ಕನ್ನಡಪ್ರಭ ವಾರ್ತೆ ಕಲಬುರಗಿ
ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಪುತ್ಥಳಿಗೆ ಮಾಲೆ ಹಾಕಿ, ಪುಷ್ಪನಮನ ಸಲ್ಲಿಸಿ, ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ರಾಜ್ಯದ ಶಕ್ತಿಪೀಠವಾಗಿರುವ ಕಲ್ಯಾಣ ಕರ್ನಾಟಕದ ಕಲ್ಯಾಣ ನಮ್ಮ ಸರ್ಕಾರದ ಆದ್ಯತೆ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆ, ಹೂಡಿಕೆಗೆ ವೇಗ ನೀಡುವ ಸಲುವಾಗಿ ‘ಕಲ್ಯಾಣ ಕರ್ನಾಟಕ ಎಕಾನಮೀ ಮಿಷನ್’ ಸೇರಿದಂತೆ 9 ಅಂಶಗಳ ಯೋಜನೆಯನ್ನು ಘೋಷಿಸಿದರು.
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ಪೊಲೀಸ್ ತುಕಡಿಗಳಿಂದ ನಡೆದ ಆಕರ್ಷಕ ಪಥಸಂಚಲನ ವೀಕ್ಷಿಸಿದರು. ರಾಯಚೂರಿನ ಮಹಾತ್ಮ ಗಾಂಧಿ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರಂಸಿಂಗ್ ಧ್ವಜಾರೋಹಣ ನೆರವೇರಿಸಿದರು. ಬಳ್ಳಾರಿಯಲ್ಲಿ ಸಚಿವ ರಘು ಮೂರ್ತಿ, ಯಾದಗಿರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.ಹೊಸಪೇಟೆಯ ಡಾ.ಪುನೀತ್ ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಥ ಸಂಚಲನ ವಂದನೆ ಸ್ವೀಕರಿಸಿದ ಸಚಿವ ಬಸವಂತಪ್ಪ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಉತ್ಸವದಲ್ಲಿ ಮಹಿಳಾ ಅಧಿಕಾರಿಗಳ ಸಂಗಮ ವಿಶೇಷವಾಗಿತ್ತು.ಕಲ್ಯಾಣ ಕರ್ನಾಟಕ ಉತ್ಸವದಲ್ಲೂ ‘ವಂದೇ,..’ ಎರಡೇ ಚರಣಕ್ಕೆ ಸೀಮಿತ:
ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಬಸವಂತಪ್ಪ (ಬಸವಂತಪ್ಪ) ಅವರು ಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಸಚಿವರಿಗೆ ಜಿಲ್ಲೆಯ ಉನ್ನತ ಮಹಿಳಾ ಅಧಿಕಾರಿಗಳು ಜೊತೆಯಾದರು. ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗರಿಮಾ ಪನ್ವಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಅನುಪಮಾ ಹಾಗೂ ತಹಶೀಲ್ದಾರ್ ಶೃತಿ ಅವರು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದು, ಮಹಿಳಾ ಸಬಲೀಕರಣಕ್ಕೆ ಹಿಡಿದ ಕನ್ನಡಿಯಂತೆ ಗೋಚರಿಸಿದರು.