ಸಮಾಜ ಸುಧಾರಕರ ಜಾತಿಗೆ ಸೀಮಿತಗೊಳಿಸುವ ಪ್ರಯತ್ನ

KannadaprabhaNewsNetwork |  
Published : Jan 15, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ಮುರುಘಾಮಠದಲ್ಲಿ ಬುಧವಾರ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತಿ ಆಚರಣೆಯಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆಪುಷ್ಪಾರ್ಚನೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಮಾಜ ಸುಧಾರಕರು, ಹೋರಾಟಗಾರರನ್ನು ಒಂದು ಜಾತಿಗೆ ಸೀಮಿತ ಮಾಡಿ ಅವರ ವಿಚಾರಗಳನ್ನು ಸಂಕುಚಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಬುಧವಾರ ಏರ್ಪಡಿಸಿದ್ದ ಶಿವಯೋಗಿ ಸಿದ್ಧರಾಮರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜ ಸುಧಾರಕರ ವ್ಯಕ್ತಿತ್ವ ಮತ್ತು ಅವರ ತತ್ವಗಳನ್ನು ಸ್ಮರಿಸುವಂತಹ ಕೆಲಸ ಹಾಗೂ ಬಸವಾದಿ ಶರಣರ ತತ್ವಚಿಂತನೆಗಳನ್ನು ಪ್ರಚಾರ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಸಾಮಾಜಿಕ ಕೆಲಸಗಳನ್ನು ಮಾಡುವಲ್ಲಿ ನಿರತರಾಗಿದ್ದ ಶಿವಯೋಗಿ ಸಿದ್ಧರಾಮರನ್ನು ಕಂಡ ಅಲ್ಲಮಪ್ರಭುಗಳು ಭೌತಿಕ ಕೆಲಸಗಳ ಜತೆಗೆ ಆಧ್ಯಾತ್ಮಿಕ ತತ್ವಗಳನ್ನು ಅನುಸರಿಸಿದರು. ಸಮಾಜೋಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುವ ಸಲಹೆಯ ಮೇರೆಗೆ ಕಲ್ಯಾಣಕ್ಕೆ ಬಂದ ಸಿದ್ಧರಾಮರು ಧಾರ್ಮಿಕ ಕ್ಷೇತ್ರದತ್ತ ವಾಲಿದ್ದು ಒಂದು ಐತಿಹಾಸಿಕ ಸನ್ನಿವೇಶ. ಇದರಿಂದಾಗಿ ಅವರು ಸಮಾಜದಲ್ಲಿರುವ ಅಂಕುಡೊಂಕು ತಿದ್ದಲು ತುಂಬಾ ಅರ್ಥಪೂರ್ಣ ಸಾರವತ್ತಾದ ಮೌಲಿಕ ವಚನಗಳನ್ನು ರಚಿಸಿದ್ದಾರೆಂದು ಹೇಳಿದರು.

ಸಿದ್ಧರಾಮರು ದೇವರ ಪೂಜೆಯನ್ನು ಕೇವಲ ಪತ್ರೆ, ಪುಷ್ಪಗಳಿಂದ ಪೂಜಿಸುವುದಕ್ಕಿಂತ ಮನವೆಂಬ ನೀರು ಜ್ಞಾನವೆಂಬ ಪುಷ್ಪದಿಂದ ಪೂಜಿಸಿದರೆ ಹೆಚ್ಚು ಅರ್ಥ ಎಂದು ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ. ಇಂದು ಸಮಾಜ ಸುಧಾರಕರು, ಹೋರಾಟಗಾರರನ್ನು ಒಂದು ಜಾತಿಗೆ ಸೀಮಿತ ಮಾಡಿದ್ದೇವೆಯೇ ಎಂಬ ಅನುಮಾನ ಕಾಡುತ್ತಿದೆ. ಇದು ಎಷ್ಟು ಸರಿ ಎನ್ನುವ ಪ್ರಶ್ನೆ ನಮ್ಮ ಮುಂದಿದೆ. ಜಾತಿ ಮೀರಿದ ವ್ಯಕ್ತಿ ವ್ಯಕ್ತಿತ್ವವನ್ನು ವಿಶಾಲ ಅರ್ಥದಲ್ಲಿ ನೋಡಬೇಕಿದೆ. ನಮ್ಮ ಶೂನ್ಯಪೀಠದ3 ನೇ ಅಧ್ಯಕ್ಷರಾಗಿದ್ದ ಶಿವಯೋಗಿ ಸಿದ್ಧರಾಮರ ತತ್ವ ಯಾರಿಗೆ ಬೇಡ ಹೇಳಿ? ಅವರು ತೋರಿದ ಸುಧಾರಣೆಯ ಮಾರ್ಗವನ್ನು ನಾವು ಅನುಸರಿಸಬೇಕಿದೆ ಎಂದು ಸಲಹೆ ಮಾಡಿದರು.

ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ 12ನೇ ಶತಮಾನದ ಶಿವಯೋಗಿ ಸಿದ್ಧರಾಮರು, 16ನೇ ಶತಮಾನದ ಯಡಿಯೂರು ಸಿದ್ಧಲಿಂಗರು, ಹಾಗೆ 18-19ನೇ ಶತಮಾನದ ಅಥಣಿಯ ಮುರುಘೇಂದ್ರ ಶಿವಯೋಗಿಗಳು ಪ್ರಸಿದ್ಧರು. ಸಕಲ ಜೀವರಾಶಿಯ ಒಳತಿನ ಕಾರಣಕ್ಕಾಗಿ ಹಾಗೂ ಕೃಷಿ ಸಂಬಂಧಿತ ಕೆಲಸಗಳಿಗೆ ಕೆರೆ ಕಟ್ಟೆ ಕಾಲುವೆ ನಿರ್ಮಿಸಿದ್ದರ ಸಲುವಾಗಿ ಅವರಿಗೆ ಶಿವಯೋಗಿ ಸಿದ್ಧರಾಮ ಎನ್ನುವ ಹೆಸರು ಪ್ರಾಪ್ತವಾಗಿತ್ತು. ಲೋಕೋಪಯೋಗಿ ಕೆಲಸ ಮಾಡಿಕೊಂಡಿದ್ದವರನ್ನು ಅಲ್ಲಮರು ಕಲ್ಯಾಣಕ್ಕೆ ಕರೆತಂದರೆಂದರು. ಬೋವಿ ಸಮಾಜದ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ, ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ ಗುಡಸಿ, ಬೋವಿ ಸಮಾಜದ ಮಂಜುನಾಥ್, ಪಾಪಣ್ಣ, ಜಾಗತಿಕ ಲಿಂಗಾಯತ ಸಭಾದ ಬಸವರಾಜ ಕಟ್ಟಿ, ನಿವೃತ್ತ ಪ್ರಾಚಾರ್ಯ ಜ್ಞಾನಮೂರ್ತಿ ಟಿ.ಪಿ, ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ವಿದ್ಯಾಪೀಠದ ಶಾಲಾಕಾಲೇಜುಗಳ ಕೆಲ ನೌಕರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಲಾವಿದ ಉಮೇಶ ಪತ್ತಾರ್ ಅವರು ಸಿದ್ಧರಾಮೇಶ್ವರರ ವಚನ ಹಾಡಿದರು. ಹಿರಿಯ ಅಧ್ಯಾಪಕಿ ಜೆ.ಪ್ರತಿಮಾ ಸ್ವಾಗತಿಸಿದರು. ಬೋಧಕ ಕೆ.ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ