ಬ್ಯಾಹಟ್ಟಿ:
ಮಧ್ಯರಾತ್ರಿ ಸುಮಾರು 2.20ರ ವೇಳೆಯಲ್ಲಿ ಎಟಿಎಂ ಕೇಂದ್ರಗಳಿಗೆ ನುಗ್ಗಿರುವ ಕಳ್ಳರು, ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಯಂತ್ರ ಕತ್ತರಿಸಿ ಒಳಗಿದ್ದ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ. ಬ್ಯಾಹಟ್ಟಿಯ ಎಟಿಎಂನಲ್ಲಿ ಸುಮಾರು ₹3 ಲಕ್ಷ ಹಾಗೂ ಸುಳ್ಳದ ಎಟಿಎಂನಲ್ಲಿ ಸುಮಾರು ₹11 ಲಕ್ಷ ಹಣ ದೋಚಲಾಗಿದೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಮುರಗೇಶ್ ಚೆನ್ನಣ್ಣವರ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಿಸಿ ಕ್ಯಾಮೆರಾದಲ್ಲಿನ ದೃಶ್ಯಾವಳಿ ಸಿಗದಂತೆ ಸ್ಪ್ರೇ ಕೂಡ ಮಾಡಲಾಗಿದೆ. ಆದರೆ, ಸಿಸಿ ಕ್ಯಾಮರಾದಲ್ಲಿನ ದೃಶ್ಯಾವಳಿಗಳಿಗೆ ಯಾವುದೇ ಧಕ್ಕೆಯಾಗಿಲ್ಲ. ಇದೀಗ ಅವುಗಳ ಪರಿಶೀಲನೆ ನಡೆದಿದ್ದು ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಎರಡೂ ಗ್ರಾಮಗಳಲ್ಲಿ ಒಂದೇ ರಾತ್ರಿ ಎಟಿಎಂಗಳಿಗೆ ಕನ್ನ ಹಾಕಿರುವುದು ಆತಂಕಕ್ಕೆ ಕಾರಣವಾಗಿದೆ. ಗ್ರಾಮಗಳಲ್ಲಿ ರಾತ್ರಿ ಪೊಲೀಸ್ ಗಸ್ತು ಹೆಚ್ಚಿಸುವ ಜತೆಗೆ ಎಟಿಎಂ ಕೇಂದ್ರಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಎಟಿಎಂನಿಂದ ದೋಚಲಾದ ನಿಖರ ಹಣದ ಮೊತ್ತ ಹಾಗೂ ಕೃತ್ಯದಲ್ಲಿ ಭಾಗಿಯಾಗಿರುವವರ ವಿವರಗಳು ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.