ಐಎಫ್‌ಎಸ್‌ನಲ್ಲಿ ಅಥಣಿ ಬಸವರಾಜ ದೇಶಕ್ಕೆ ಟಾಪರ್‌!

KannadaprabhaNewsNetwork |  
Published : May 10, 2026, 02:00 AM ISTUpdated : May 10, 2026, 08:30 AM IST
Basavaraja

ಸಾರಾಂಶ

ಕೇಂದ್ರ ಲೋಕಸೇವಾ ಆಯೋಗ ನಡೆಸುವ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಯುವಕ ಬಸವರಾಜ ಧರೆಪ್ಪ ಕೆಂಪವಾಡ ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ಈ ಮೂಲಕ ಕನ್ನಡ ನಾಡಿನ ಹೆಮ್ಮೆಯನ್ನೇ ಹೆಚ್ಚಿಸಿದ್ದಾರೆ.

  ಅಥಣಿ (ಬೆಳಗಾವಿ) :  ಕೇಂದ್ರ ಲೋಕಸೇವಾ ಆಯೋಗ ನಡೆಸುವ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಯುವಕ ಬಸವರಾಜ ಧರೆಪ್ಪ ಕೆಂಪವಾಡ ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ಈ ಮೂಲಕ ಕನ್ನಡ ನಾಡಿನ ಹೆಮ್ಮೆಯನ್ನೇ ಹೆಚ್ಚಿಸಿದ್ದಾರೆ.

ಬಸವರಾಜ ಕೆಂಪವಾಡ ಅವರಿಗೆ ಕೇವಲ 25 ವರ್ಷ. 2025ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಎದುರಿಸಿದ್ದರು. ಆದರೆ, ಆಗ ಯಶಸ್ವಿಯಾಗಿರಲಿಲ್ಲ. ಆದರೆ, ಛಲ ಬಿಡದೇ, ಯಾವುದೇ ಕೋಚಿಂಗ್‌ ಕೂಡ ಪಡೆಯದೇ ನಿತ್ಯ ಓದುತ್ತಲೇ 2026ರಲ್ಲಿ ದೇಶಕ್ಕೆ ಐಎಫ್‌ಎಸ್‌ನಲ್ಲಿ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಈ ಮೂಲಕ ಕೋಚಿಂಗ್‌ಗಿಂತಲೂ ಸಾಧಿಸಬೇಕು ಎಂಬ ಛಲ ಎಲ್ಲರಲ್ಲಿಯೂ ಇರಬೇಕು. ಸೋತಾಗ ನೋವು ಪಟ್ಟುಕೊಳ್ಳದೇ ಮುನ್ನುಗ್ಗಬೇಕು. ಗೆಲುವಿನ ದಾರಿ ಕಂಡುಕೊಳ್ಳಬೇಕು ಎನ್ನುವುದು ಬಸವರಾಜ ಕೆಂಪವಾಡ ಅವರ ನುಡಿ.

ಮೊರಾರ್ಜಿ ಶಾಲೆಯಲ್ಲಿ ಕಲಿತ ಹುಡುಗ:

ಬಸವರಾಜ ಕೆಂಪವಾಡ ಅವರ ತಂದೆ ಧರೆಪ್ಪ ಕೆಂಪವಾಡ ಅವರಿಗೆ ಇರುವುದು ಕೇವಲ ಒಂದೂವರೆ ಎಕರೆ ಜಮೀನು. ರೈತರಾಗಿದ್ದುಕೊಂಡೇ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಕೃಷಿಯಲ್ಲಿಯೇ ಬದುಕು ಕಟ್ಟಿಕೊಂಡಿದ್ದ ಬಸವರಾಜ ಅವರ ತಂದೆ ತಾಯಿ ಅದರಲ್ಲಿ ಬಂದ ಹಣದಿಂದಲೇ ನಾಲ್ವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಬಸವರಾಜ ಅವರು 1ರಿಂದ 5ನೇ ತರಗತಿಯನ್ನು ಸವದಿಯಲ್ಲಿ ಓದಿ, ನಂತರ 6 ರಿಂದ 10ನೇ ತರಗತಿಯನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆದುಕೊಂಡರು. ನಂತರ ಪಿಯುನಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಿಎಸ್‌ಸಿ ಫಾರೆಸ್ಟ್‌ನಲ್ಲಿ ಪದವಿಯನ್ನು ಪಡೆದು 2023ರಲ್ಲಿ ತೇರ್ಗಡೆಯಾದರು.

ಸತತ ಪರಿಶ್ರಮ, ಕಠಿಣ ಓದು:

ಪದವಿ ಪಡೆದ ನಂತರ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯ್ಕೆ ಮಾಡಿಕೊಂಡ ಬಸವರಾಜ ಅವರು ಯುಪಿಎಸ್‌ಸಿ ಪರೀಕ್ಷೆ ಎದುರಿಸಿದರು. ಆದರೆ, ವಿಫಲವಾದರೂ ಪ್ರಯತ್ನ ಬಿಡಲಿಲ್ಲ. ನಂತರ 2026ರಲ್ಲಿ ಐಎಫ್‌ಎಸ್‌ನಲ್ಲಿ ರಾಷ್ಟ್ರಕ್ಕೆ ಮೊದಲ ರ್‍ಯಾಂಕ್‌ ಪಡೆದು ಅದ್ವಿತೀಯ ಸಾಧನೆ ಮಾಡಿದರು. ಈ ಅದ್ವಿತೀಯ ಸಾಧನೆ ಅವರ ಹುಟ್ಟೂರು ಸವದಿಯಲ್ಲಿ ಸಂಭ್ರಮ ಮನೆ ಮಾಡಿದೆ.

ಬಡತನ ಅಡ್ಡಿ ಅಲ್ಲ:

ನಾನು ಯಾವುದೇ ವಿಶೇಷ ಕೋರ್ಸ್‌, ಕೋಚಿಂಗ್ ಮೊರೆ ಹೋಗದೆ ಹಿರಿಯರ ನಿರಂತರ ಮಾರ್ಗದರ್ಶನದಂತೆ ಓದಿ ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಸಾಧ್ಯವಾಯಿತು. ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ, ಮೊರಾರ್ಜಿ ವಸತಿ ಶಾಲೆಯಲ್ಲಿ ಕಲಿತ ನಾನು, ಓರ್ವ ರೈತನ ಮಗನಾಗಿ ಈ ಹಂತಕ್ಕೆ ತಲುಪಿದ್ದು ಅತೀವ ಹೆಮ್ಮೆ ಮತ್ತು ಸಂತಸ ತಂದಿದೆ. ಸಾಧಿಸುವ ಛಲವಿದ್ದರೆ ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ನಾನೇ ಸಾಕ್ಷಿ.

-ಬಸವರಾಜ ಧರೆಪ್ಪ ಕೆಂಪವಾಡ, ಯುಪಿಎಸ್ಸಿ ಟಾಪರ್.ಶಿಕ್ಷಣಕ್ಕೆ ಇರಲಿಲ್ಲ ಕೊರತೆ

ರಾಷ್ಟ್ರಮಟ್ಟದಲ್ಲಿ ಉನ್ನತ ಸಾಧನೆ ಮಾಡಿರುವುದು ನಮ್ಮೆಲ್ಲರಿಗೆ ಸಂತೋಷ ತಂದಿದೆ. ನಮಗೆ ಜಮೀನು ಕಡಿಮೆ ಇದ್ದರೂ ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆ ಮಾಡಿಲ್ಲ. ನಾನು ಬೇರೆಯವರ ಜಮೀನುಗಳನ್ನು ಸಮಪಾಲಿನ ರೂಪದಲ್ಲಿ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಿದ್ದೇನೆ. ನನ್ನ ಶ್ರಮಕ್ಕೆ ಈ ಭೂತಾಯಿ ಮತ್ತು ಆ ದೇವರು ಕೃಪೆ ತೋರಿದ್ದಾನೆ. ಮಗ ಬಸವರಾಜು ಮಾಡಿರುವ ಸಾಧನೆ ನಮ್ಮ ಕುಟುಂಬಕ್ಕೆ ಅಷ್ಟೇ ಅಲ್ಲ, ಇಡೀ ಗ್ರಾಮವೇ ಹೆಮ್ಮೆ ಮತ್ತು ಸಂತಸ ತಂದಿದೆ.

-ಧರೆಪ್ಪ ಸಿದ್ದಪ್ಪ ಕೆಂಪವಾಡ, ಬಸವರಾಜ ತಂದೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ದಕ್ಷತೆ, ಪಾರದರ್ಶಕತೆ ಇದ್ದರೆ ಸಂಘಟನೆ ಪ್ರಗತಿ: ಮಲ್ಲಿಕಾರ್ಜುನ ಬಳ್ಳಾರಿ
ಫಾಸ್ಟ್‌ಫುಡ್‌ ಬದಲು ತರಕಾರಿ, ಹಣ್ಣು ದೇಹಕ್ಕೆ ಉತ್ತಮ