ಬಾಂಗ್ಲಾ ಹಿಂದುಗಳ ಮೇಲೆ ದೌರ್ಜನ್ಯ: ಬಳ್ಳಾರಿ ಬಂದ್ ಭಾಗಶಃ ಯಶಸ್ವಿ

KannadaprabhaNewsNetwork | Published : Dec 5, 2024 12:30 AM

ಸಾರಾಂಶ

ಬಾಂಗ್ಲಾ ದೇಶದಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ದೇಶಭಕ್ತ ನಾಗರಿಕ ವೇದಿಕೆ ನೇತೃತ್ವದಲ್ಲಿ ಕರೆ ನೀಡಿದ್ದ "ಬಳ್ಳಾರಿ ಬಂದ್‌ " ಭಾಗಶಃ ಯಶಸ್ವಿಯಾಗಿದೆ.

ಬಳ್ಳಾರಿ: ಬಾಂಗ್ಲಾ ದೇಶದಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ದೇಶಭಕ್ತ ನಾಗರಿಕ ವೇದಿಕೆ ನೇತೃತ್ವದಲ್ಲಿ ಕರೆ ನೀಡಿದ್ದ "ಬಳ್ಳಾರಿ ಬಂದ್‌ " ಭಾಗಶಃ ಯಶಸ್ವಿಯಾಗಿದೆ.

ಬಂದ್ ಬಗ್ಗೆ ಹೆಚ್ಚಿನ ಪ್ರಚಾರ ಹಾಗೂ ಸಾರ್ವಜನಿಕರಿಗೆ ಮಾಹಿತಿ ಇರಲಿಲ್ಲವಾದ್ದರಿಂದ ಬುಧವಾರ ಬೆಳಗ್ಗೆ ಎಂದಿನಂತೆ ಶಾಲಾ-ಕಾಲೇಜುಗಳು ಶುರುಗೊಂಡವು. ಖಾಸಗಿ ಕಾಲೇಜುಗಳು ಬುಧವಾರ ಬೆಳಗ್ಗೆ ವಿದ್ಯಾರ್ಥಿಗಳ ಪೋಷಕರಿಗೆ ಮೊಬೈಲ್ ಸಂದೇಶದ ಮೂಲಕ ಬಂದ್ ಹಿನ್ನೆಲೆಯಲ್ಲಿ ಶಾಲೆ ರಜೆ ಘೋಷಿಸಿರುವುದಾಗಿ ತಿಳಿಸಿದವು.

ಬ್ಯಾಂಕ್‌, ವಿಮೆ ಮತ್ತಿತರ ವ್ಯಾಪಾರ ವಹಿವಾಟುಗಳು ಆರಂಭಗೊಂಡಿದ್ದವು. ಆದರೆ, ಬೈಕ್‌ ರ್‍ಯಾಲಿ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಕೆಲವು ಶಾಲೆ-ಕಾಲೇಜುಗಳಿಗೆ ತೆರಳಿ ಬಂದ್ ಮಾಡಿಸಿದರು. ವ್ಯಾಪಾರ ವಹಿವಾಟು ನಡೆಯದಂತೆ ಕೆಲವೆಡೆ ಬಲವಂತವಾಗಿ ಬಂದ್ ಮಾಡಿಸುವ ದೃಶ್ಯಗಳು ಕಂಡು ಬಂದವು.

"ನಮ್ಮ ಹಿತಕ್ಕಾಗಿ ಬಂದ್ ಮಾಡುತ್ತಿಲ್ಲ. ದೇಶದ ಹಿತಕ್ಕಾಗಿ ಬಂದ್ ಮಾಡುತ್ತಿದ್ದೇವೆ. ನೀವೂ ಸ್ಪಂದಿಸಬೇಕು. ನೀವು ಭಾರತೀಯರಲ್ಲವೇ? ನಿಮಗೆ ಈ ದೇಶದ ಬಗ್ಗೆ ಕಾಳಜಿಯಿಲ್ಲವೇ " ಎಂದು ಹಿಂದೂ ಸಂಘಟನೆಯ ಯುವಕರು, ವ್ಯಾಪಾರದಲ್ಲಿ ನಿರತರಾಗಿದ್ದವರನ್ನು ಆಕ್ರೋಶದಿಂದ ಪ್ರಶ್ನಿಸುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.

ಪ್ರಮುಖ ವಾಣಿಜ್ಯ ಕೇಂದ್ರಗಳಾದ ಬೆಂಗಳೂರು ರಸ್ತೆ, ಬ್ರಾಹ್ಮಣಬೀದಿ, ಕಾಳಮ್ಮಬೀದಿ, ಗ್ರಹಂ ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ, ಟ್ಯಾಂಕ್‌ ಬಂಡ್ ರಸ್ತೆ, ತಾಳೂರು ರಸ್ತೆ, ಸಣ್ಣ ಮಾರುಕಟ್ಟೆ, ಗ್ಲಾಸ್ ಬಜಾರ್, ಡಬಲ್ ರಸ್ತೆ, ತೇರುಬೀದಿ, ಗಾಂಧಿನಗರ ಮಾರುಕಟ್ಟೆ ಪ್ರದೇಶಗಳು ಬಂದ್ ಆಗಿದ್ದವು. ಕೌಲ್‌ಬಜಾರ್, ರೇಡಿಯೋ ಪಾರ್ಕ್‌ ಗಳಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ ಬಹುತೇಕ ಕಡೆ ಸ್ವಯಂ ಪ್ರೇರಣೆಯ ಬಂದ್ ಕಂಡು ಬಂತು.

ಬಂದ್ ಬಗ್ಗೆ ಸ್ಪಷ್ಟನೆ ಇಲ್ಲದೆ ಬಳ್ಳಾರಿಗೆ ಬಂದಿದ್ದ ಶಾಲಾ-ಕಾಲೇಜು ವಿದ್ಯಾರ್ಥಿಗಳು ವಾಪಾಸ್ ಮನೆಗೆ ತೆರಳಿದರು. ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಹಾಗೂ ವ್ಯಾಪಾರಸ್ಥರು ಬಸ್‌ ಇಲ್ಲದೆ ಪರದಾಡಿದರು. ಬಳ್ಳಾರಿ ಬಂದ್‌ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನ ರದ್ದಾಗಿತ್ತು. ದ್ವಿಚಕ್ರವಾಹನ, ಕಾರುಗಳು, ಆಟೋಗಳ ಸಂಚಾರ ಎಂದಿನಂತಿತ್ತು. ಬಸ್‌ ಸಂಚಾರ ವಿರಳವಾಗಿತ್ತು. ಮಧ್ಯಾಹ್ನ 3 ಗಂಟೆ ಬಳಿಕ ಮತ್ತೆ ವ್ಯಾಪಾರ ವಹಿವಾಟು ಶುರುಗೊಂಡಿತಾದರೂ ಗ್ರಾಹಕರಿಲ್ಲದೆ ವಾಣಿಜ್ಯ ಪ್ರದೇಶಗಳು ಬಿಕೋ ಎಂದವು.

ಬೃಹತ್ ಸಮಾವೇಶ

ಬಳ್ಳಾರಿ ಬಂದ್ ಹಿನ್ನೆಲೆಯಲ್ಲಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಜರುಗಿತು. ಭಾಗವಹಿಸಿದ್ದ ಬಿಜೆಪಿ ಮುಖಂಡರು, ಇಸ್ಕಾನ್ ಸಂಸ್ಥೆಯ ಧಾರ್ಮಿಕ ಕಾರ್ಯಕರ್ತರು, ಹಿಂದೂ ಜಾಗರಣ ವೇದಿಕೆ ಮುಖಂಡರು, ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಬೇಕು. ಇಸ್ಕಾನ್‌ನ ಚಿನ್ಮಯ ಕೃಷ್ಣದಾಸರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಡಾ. ಅರುಣಾ ಕಾಮಿನೇನಿ ಮಾತನಾಡಿ, ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದಾಳಿ, ದಬ್ಬಾಳಿಕೆ ನಡೆದರೂ ಹಿಂದು-ಮುಸ್ಲಿಂ ಭಾಯಿಭಾಯಿ ಎನ್ನುವ ಮಂದಿ ಯಾಕೆ ಮಾತನಾಡುತ್ತಿಲ್ಲ. ಬಾಂಗ್ಲಾದೇಶ ಅಸ್ವಿತ್ವ ಭಾರತವನ್ನು ಅವಲಂಬಿಸಿದೆ. ಈ ವಿಚಾರ ಅವರಿಗೆ ಗೊತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಜಿಕಲ್ ಸ್ಟ್ರೈಕ್ ನಡೆಯುವ ಮುನ್ನ ಎಲ್ಲವೂ ನಿಶ್ಯಬ್ಧವಾಗಿರುತ್ತದೆ. ಪ್ರಧಾನಮಂತ್ರಿಗಳು ಸುಮ್ಮನೆ ಕುಳಿತಿಲ್ಲ. ಪ್ರಪಂಚದಲ್ಲಿರುವ ಎಲ್ಲ ಹಿಂದೂಗಳನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ಅವರಿಗೆ ಗೊತ್ತಿದೆ. ಖಂಡಿತ ರಕ್ಷಣೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ಹಿಂದೂಪರ ಸಂಘಟನೆಯ ಪ್ರಸನ್ನ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ ಕುಮಾರ್ ಮೋಕಾ, ಕೆ.ಎಸ್. ದಿವಾಕರ್,

ಇಸ್ಕಾನ್ ಸಂಸ್ಥೆಯ ಈಶ್ವರಪುರಿ ಪ್ರಭುದಾಸ್, ಕೃಷ್ಣಚಂದ್ರದಾಸ್ ಮತ್ತಿತರರು ಮಾತನಾಡಿದರು.

ಗಣಪಾಲ್ ಐನಾಥ ರೆಡ್ಡಿ, ಮಹೇಶ್ವರಸ್ವಾಮಿ, ಡಾ. ಮಹಿಪಾಲ್, ಶ್ರೀನಿವಾಸ ಮೋತ್ಕರ್ ಇತರರಿದ್ದರು.

ಬಿಜೆಪಿ, ಆರ್‌ಎಸ್‌ಎಸ್‌, ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಅನೇಕ ಸಂಘಟನೆಗಳ ಕಾರ್ಯಕರ್ತರು ಬಂದ್‌ನಲ್ಲಿ ಭಾಗವಹಿಸಿದ್ದರು. ಬಳಿಕ ಪ್ರತಿಭಟನಾ ಸಮಾವೇಶದ ಬಳಿ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಸಂಘಟನೆಯ ಮುಖಂಡರು ಪ್ರಧಾನಮಂತ್ರಿಗಳಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.ಮೂರಲ್ಲ; ಆರು ಮಕ್ಕಳಿಗೆ ಜನ್ಮನೀಡಿ

ಭಾರತದಲ್ಲಿ ಹಿಂದೂಗಳ ಶಕ್ತಿ ಹೆಚ್ಚಾಗಬೇಕು. ಹೀಗಾಗಿ, ಮೂರಲ್ಲ ಆರು ಮಕ್ಕಳಿಗೆ ಮಹಿಳೆಯರು ಜನ್ಮನೀಡಬೇಕು ಎಂದು ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ತಿಳಿಸಿದರು.

ಬಳ್ಳಾರಿ ಬಂದ್ ಹಿನ್ನೆಲೆಯಲ್ಲಿ ಗಡಗಿ ಚನ್ನಪ್ಪ ವೃತ್ತದಲ್ಲಿ ಜರುಗಿದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹಿಂದೂ ಮಹಿಳೆಯರು ಮೂರು ಮಕ್ಕಳಿಗೆ ಜನ್ಮನೀಡಬೇಕು ಎಂದು ಕರೆ ನೀಡಿದ್ದಾರೆ. ಆದರೆ, ಮೂರು ಸಾಕಾಗಲ್ಲ. ಆರು ಮಕ್ಕಳಿಗೆ ಜನ್ಮನೀಡಿ. ಒಂದು ಮನೆಯಲ್ಲಿ ಅರ್ಧ ಡಜನ್ ಮಕ್ಕಳಾದರೂ ಬೇಕು. ಭಾರತದ ಜನಸಂಖ್ಯೆ ನೂರಲ್ಲ; ಆರುನೂರು ಕೋಟಿಯಷ್ಟಾಗಲಿ. ಹಿಂದೂಗಳ ಸಂಖ್ಯೆಯೇ ಹೆಚ್ಚಿರಲಿ ಎಂದು ಹೇಳಿದರು.ಅಹಿಂಸೆ ಎನ್ನಲು ನಾವು ಗಾಂಧಿಗಳಲ್ಲ

ಹಿಂದುಗಳ ರಕ್ಷಣೆಗೆ ಗೋಡ್ಸೆ ಬರಬೇಕು

ಹಿಂದೂಗಳ ಮೇಲೆ ದೌರ್ಜನ್ಯ ನಡೆದರೂ ಸುಮ್ಮನಿರಲು ಸಾಧ್ಯವಿಲ್ಲ. ಅಹಿಂಸೆ ಎನ್ನಲು ನಾವು ಗಾಂಧೀಜಿಗಳಲ್ಲ. ಹಿಂದೂಗಳ ಸ್ವಯಂ ರಕ್ಷಣೆಗೆ ಮುಂದಾಗಬೇಕು. ನಾಥೂರಾಮ್ ಗೋಡ್ಸೆ ಬರಬೇಕು. ಆಗ ಮಾತ್ರ ಹಿಂದೂಗಳ ರಕ್ಷಣೆ ಸಾಧ್ಯ ಎಂದು ಸೋಮಶೇಕರ ರೆಡ್ಡಿ ಕರೆ ನೀಡಿದರು. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ನೋಡಿದರೆ ರಕ್ತ ಕುದಿಯುತ್ತಿದೆ. ಅವರು ನಂಬಿಕೆಗೆ ಅರ್ಹರಲ್ಲ. ಬಾಂಗ್ಲಾ ಏನು ಮಾಡಿದರೂ ಸುಮ್ಮನಿರಲು ನಾವೇನು ಬಳೆ ತೊಟ್ಟಿಲ್ಲ. ಪ್ರಧಾನಿ ಮೋದಿ ಅವರು ಸೂಕ್ತ ಉತ್ತರ ನೀಡುತ್ತಾರೆ ಎಂದರಲ್ಲದೆ, ಪ್ರಧಾನಿ ಕರೆ ನೀಡಿದರೆ ಬಾಂಗ್ಲಾದೇಶಕ್ಕೆ ಪಾದಯಾತ್ರೆ ಮೂಲಕ ತೆರಳಿ ಹಿಂದುಗಳನ್ನು ಕಾಪಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

Share this article