ವದ್ದೆಂದು ಭಾವಿಸಿದ್ದೇವೆ ಎಂದು ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.

ಅವರು, ಕನ್ನಡ ಸಂಸ್ಕೃತಿ ಇಲಾಖೆ ಕಾರವಾರ ಹಾಗೂ ಭಾರತೀ ನೃತ್ಯ ಕಲಾಕೇಂದ್ರ ಯಲ್ಲಾಪುರ ಸಂಯುಕ್ತವಾಗಿ ಗ್ರಾಮದೇವಿ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಂಡ ನಾಟ್ಯವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮನುಷ್ಯನಿಗೆ ಹಣ ಬೇಕೇ ಹೊರತು, ಅದೇ ಪ್ರಧಾನವಾಗಬಾರದು. ಭಾರತೀಯ ಸಂಸ್ಕಾರ, ಸಂಸ್ಕೃತಿ, ಪರಂಪರೆಗಳ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿ, ಶ್ರೇಷ್ಠ ನಾಗರಿಕರನ್ನಾಗಿಸುವ ಕಾರ್ಯ ಪಾಲಕರದ್ದಾಗಬೇಕು. ಬೆಂಗಳೂರಿನಂತಹ ಮಾಯಾನಗರದ ಪಾಶಕ್ಕೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಪಾಲಕರು ಮಕ್ಕಳಲ್ಲಿ ದೇವರನ್ನು ಕಂಡು ತಲ್ಲೀನತೆ ಹೊಂದುವ ಸನ್ನಿವೇಶ ಕಾಣುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಕಲಾಕೇಂದ್ರದ ಸುಮಾ ಹೆಗಡೆ ದಂಪತಿಗಳ ಕೊಡುಗೆ ಅನುಪಮ ಎಂದರು.ಅಧ್ಯಕ್ಷತೆ ವಹಿಸಿದ್ದ ಮುಖಂಡ ಹರಿಪ್ರಕಾಶ ಕೋಣೇಮನೆ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ೬೪ ವಿದ್ಯೆಗಳಿವೆ. ಈ ಎಲ್ಲ ವಿದ್ಯೆಗಳ ಅರಿವು ಮಾಡಿಕೊಳ್ಳುವ ಅಗತ್ಯವಿದೆ. ಆಧುನಿಕ ಕಾಲಘಟ್ಟದಲ್ಲಿರುವ ನಾವು ಮೊಬೈಲ್ ಸೇರಿದಂತೆ ಹಲವು ಆಕರ್ಷಣೀಯ ವಸ್ತುಗಳಿಂದ ಮಕ್ಕಳನ್ನು ದೂರವಿರಿಸಿ, ಭಾರತೀಯ ಸಂಸ್ಕೃತಿಯ ಪ್ರತಿಬಿಂಬಗಳಾದ ಯೋಗ, ಯಕ್ಷಗಾನ, ಸಂಗೀತ, ನೃತ್ಯ ಎಲ್ಲವೂ ಮನಸ್ಸು ವಿಕಾಸಗೊಳಿಸುತ್ತವೆ. ಆದ್ದರಿಂದಲೇ ವಿಶ್ವದ ಪ್ರಾಜ್ಞರು ಭಾರತೀಯ ಸಂಸ್ಕೃತಿಯ ಕುರಿತು ಆಕರ್ಷಿತರಾಗುತ್ತಿದ್ದಾರೆ. ನಮ್ಮ ಸಂಸ್ಕೃತಿ ಮನಸ್ಸನ್ನು ವಿಭಜಿಸುವುದಿಲ್ಲ. ಆದ್ದರಿಂದಲೇ ನಮ್ಮ ಮಕ್ಕಳಿಗೆ ಸಮರ್ಪಕ ಸಂಸ್ಕಾರದ ಶಿಕ್ಷಣ ತೀರಾ ಅಗತ್ಯವಿದೆ ಎಂದು ಹೇಳಿದರು. ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿ, ಮಕ್ಕಳಿಗೆ ಸನ್ಮಾರ್ಗದ ಸತ್‌ಚಿಂತನೆ ನೀಡಿದಾಗ ಅವರು ಸನ್ಮಾರ್ಗದಲ್ಲಿ ಮುನ್ನಡೆಯುತ್ತಾರೆ. ಮಕ್ಕಳು ಸಂಸ್ಕಾರದ ಕೊರತೆಯಿಂದಾಗಿಯೇ ದಾರಿ ತಪ್ಪುತ್ತಾರೆ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಸುಜ್ಞಾನ ಸೇವಾ ಫೌಂಡೇಶನ್ ಅಧ್ಯಕ್ಷ ಜಿ.ಎನ್. ಭಟ್ಟ, ವಿ.ಟಿ. ಹೆಗಡೆ ತೊಂಡೇಕೆರೆ, ಸುಮಾ ವೆಂಕಟರಮಣ ತೊಂಡೆಕೆರೆ ಉಪಸ್ಥಿತರಿದ್ದರು. ನಂತರ ನಡೆದ ನೃತ್ಯ ಪ್ರದರ್ಶನದ ಹಿನ್ನಲೆಯಲ್ಲಿ ಧಾರವಾಡದ ವಾಣಿ ಉಡುಪಿ (ಹಾಡುಗಾರಿಕೆ), ಡಾ. ಗೋಪಿಕೃಷ್ಣ (ಮೃದಂಗ), ಶಂಕರ ಕಬಾಡಿ (ವಾಯಲಿನ್), ರಾಘವೇಂದ್ರ ರಂಗದೋಳ ಶಿವಮೊಗ್ಗ (ರಿದಮ್ ಪ್ಯಾಡ್) ಹಾಗೂ ನೃತ್ಯ ಶಿಕ್ಷಕಿ ಸುಮಾ ವೆಂಕಟರಮಣ ಹೆಗಡೆ (ನಟುವಾಂಗ)ದಲ್ಲಿ ಉತ್ತಮ ಸಹಕಾರ ನೀಡಿದರು. ವಾಣಿ ಉಡುಪಿ ಪ್ರಾರ್ಥಿಸಿದರು. ಶಿಕ್ಷಕಿ ನಿರ್ಮಲಾ ಭಾಗ್ವತ್ ಸ್ವಾಗತಿಸಿದರು. ಲಕ್ಷ್ಮೀ ಭಟ್ಟ ಚಿಮ್ನಳ್ಳಿ ನಿರ್ವಹಿಸಿ, ವಂದಿಸಿದರು.

Share this article