ಕನಡಪ್ರಭ ವಾರ್ತೆ ಹನೂರುಮತದಾನ ಮಾಡಲು ಬಂದಂತ ಸೋಲಿಗ ಸಮುದಾಯದವರ ಮೇಲೆ ಹಲ್ಲೆ ನಡೆಸಿರುವುದು ಸಂಬಂಧಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸೋಲಿಗ ಸಮುದಾಯದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು .ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ಮುಂಭಾಗ ಶನಿವಾರ ಮಧ್ಯಾಹ್ನ ಜಿಲ್ಲಾ ಸೋಲಿಗ ಅಭಿವೃದ್ಧಿ ಸಂಘದ ಪದಾಧಿಕಾರಿಗಳಿಂದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಘದ ಕಾರ್ಯದರ್ಶಿ ಸಿ ಮಾದೇಗೌಡ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಸಮೀಪದಲ್ಲಿರುವ ಮೆಂದರೆ ಗ್ರಾಮದ ಸೋಲಿಗ ಸಮುದಾಯದ ನಿವಾಸಿಗಳು ಲೋಕಸಭಾ ಚುನಾವಣೆ ಹಿನ್ನೆಲೆ ಮತ ಹಾಕಲು ಗ್ರಾಮಕ್ಕೆ ಆಗಮಿಸಿದಾಗ ಕೆಲವರು ಬುಡಕಟ್ಟು ಸೋಲಿಗ ಸಮುದಾಯದ ಜನರ ಮೇಲೆ ಹಲ್ಲೇ ನಡೆಸಿದ್ದಾರೆ ಮತದಾನ ಮಾಡಲು ಅಡ್ಡಿಪಡಿಸಿದ್ದಾರೆ ಅಲ್ಲದೆ ಕಲ್ಲು ದೊಣ್ಣೆಗಳಿಂದ ಒಡೆದು 50ಕ್ಕೂ ಹೆಚ್ಚು ಜನರಿಗೆ ಗಾಯಗೊಳಿಸಿದ್ದಾರೆ.
ರಾಜ್ಯ ಮೂಲ ನಿವಾಸಿ ಬುಡಕಟ್ಟು ಜನಾಂಗದ ವೇದಿಕೆ ಕಾರ್ಯದರ್ಶಿ ಮುತ್ತಯ್ಯ ಮಾತನಾಡಿ, ಹಲ್ಲೇ ಪ್ರಕರಣ ಭಾಗಿಯಾಗಿರುವ ವ್ಯಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಜೊತೆಗೆ ಹಲ್ಲೇಯಿಂದ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಿ ಪರಿಹಾರ ನೀಡಬೇಕು ಸಮುದಾಯದ ಜನತೆಗೆ ಅನ್ಯಾಯಕ್ಕೆ ಒಳಗಾಗಿರುವ ನಿವಾಸಿಗಳಿಗೆ ಸರ್ಕಾರ ರಕ್ಷಣೆ ನೀಡಬೇಕು. ಜೊತೆಗೆ ನ್ಯಾಯ ಒದಗಿಸಬೇಕು ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಈ ಪ್ರಕರಣವನ್ನು ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ನಡೆಸಿ ಗಂಭೀರವಾಗಿ ಪ್ರಕರಣವನ್ನು ಕೈಗೆತ್ತಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಇಂಡಿಗನತ್ತ ಗ್ರಾಮದಲ್ಲಿ ಶುಕ್ರವಾರ ನಡೆದಿರುವ ಘಟನೆಯಿಂದ ಸಮಾಜವೇ ತಲೆತಗ್ಗಿಸುವಂತಹ ಪ್ರಕರಣ ನಡೆದಿದೆ ಹೀಗಾಗಿ ಸೋಲಿಗ ಸಮುದಾಯದವರಿಗೆ ಸಂಪೂರ್ಣ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸರ್ಕಾರ ರಕ್ಷಣೆ ನೀಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು .
ತಾಲೂಕು ಸಂಘದ ಅಧ್ಯಕ್ಷ ದೊಡ್ಡ ಸಿದ್ದಯ್ಯ, ಕಾರ್ಯದರ್ಶಿ ಎಂ. ರಂಗೇಗೌಡ, ಮುಖಂಡರಾದ ಮಾದೇವಯ್ಯ, ಗಿರಿಯ, ಚಂದ್ರ, ಭದ್ರಾ ಇನ್ನಿತರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಜಾತಿ ನಿಂದನೆ ದೂರ ದಾಖಲು: ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮೆಂದರೆ ಗ್ರಾಮದ ಗಾಯಾಳುಗಳು ಇಂಡಿಗನತ್ತ ಗ್ರಾಮದಲ್ಲಿ ನಿವಾಸಿಗಳು ಹಲ್ಲೆ ನಡೆಸಿ ಮತದಾನ ಮಾಡಲು ಅಡ್ಡಿಪಡಿಸಿ ಜೊತೆಗೆ ಜಾತಿ ನಿಂದನೆ ಮಾಡಿರುವ ಬಗ್ಗೆ ದೂರು ಸಹ ಶನಿವಾರ ನೀಡಲಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ದೂರು ಸೇರಿದಂತೆ ಗ್ರಾಮಸ್ಥರ ಮೇಲೆ ಮೂರು ಪ್ರಕರಣಗಳು ದಾಖಲಾಗಿದೆ.