ಕೊಪ್ಪಳ: ಹ್ಯಾಟಿ ಮುಂಡರಗಿ ಗ್ರಾಮಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭೇಟಿ ನೀಡಿದ ಸಂದರ್ಭದಲ್ಲಿ ಕುಡಿಯುವ ನೀರು, ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಮನವಿ ಸಲ್ಲಿಸಲು ಮುಂದಾದ ಯುವಕರ ವಿರುದ್ಧ ಅಟ್ರಾಸಿಟಿ (ಜಾತಿನಿಂದನೆ) ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಆರೋಪಿಸಿದರು.
ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಕ್ರಮಕೈಗೊಳ್ಳುವುದನ್ನು ಬಿಟ್ಟು, ಸುಳ್ಳು ಪ್ರಕರಣ ದಾಖಲಿಸಿರುವುದನ್ನೇ ಗಂಭೀರವಾಗಿ ಪರಿಗಣಿಸಿ ಬಂಧಿಸಲಾಗಿದೆ. ನಾವು ಪ್ರತಿದೂರು ನೀಡಲು ಹೋದಾಗಲೂ ಗಂಟೆಗಟ್ಟಲೆ ಕಾಯಿಸಲಾಯಿತು. ಇದೀಗ ದೂರು ಸ್ವೀಕರಿಸಿದ್ದರೂ ಎಫ್‌ಐಆರ್ ಪ್ರತಿ ನೀಡಿಲ್ಲ ಎಂದು ದೂರಿದರು.
ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ, ಮಾರುತಿ ನಾಯಕ, ಮರಿಯಪ್ಪ ಮುಂಡರಗಿ, ನಾಗನಗೌಡ ಪೊಲೀಸ್ ಪಾಟೀಲ ಇದ್ದರು.ಆಗಿದ್ದೇನು?: ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿ ಗ್ರಾಮಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ ನೀಡಿದ ಸಂದರ್ಭದಲ್ಲಿ ಕುಡಿಯುವ ನೀರು, ಚರಂಡಿ ಹಾಗೂ ರಸ್ತೆ ನಿರ್ಮಾಣಕ್ಕೆ ಮನವಿ ಸಲ್ಲಿಸಲು ಗ್ರಾಮಸ್ಥರು ಮುಂದಾಗಿದ್ದರು. ಈ ವೇಳೆ ಕೂಗಾಟ, ಗಲಾಟೆ ನಡೆದಿದ್ದು, ಶಾಸಕರ ಕಾರಿಗೆ ಅಡ್ಡಲಾಗಿ ಬಂಡಿ ನಿಲ್ಲಿಸಿ ಪ್ರತಿಭಟನೆ ನಡೆಸಲಾಗಿದೆ. ಬಳಿಕ ಪರಸ್ಪರ ತಳ್ಳಾಟ, ನೂಕಾಟ ನಡೆದಿದ್ದು, ಜಾತಿನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ಬಸವರಾಜ ನಾಗಪ್ಪ ಜಾಡರ ಅವರು 12 ಜನರ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಉದ್ದೇಶಪೂರ್ವಕವಾಗಿ ಗಲಾಟೆ-ಹಿಟ್ನಾಳ: ‘ನಾನು ಎಲ್ಲ ಗ್ರಾಮಗಳಿಗೂ ಭೇಟಿ ನೀಡುವಂತೆ ಹ್ಯಾಟಿ ಮುಂಡರಗಿ ಗ್ರಾಮಕ್ಕೂ ಭೇಟಿ ನೀಡಿದ್ದೆ. ಈ ವೇಳೆ ಉದ್ದೇಶಪೂರ್ವಕವಾಗಿ ಗಲಾಟೆ ಮಾಡಲಾಗಿದೆ. ಮನವಿ ಸಲ್ಲಿಸುವವರು ಈ ರೀತಿ ವರ್ತಿಸುತ್ತಾರೆಯೇ?’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಪ್ರಶ್ನಿಸಿದ್ದಾರೆ.