ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಶಾಸಕರಾದ ಎಚ್.ಟಿ.ಮಂಜು ಅವರು ಈ ಹಿಂದೆ ನಡೆಸಿದ ಜನಸಂಪರ್ಕ ಸಭೆಯಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿ ಸರಿಯಾಗಿ ಆಗಿರುವುದಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಜನಸಂಪರ್ಕ ಸಭೆಯ ಅರ್ಜಿಗಳಿಗೆ ಸೂಕ್ತ ಸ್ಪಂದನೆ ಒದಗಿಸಬೇಕು. ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಎಪಿಎಂಸಿಗೆ ಹಿಂದೆ ಹತ್ತಾರು ಎಕರೆ ಭೂಮಿಯನ್ನು ದಾನವಾಗಿ ರೈತರು ನೀಡಿದ್ದಾರೆ. ಆದರೆ ಪ್ರಭಾವಿಗಳು ಕಾಂಪೌಂಡ್ ಒಡೆದು ಎಪಿಎಂಸಿ ಜಾಗವನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಕೂಡಲೇ ಎಪಿಎಂಸಿ ಅಧಿಕಾರಿಗಳು ಸರ್ಕಾರಿ ಜಾಗವನ್ನು ಉಳಿಸಲು ಮುಂದಾಗಬೇಕು ಎಂದು ಶಾಸಕ ಎಚ್.ಟಿ.ಮಂಜು ಅವರು ಎಪಿಎಂಸಿ ಕಾರ್ಯದರ್ಶಿಗೆ ಸೂಚನೆ ನೀಡಿದರು.
ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ರೇಷ್ಮೆ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಶಾಸಕ ಎಚ್.ಟಿ.ಮಂಜು ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಹಾಗೂ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಯಿತು.
ಹಿರಿಕಳಲೆ ಗ್ರಾಮದ ಸರ್ವೇ ನಂಬರ್ ಜಾಗದಲ್ಲಿ 50*100 ಅಳತೆಯ ಜಾಗವನ್ನು ಅಕ್ರಮವಾಗಿ ಗ್ರಾಮ ಪಂಚಾಯತ್ ಪಿಡಿಒ ಮತ್ತು ಕಾರ್ಯದರ್ಶಿಗಳು ಇ- ಸ್ವತ್ತು ಮಾಡಿರುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ನೌಕರರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಗೆ ಸಲಹೆ ನೀಡಿದರು.
ಸಿಂಧಘಟ್ಟ ಗ್ರಾಮದಲ್ಲಿ ಸುಮಾರು 10 ಸಾವಿರ ಜನಸಂಖ್ಯೆ ಇದ್ದು, ತಾಲೂಕಿನಲ್ಲಿಯೇ ಅತ್ಯಂತ ದೊಡ್ಡ ಗ್ರಾಮವಾಗಿದೆ. ಹಾಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು ಪಿಡಿಒ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅತಿ ಶೀಘ್ರವೇ ಸರ್ಕಾರಿ ಜಾಗವನ್ನು ಗುರುತಿಸಿಕೊಡಬೇಕು ಎಂದು ಶಾಸಕರು ಸೂಚನೆ ನೀಡಿದರು.
ಹಳೇ ಮುದ್ಲಾಪುರ ಗ್ರಾಮದ ಬೀಳು ಭೂಮಿಯಲ್ಲಿ ರಸ್ತೆ ನಿರ್ಮಿಸುವ ಸಂಬಂಧ ಒಂದೆರಡು ವ್ಯಕ್ತಿಗಳ ನಡುವೆ ಪ್ರತಿಷ್ಠೆಗಾಗಿ ಜಗಳ ನಡೆಯುತ್ತಿದೆ. ಹಾಗಾಗಿ ಭೂಮಿಯ ದಾಖಲೆಗಳನ್ನು ಪರಿಶೀಲನೆ ಮಾಡಿ ಬೀಳು ಭೂಮಿ ಎಂದು ಆರ್.ಟಿ.ಸಿ.ಯಲ್ಲಿ ದಾಖಲಿಸಿ ರಸ್ತೆ ನಿರ್ಮಿಸಲು ಅವಕಾಶ ನೀಡಬೇಕು ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಶೀಳನೆರೆ ಹೋಬಳಿಯ ಮಾದಿಗರ ಹೊಸಹಳ್ಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಹತ್ತಾರು ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಇದೆ. ಆದರೆ ಪಹಣಿಯಲ್ಲಿ ದಾಖಲೆ ಇರುವುದಿಲ್ಲ. ಇದನ್ನು ಬಲಾಢ್ಯರು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಹಾಗಾಗಿ ತಕ್ಷಣವೇ ಪಹಣಿ ಕಾಲಂ 17ರಲ್ಲಿ ಕೆರೆ ಎಂದು ನಮೂದಿಸಿ ಕೆರೆಯನ್ನು ಸರ್ವೇ ಮಾಡಿ ಹದ್ದು- ಬಸ್ತು ಮಾಡಿ ಜನ- ಜಾನುವಾರುಗಳಿಗೆ ಕುಡಿಯುವ ನೀರಿಗೆ ಕೆರೆ ಉಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.
ರಂಗೇಗೌಡನ ಕೊಪ್ಪಲು ಗ್ರಾಮ ನಕ್ಷೆಯಂತೆ ರಸ್ತೆಯಿದ್ದು, ರಸ್ತೆಯನ್ನು ಬದಲಾಯಿಸಿ ಹಿಡುವಳಿ ಜಮೀನಿನಲ್ಲಿ ಬಿಟ್ಟಿರುತ್ತಾರೆ. ಇದರಿಂದ ರೈತರ ನಡುವೆ ಗಲಾಟೆಗಳು ನಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮೂಲ ನಕ್ಷೆ ಪ್ರಕಾರ ರಸ್ತೆ ಬಿಡಿಸಲು ಹಾಗೂ ಪಥ ಬದಲಾವಣೆ ಮಾಡಲು ಜಿಲ್ಲಾಧಿಕಾರಿ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಪ್ರಸಿದ್ಧ ಪುಣ್ಯಕ್ಷೇತ್ರ ಸಾಸಲು ಗ್ರಾಮದ ಶ್ರೀ ಶಂಭುಲಿಂಗೇಶ್ವರ ಹಾಗೂ ಶ್ರೀ ಸೋಮೇಶ್ವರ ದೇವಾಲಯ ಜಾಗದ ಹಾಗೂ ದೇವರ ಜಮೀನಿನ ಸಂಬಂಧ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ತಹಸೀಲ್ದಾರ್ ಅವರು ದೇವಾಲಯಕ್ಕೆ ಸೇರಿದ ಜಮೀನನ್ನು ಸಂರಕ್ಷಣೆ ಮಾಡಲು ತುರ್ತುಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಿದರು.
ತಾಲೂಕಿನಲ್ಲಿ ತತ್ಕಾಲ್ ಪೋಡಿ, ಅಳತೆ ಕಾರ್ಯ ಎಲ್ಲವೂ ನಿಧಾನವಾಗಿ ನಡೆಯುತ್ತಿದೆ. ಈ ಬಗ್ಗೆ ಎಡಿಎಲ್ಆರ್ ಹಾಗೂ ಸರ್ವೇ ಅಧಿಕಾರಿಗಳು ತುರ್ತು ಕ್ರಮ ವಹಿಸಿ ಸರ್ವೇ ಕಾರ್ಯದ ವೇಗ ಹೆಚ್ಚಿಸಬೇಕು. ಪೊಲೀಸ್ ಅಧಿಕಾರಿಗಳು ಪಟ್ಟಣದಲ್ಲಿ ವಾಹನಗಳ ದಾಖಲೆ ಪರಿಶೀಲನೆ ನಡೆಸಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಹಳ್ಳಿಗಳಲ್ಲಿ ರಾತ್ರಿ ವೇಳೆ ಜಮೀನಿನ ಕಡೆ ಹೋಗುವ ರೈತರ ಬೈಕುಗಳನ್ನು ತಡೆದು ದಾಖಲೆ ಕೇಳುವುದು ಸರಿಯಲ್ಲ. ರೈತರು ಜಮೀನು ಕಡೆ ಕೃಷಿ ಪಂಪ್ ಸೆಟ್ ಚಾಲನೆ ಮಾಡಲು ಹೋಗುತ್ತಾರೆ. ಜಾನುವಾರುಗಳಿಗೆ ಮೇವು ತರಲು ಹೋಗುತ್ತಾರೆ. ಅಲ್ಲಿಗೂ ಬೈಕಿನ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕೆ? ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು, ಜಮೀನು ಕಡೆಗೆ ಹೋಗುವ ರೈತರಿಗೆ ತೊಂದರೆ ಕೊಡಬೇಡಿ ಎಂದು ಪೊಲೀಸ್ ಇಲಾಖೆಗೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಶಾಸಕರಾದ ಎಚ್.ಟಿ.ಮಂಜು ಅವರು ಈ ಹಿಂದೆ ನಡೆಸಿದ ಜನಸಂಪರ್ಕ ಸಭೆಯಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿ ಸರಿಯಾಗಿ ಆಗಿರುವುದಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಜನಸಂಪರ್ಕ ಸಭೆಯ ಅರ್ಜಿಗಳಿಗೆ ಸೂಕ್ತ ಸ್ಪಂದನೆ ಒದಗಿಸಬೇಕು. ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮಾ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.