ಕೊಪ್ಪಳ/ಕುಷ್ಟಗಿ: ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಳೆಯ ಕೊರತೆಯಿಂದ ಬಹುತೇಕ ಬೆಳೆಗಳು ಹಾನಿಗೀಡಾಗಿವೆ. ಈಗಾಗಲೇ ರಾಜ್ಯದ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬರ ನಿರ್ವಹಣೆ ಹಾಗೂ ರೈತರಿಗೆ ನೆರವು ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.
ಕೊಪ್ಪಳ ತಾಲೂಕಿನ ವಣಬಳ್ಳಾರಿ ಗ್ರಾಮದಲ್ಲಿ ರೈತ ಶಿವಪ್ಪ ಮುದುಕಪ್ಪ ಗೌಡ್ರ ಅವರ ಜಮೀನಿನಲ್ಲಿ ಮೆಕ್ಕೆಜೋಳ, ತೊಗರಿ ಬೆಳೆ ಪರಿಶೀಲಿಸಿದರು. ಇದೇ ವೇಳೆ ಬಿ. ಕೃಷ್ಣಮೂರ್ತಿ ಹಾಗೂ ಡಿ. ಹೊಸಳ್ಳಿ ಸೀಮಾ ಅವರ ಜಮೀನಿನಲ್ಲಿನ ತೊಗರಿ, ಹುರುಳಿ ಬೆಳೆಗಳ ಸ್ಥಿತಿಯನ್ನೂ ವೀಕ್ಷಿಸಿದರು. ಯಲಬುರ್ಗಾ ತಾಲೂಕಿನ ಗುನ್ನಾಳದಲ್ಲಿ ಮಹೇಶ ಹನುಮಂತಯ್ಯ ಅವರ ತೊಗರಿ ಹಾಗೂ ಚನ್ನಬಸವ್ವ ಈಶಪ್ಪ ಉಳ್ಳಾಗಡ್ಡಿ ಅವರ ಮೆಕ್ಕೆಜೋಳ ಬೆಳೆ ಪರಿಶೀಲಿಸಿದರು.
ಕುಷ್ಟಗಿ ತಾಲೂಕಿನ ನಂದಾಪುರ ಗ್ರಾಮದಲ್ಲಿ ರೈತ ಕರಡೆಪ್ಪ ದಂಡಿನ್ ಅವರ ಜಮೀನಿಗೆ ಭೇಟಿ ನೀಡಿದ ಡಿಸಿಎಂ, ತೊಗರಿ ಬೆಳೆ ಹಾನಿಯನ್ನು ಪರಿಶೀಲಿಸಿ ಕೃಷಿ ಅಧಿಕಾರಿಗಳಿಂದ ಮಳೆ ಪ್ರಮಾಣ, ಬಿತ್ತನೆ ಪ್ರದೇಶ, ಬೆಳೆ ಸ್ಥಿತಿ ಹಾಗೂ ಹಾನಿಯ ಕುರಿತು ಮಾಹಿತಿ ಪಡೆದರು.ಎಕರೆಗೆ ₹50 ಸಾವಿರ ಪರಿಹಾರಕ್ಕೆ ಆಗ್ರಹ: ‘ಸಮರ್ಪಕ ಮಳೆಯಾಗದೆ ಬೆಳೆ ಕೈಕೊಟ್ಟಿದೆ. ಕಾಳು ಕಟ್ಟಿಲ್ಲ. ಹಾಕಿದ ಬಂಡವಾಳವೂ ಮರಳದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ರೈತರು ಎರಡು ಬಾರಿ ಬಿತ್ತನೆ ಮಾಡಿದ್ದರೂ ಎರಡೂ ಬೆಳೆಗಳು ವಿಫಲವಾಗಿವೆ. ಹೀಗಾಗಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು’ ಎಂದು ರೈತರು ಡಿಸಿಎಂಗೆ ಮನವಿ ಮಾಡಿದರು.
ಶೇ. 98ರಷ್ಟು ಬೆಳೆ ಹಾನಿ: ಬಳಿಕ ನಂದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ರಾಜ್ಯದಲ್ಲಿ ಅತ್ಯಂತ ಗಂಭೀರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಶೇ. 98ರಷ್ಟು ಬೆಳೆ ಹಾನಿಯಾಗಿದ್ದು, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಮಳೆಯ ಕೊರತೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು.
ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ. ಬರ ನಿರ್ವಹಣೆ, ಕುಡಿಯುವ ನೀರು, ರೈತರಿಗೆ ನೆರವು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಒದಗಿಸುವುದಕ್ಕೆ ಸರ್ಕಾರ ಆದ್ಯತೆ ನೀಡಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಹೆಕ್ಟೇರ್‌ಗೆ ₹8,500 ಬೆಳೆ ಪರಿಹಾರ ನಿಗದಿಪಡಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲಿನ ₹2,500 ನೀಡಲಾಗುತ್ತಿದೆ. ಕೇಂದ್ರದ ಪಾಲಿನ ಹಣ ಬಿಡುಗಡೆಯಾದ ಬಳಿಕ ರೈತರಿಗೆ ಪರಿಹಾರ ದೊರೆಯಲಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಬೇಡಿಕೆ ಸಲ್ಲಿಸಲಾಗಿದ್ದು, ಕೇಂದ್ರದ ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಂಟಿ ಕೃಷಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ ಇದ್ದರು.