ಬೀರೂರು: ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಜೊತೆ ಅವರಲ್ಲಿ ಅಡಗಿರುವ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದಾಗ ಮಾತ್ರ ಅವರ ಭವಿಷ್ಯದ ಕನಸು ನನಸಾಗಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ದೇವರಹಳ್ಳಿ ಶ್ರೀ ಗುರು ಕ್ರಿಸ್ತ ಶರಣ್ ಇಂಟರ್ ನ್ಯಾಷನಲ್ ಸ್ಕೂಲ್ ಆಯೋಜಿಸಿದ್ದ, ಮಹಾರಾಷ್ಟ್ರದ ನಾಸಿಕನಲ್ಲಿ ನಡೆದ 4ನೇ ರಾಷ್ಟ್ರೀಯ ಲೆಗ್ ಬಾಲ್ (ಲೆಗ್ ಕ್ರಿಕೆಟ್) ಚಾಂಪಿಯನ್‌ಶಿಪ್ ನಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ ಕ್ರೀಡಾಪಟುಗಳಿಗೆ ಸನ್ಮಾನಿಸಿ ಮಾತನಾಡಿದರು.ವಿದ್ಯೆ ನಮ್ಮ ಜೀವನದ ಕಲಿಕೆಗೆ ಮಾತ್ರ ಆದರೆ ಭವಿಷ್ಯ ರೂಪಿಸುವುದು ನಮ್ಮ ಅಂತರಾಳದಲ್ಲಿ ಅಡಗಿದ ತಮ್ಮದೇ ಆದ ಪ್ರತಿಭೆ. ಪೋಷಕರು ಮಕ್ಕಳಿಗೆ ಒತ್ತಡ ಹಾಕದೇ ಯಾವ ವಿಷಯದಲ್ಲಿ ತಮ್ಮ ಮಗ ಆಸಕ್ತಿ ಹೊಂದಿದ್ದಾನೆಂದು ಗುರುತಿಸಿ ಆ ವಿಷಯದಲ್ಲಿ ಪ್ರೋತ್ಸಾಹ ನೀಡಿದಾಗ ಮಾತ್ರ ಆತ ಭವಿಷ್ಯ ಕಟ್ಟಿಕೊಳ್ಳುತ್ತಾನೆ. ಶ್ರೀ ಗುರು ಕ್ರಿಸ್ತ ಶರಣ್ ಇಂಟರ್ ನ್ಯಾಷನಲ್ ಶಾಲೆ ಕಳೆದ ಜ.28 ರಿಂದ ಜ.30ರ ತನಕ ಮಹಾರಾಷ್ಟ್ರದ ನಾಸಿಕನಲ್ಲಿ ನಡೆದ 4ನೇ ರಾಷ್ಟ್ರೀಯ ಲೆಗ್ ಬಾಲ್ (ಲೆಗ್ ಕ್ರಿಕೆಟ್) ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ 12 ವರ್ಷದ ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದರು.
ವಿಜೇತ ಕ್ರೀಡಾಪಟುಗಳಿಗೆ ಶಾಸಕ ಆನಂದ್ ಪದಕ ನೀಡಿ ಸನ್ಮಾನಿಸಿದರು. ಶಾಲೆ ಆಡಳಿತಾಧಿಕಾರಿ ಸಿಸ್ಟರ್ ತಾರಾ ಸೇರವೋ, ಪ್ರಾಂಶುಪಾಲ ಲಾರೆನ್ಸ್ ಡಿಸೋಜಾ , ಕ್ರಿಸ್ತ ಶರಣ ಸಂಸ್ಥೆ ಮ್ಯಾನೇಜಿಂಗ್ ಟ್ರಸ್ಟಿ ಸಿಸ್ಟರ್ ಭಾರತಿ, ಬೀರೂರು ಪುರಸಭೆ ಮುಖ್ಯಧಿಕಾರಿ ಜಿ. ಪ್ರಕಾಶ್, ಮುಖ್ಯ ಶಿಕ್ಷಕಿ ಸಿಸ್ಟರ್ ಫ್ಲೇವಿಯ, ಎಚ್ ಆರ್ ಅಜಯ್ ಜೋ, ಗುರುಮೂರ್ತಿ, ಸಾರ್ವಜನಿಕರು, ಶಾಲಾ ಶಿಕ್ಷಕರು, ಸಿಬ್ಬಂದಿ ಭಾಗವಹಿಸಿದ್ದರು.