ಚಿಕ್ಕಮಗಳೂರು ಗಿರಿಧಾಮಗಳಲ್ಲಿ ಪ್ರವಾಸಿಗರ ಕಾರುಬಾರು

Published : Jan 14, 2026, 11:47 AM IST
chikkamagaluru

ಸಾರಾಂಶ

ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿರುವ ಕಾಫಿನಾಡು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಬಿಸಿಲು, ಮಳೆ, ಚಳಿ ಏನೇ ಇರಲಿ ಇಲ್ಲಿ ಪ್ರವಾಸಿಗರ ಸಂಖ್ಯೆ ಮಾತ್ರ ಕಡಿಮೆಯಾಗುವುದಿಲ್ಲ.  2025ರಲ್ಲಿ ಪ್ರವಾಸಿಗರ ಸಂಖ್ಯೆ 81,46,973ಕ್ಕೆ ಏರಿಕೆ

 ಆರ್‌. ತಾರಾನಾಥ್‌

 ಚಿಕ್ಕಮಗಳೂರು :  ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿರುವ ಕಾಫಿನಾಡು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಬಿಸಿಲು, ಮಳೆ, ಚಳಿ ಏನೇ ಇರಲಿ ಇಲ್ಲಿ ಪ್ರವಾಸಿಗರ ಸಂಖ್ಯೆ ಮಾತ್ರ ಕಡಿಮೆಯಾಗುವುದಿಲ್ಲ. 2024ರಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದ ಪ್ರವಾಸಿಗರ ಸಂಖ್ಯೆ 79,30,338. ಆದರೆ, 2025ರಲ್ಲಿ ಪ್ರವಾಸಿಗರ ಸಂಖ್ಯೆ 81,46,973ಕ್ಕೆ ಏರಿಕೆಯಾಗಿದೆ.

ಶೃಂಗೇರಿ, ಹೊರನಾಡಿಗೆ ಕೊಂಚ ಸಂಖ್ಯೆ ಕಡಿಮೆಯಾಗಿದ್ದರೆ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಕೆಮ್ಮಣ್ಣಗುಂಡಿಗೆ ಬಂದಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ದೇಶಿ ಮಾತ್ರವಲ್ಲ, ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆಯಾಗಿದೆ.

ಪ್ರಕೃತಿಯ ಸೊಬಗು:

ಜಿಲ್ಲೆಯಲ್ಲಿ ಸುಮಾರು 43 ಪ್ರವಾಸಿ ತಾಣಗಲಿವೆ. ಪ್ರವಾಸಿಗರನ್ನು ಅತಿ ಹೆಚ್ಚು ಆಕರ್ಷಿಸುತ್ತಿರುವುದು ಗಿರಿ ಪ್ರದೇಶಗಳು. ಕಳೆದ ವರ್ಷ ಮಳೆ, ಭೂಕುಸಿತ ಉಂಟಾಗಿ ಜಿಲ್ಲಾಡಳಿತ ಆಗಾಗ ನಿರ್ಬಂಧ ಹೇರಿದರೂ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ. ವಾರಾಂತ್ಯ, ಸರಣಿ ರಜೆ ಸಂದರ್ಭದಲ್ಲಿ ಸಾವಿರಾರು ವಾಹನ, ಲಕ್ಷಾಂತರ ಪ್ರವಾಸಿಗರು ಬಂದು ಹೋಗುತ್ತಾರೆ.

ಲಾಡ್ಜ್‌, ಹೋಂ ಸ್ಟೇ, ರೇಸಾರ್ಟ್‌ನಲ್ಲಿ ಪ್ರವಾಸಿಗರು ಉಳಿದುಕೊಳ್ಳುತ್ತಾರೆ. ಪ್ರವಾಸಿಗರಿಂದ ಹೋಟೆಲ್‌, ತಿಂಡಿಗಾಡಿಗಳು, ಅಂಗಡಿಗಳಿಗೂ ವ್ಯಾಪಾರವಾಗುತ್ತಿದೆ. ಹೀಗಾಗಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ.

ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಪ್ರವಾಸಿಗರಿಗೆ ಜಿಲ್ಲೆ ಸುರಕ್ಷಿತ ಪ್ರದೇಶವೆಂದು ಮನವರಿಕೆಯಾಗಿದೆ. ಇಲ್ಲಿಯ ವಾತಾವರಣ ಹಿಡಿಸಿದೆ. ಕರ್ನಾಟಕ ಮಾತ್ರವಲ್ಲ, ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದಿಂದಲೂ ಪ್ರತಿ ವಾರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಪ್ರವಾಸಿಗರನ್ನು ನಂಬಿ ನೂರಾರು ಹೋಂ ಸ್ಟೇಗಳು ಹುಟ್ಟಿಕೊಂಡಿವೆ. ಹೋಂ ಸ್ಟೇಗಳು ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಮೂಲಭೂತ ಸವಲತ್ತುಗಳುಳ್ಳ ಕೊಠಡಿಗಳ ಸಂಖ್ಯೆ ಹೆಚ್ಚಳ ಮಾಡಿಕೊಂಡಿವೆ. ಅಂತಹ ಹೋಂ ಸ್ಟೇಗಳು ತಾಂತ್ರಿಕ ಸಮಸ್ಯೆಗೂ ಸಿಲುಕಿಕೊಂಡಿವೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಮಾನದಂಡ ಹೊಸ ರೇಸಾರ್ಟ್‌ಗಳಿಗೆ ಕಡಿವಾಣ ಹಾಕಿದೆ.

ಇಲ್ಲಿನ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಿಂದ 10 ಕಿಲೋ ಮೀಟರ್‌ (ಏರ್‌ ವೇ) ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡಬಾರದೆಂಬ ಆದೇಶ ಜಾರಿಯಲ್ಲಿದೆ. ಈ ಆದೇಶ ಚಿಕ್ಕಮಗಳೂರು-ತರೀಕೆರೆ ರಸ್ತೆಯಲ್ಲಿರುವ ಕೈಮರ ಸಮೀಪದ ದಾಸರಹಳ್ಳಿಯವರೆಗೆ ಬರುತ್ತದೆ. ಹಾಗಾಗಿ, ಅರಣ್ಯ ಇಲಾಖೆ ಭೂಪರಿವರ್ತನೆಯ ಅರ್ಜಿಗಳನ್ನು ತಿರಸ್ಕರಿಸುತ್ತಿದೆ. ಇದು ಹೊಸ ಹೋಂ ಸ್ಟೇಗಳಿಗೆ ನೋಂದಣಿ ಮಾಡಲು ಅಡ್ಡಿಯಾಗಿದೆ. ಪ್ರವಾಸೋದ್ಯಮ ಬೆಳವಣಿಗೆ ನೀತಿಗಳು ಸಡಿಲಾಗಬೇಕು ಎಂಬುದು ಹೋಂ ಸ್ಟೇ ಮಾಲೀಕರ ಅಭಿಪ್ರಾಯವಾಗಿದೆ.

ಪ್ರವಾಸಿ ತಾಣಗ‍ಳು 2024 2025

(ಬಂದಿರುವ ಪ್ರವಾಸಿಗರ ಸಂಖ್ಯೆ)

ಶೃಂಗೇರಿ 35,37,777 20,21,279

ಹೊರನಾಡು 18,00,638 12,94,199

ಕಳಸ 7,97,922 8,05,882

ದತ್ತಪೀಠ 12,55,784 24,87,253

ಕೆಮ್ಮಣ್ಣಗುಂಡಿ 5,38,217 10,91,493

ಒಟ್ಟು ಸಂಖ್ಯೆ 79,30,338 81,46,973

PREV
Stay informed with the latest news from Chikkamagaluru district (ಚಿಕ್ಕಮಗಳೂರು ಸುದ್ದಿ) — covering local politics, coffee‑region updates, civic issues, environment, tourism, culture, crime and community affairs on Kannada Prabha News..
Read more Articles on

Recommended Stories

ವಿದ್ಯಾರ್ಥಿಗಳಿಗೆ ಜ್ಞಾನ ತುಂಬುವ ಕಲಿಕಾ ಹಬ್ಬ: ಶಬನಾ ಅಂಜುಮ್
ಸ್ವಾಮಿ ವಿವೇಕಾನಂದರು ಯುವ ಜನರ ಆದರ್ಶ: ಮೀನಾಕ್ಷಿ ಕಾಂತರಾಜ್