ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಪಿಎಸೈ ಅಮಾನತ್ತಿಗೆ ಆಗ್ರಹ

KannadaprabhaNewsNetwork | Published : Oct 14, 2024 1:21 AM

ಸಾರಾಂಶ

ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಬಂದ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಲಕ್ಷ್ಮೇಶ್ವರ ಪಿಎಸೈ ಈರಣ್ಣ ರಿತ್ತಿ ಲಾಠಿಯಿಂದ ಹೊಡೆದಿದ್ದಾರೆ

ಗದಗ: ಲಕ್ಷ್ಮೇಶ್ವರದಲ್ಲಿ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪಿಎಸೈ ಈರಣ್ಣ ರಿತ್ತಿ ಅವರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ವತಿಯಿಂದ ಭಾನುವಾರ ಡಿಎಸ್ಪಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿಜಯದಶಮಿಯ ದಿನ ಗೋಸಾವಿ ಸಮಾಜ ಬಾಂಧವರು ದುರ್ಗಾದೇವಿ ಮೂರ್ತಿಯನ್ನು ವಿಸರ್ಜನೆ ಮಾಡಿ ಬರುವಾಗ ಒಂದು ನಿರ್ದಿಷ್ಟ ಸಮುದಾಯದ ಯುವಕರು ಹಲ್ಲೆ ನಡೆಸಿದ ಘಟನೆ ಲಕ್ಷ್ಮೇಶ್ವರದಲ್ಲಿ ನಡೆದಿದೆ. ಈ ಘಟನೆಯಿಂದ ಲಕ್ಷ್ಮೇಶ್ವರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಬಂದ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಲಕ್ಷ್ಮೇಶ್ವರ ಪಿಎಸೈ ಈರಣ್ಣ ರಿತ್ತಿ ಲಾಠಿಯಿಂದ ಹೊಡೆದಿದ್ದಾರೆ. ಲಾಠಿ ಏಟಿನಿಂದ ಮೂರ್ನಾಲ್ಕು ಜನ ಹಿಂದು ಕಾರ್ಯಕರ್ತರು, ಇಬ್ಬರು ಮಹಿಳೆಯರಿಗೆ ತೀವ್ರ ಗಾಯಗಳಾಗಿವೆ.

ಗೋಸಾವಿ ಸಮಾಜದ ಜನರು, ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಅನ್ಯ ಕೋಮಿನ ಯುವಕರು, ಲಕ್ಷ್ಮೇಶ್ವರ ಪಿಎಸೈ ಈರಣ್ಣ ರಿತ್ತಿ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ನೂರಾರು ಜನರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ರಾಜೂ ಖಾನಪ್ಪನವರ, ಲಕ್ಷ್ಮೇಶ್ವರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಆಕ್ರಮ ಮರಳುಗಾರಿಕೆ ನಡೆಯುತ್ತಿದೆ. ಆಕ್ರಮ ಮರಳುಗಾರಿಕೆಗೆ ಪಿಎಸ್‌ಐ ಈರಣ್ಣ ರಿತ್ತಿ ಪರೋಕ್ಷವಾಗಿ ಸಹಾಯ, ಸಹಕಾರ ನೀಡುತ್ತಿದ್ದಾರೆ. ಪರಿಣಾಮ ಸರ್ಕಾರಕ್ಕೆ ಬರಬೇಕಾದ ರಾಜಸ್ವ ಬಾರದಂತಾಗಿದೆಯೆಂದು ಆರೋಪಿಸಿದರು.

ಪಿಎಸ್‌ಐ ಈರಣ್ಣ ರಿತ್ತಿ ಲಕ್ಷ್ಮೇಶ್ವರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಅನಗತ್ಯವಾಗಿ ವಿವಿಧ ಪ್ರಕರಣ ಹಾಕುವ ಮೂಲಕ ಹಿಂದೂ ಸಂಘಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಲಕ್ಷ್ಮೇಶ್ವರದಲ್ಲಿ ಕೇಸರಿ ಶಾಲು ಹಾಕಿಕೊಂಡ ಯುವಕರನ್ನು ಹಿಡಿದು ಒತ್ತಾಯದಿಂದ ಕೇಸರಿ ಶಾಲು ತೆಗೆಯಿಸುತ್ತಿದ್ದಾರೆ. ಇದೇ ರೀತಿಯ ಕ್ರಮ ಅನ್ಯಕೋಮಿನ ಜನರು ಧರಿಸುವ ಟೋಪಿ ತೆಗೆಯಿಸುವ ಧೈರ್ಯ ಏಕೆ ಮಾಡುವದಿಲ್ಲ. ಪಿಎಸ್‌ಐ ಸರ್ಕಾರಿ ಸಂಬಳ ಪಡೆದು ರಾಜಕಾರಣಿಗಳಂತೆ ಒಂದು ನಿರ್ದಿಷ್ಟ ಕೋಮಿನ ತುಷ್ಟೀಕರಣ ಮಾಡುತ್ತಿದ್ದಾರೆಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನಾದ ಮಹೇಶ ರೋಖಡೆ, ಬಸವರಾಜ ಕುರ್ತಕೋಟಿ, ಸತೀಶ ಕುಂಬಾರ, ಚೇತನ ಅಬ್ಬಿಗೇರಿ, ಸುನೀಲ ಮುಳ್ಳಾಳ, ತಾಬಾಳಪ್ಪ ಗೋಸಾವಿ, ಹರೀಶ ಗೋಸಾವಿ, ಆಶಾ ಗೋಸಾವಿ, ವೆಂಕಟೇಶ ಗೋಸಾವಿ, ಕೃಷ್ಣ ಗೋಸಾವಿ, ರಾಜಾ ಗೋಸಾವಿ, ಬಸವರಾಜ ಚಕ್ರಸಾಲಿ, ಪ್ರಾಣೇಶ ವ್ಯಾಪಾರಿ, ಮಹಾಂತೇಶ ಅಣ್ಣಿಗೇರಿ, ಆಕಾಶ ಗೋಸಾವಿ, ಕಿಶನ್ ಗೋಸಾವಿ, ಆರತಿ ಗೋಸಾವಿ, ಕಿರಣ ಚಿಲ್ಲೂರಮಠ, ಮಂಜು ಕೊಡಲ್ಲಿ, ಚಿನ್ನು ಹಲ್ದೊಟದ, ರಾಮು ಗೋಸಾವಿ, ಮಹಾಂತೇಶ ಪಾಟೀಲ, ಸುನೀಲ ಮುಳ್ಳಾಳ, ಭರತ್ ಲದ್ದಿ, ಶಿವು ಲದ್ದಿ, ಅಶೋಕ ಭಜಂತ್ರಿ ಮುಂತಾದವರು ಹಾಜರಿದ್ದರು.

Share this article