ಪುತ್ತೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಟಲ್ ವಿರಾಸತ್ ಸಮಾವೇಶ ೧೯ರಂದು ಪುತ್ತೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಕಾರ್ಯಕ್ರಮದ ಸಂಚಾಲಕ, ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಮಾತನಾಡಿ, ಇದೊಂದು ಅಪೂರ್ವ ಕಾರ್ಯಕ್ರಮ. ದೇಶಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆ ಅಪಾರ. ಕವಿ ಮನಸಿನ ವಾಜಪೇಯಿ ಅಜಾತಶತ್ರುವಾಗಿದ್ದರು. ಅವರು ಜಾರಿಗೊಳಿಸಿದ ಅನೇಕ ಯೋಜನೆಗಳು ದೇಶವನ್ನು ಹೊಸ ದಿಕ್ಕಿನತ್ತ ಕೊಂಡೊಯ್ದಿದೆ. ಪೋಖ್ರಾನ್ ಅಣುಬಾಂಬ್ ಪರೀಕ್ಷೆ ಮೂಲಕ ಜಗತ್ತಿನಲ್ಲಿ ಭಾರತದ ಶಕ್ತಿ ಅನಾವರಣಗೊಳಿಸಿದ ನಾಯಕ ಅಟಲ್. ಈ ಮೇರು ನಾಯಕನ ಸ್ಮರಣೆಯಲ್ಲಿ ನಡೆಯುವ ಕಾರ್ಯಕ್ರಮ ಇದಾಗಿದೆ ಎಂದರು.
ವಾಜಪೇಯಿ ಅವರು ೧೯೯೧ರಲ್ಲಿ ಪುತ್ತೂರಿಗೆ ಬಂದಾಗ ಭಾಷಣ ಮಾಡಿದ ಜಾಗದಲ್ಲೇ ಅಟಲ್ ವಿರಾಸತ್ ನಡೆಯುತ್ತಿದೆ. ಜನಸಂಘ ಕಾಲದಿಂದಲೇ ಸಂಘಟನೆಗೆ ಶ್ರಮಿಸಿದ ಪಕ್ಷದ ಹಿರಿಯರನ್ನು ಗುರುತಿಸಿ ಗೌರವಿಸಲಾಗುತ್ತದೆ. ಬೆಳಗ್ಗೆ ಸಮಾವೇಶ ಆರಂಭಕ್ಕೆ ಮುನ್ನ ಗಾಯಕ ರವೀಂದ್ರ ಪ್ರಭು ತಂಡದಿಂದ ದೇಶಭಕ್ತಿ ಗೀತೆ ಗಾಯನ ನಡೆಯಲಿದೆ. ಅಟಲ್ ಜೀವನದ ಹೆಜ್ಜೆಗುರುತುಗಳನ್ನುಸ್ಕ್ರೀನ್ ಮೂಲಕ ಬಿತ್ತರಿಸಲಾಗುತ್ತದೆ ಎಂದು ಕುಂಪಲ ಹೇಳಿದರು.ಮಾಜಿ ಶಾಸಕ ಸಂಜೀವ ಮಠಂದೂರು, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸುನಿಲ್ ಆಳ್ವ, ಸೀತಾರಾಮ ರೈ ಕೆದಂಬಾಡಿ ಗುತ್ತು ಇದ್ದರು.