ಕನ್ನಡಪ್ರಭ ವಾರ್ತೆ ಕಡೂರು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ಸಾಮಾನ್ಯರಿಗೆ ನೀಡುವ ಪಡಿತರವನ್ನು ನ್ಯಾಯ ಸಮ್ಮತವಾಗಿ ಜನರಿಗೆ ವಿತರಣೆ ಮಾಡುವ ವಿತರಕರ ಸೇವೆ ಅನನ್ಯವಾದದ್ದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪಟ್ಟಣದ ಟಿಡಿಎಸ್ ಸಭಾಂಗಣದಲ್ಲಿ ಸೋಮವಾರ ಕಡೂರು ತಾಲೂಕು ಪಡಿತರ ವಿತರಕರ ಸಂಘದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ ನ್ಯಾಯ ಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಮಾಡುವ ವಿತರಕರು ಅಪಮಾನಗಳನ್ನು ಸಹಿಸಿ ಸಾರ್ವಜನಿಕರಿಗೆ ಸರ್ಕಾರದ ಪಡಿತರ ನೀಡುವುದು ಕಷ್ಟದ ಕೆಲಸವಾದರೂ ಯಾವುದೇ ಸಮಸ್ಯೆಗಳಿಲ್ಲದೆ ನಿಭಾಯಿಸುತ್ತಿದ್ದಾರೆ. ಇದಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ಸಹಕಾರ ಪ್ರಮುಖ ಎಂದರು.
ಸರ್ಕಾರದ ಅನ್ನಭಾಗ್ಯ ಯೋಜನೆ ರಾಜ್ಯದಾದ್ಯಂತ ಸಮರ್ಪಕವಾಗಿ ನಡೆಯುತ್ತಿದ್ದು ಸರ್ಕಾರಕ್ಕೆ ವಿತರಕರಿಂದ ಒಳ್ಳೆಯ ಹೆಸರು ಬಂದಿದೆ ಎಂದರೆ ತಪ್ಪಾಗದು. ಕಳೆದ 30 ವರ್ಷಗಳಿಂದ ಕಡೂರು ತಾಲೂಕಿನಲ್ಲಿ ವಿತರಕರು ಪಡಿತರ ಸಂಘ ಸ್ಥಾಪಿಸಿ ಸರ್ಕಾರ, ಇಲಾಖೆ ಮತ್ತು ಸಾರ್ವಜನಿಕರೊಂದಿಗೆ ಪ್ರೀತಿ, ವಿಶ್ವಾಸಗಳಿಂದ ಮುನ್ನಡೆಸಿಕೊಂಡು ಬಂದಿದ್ದು ಸಮಸ್ಯೆಗಳು ಬಂದರೂ ಸೌಹಾರ್ದಯುತವಾಗಿ ಬಗೆಹರಿಸಿದ್ದಾರೆ.ವಿತರಕರು ಅನೇಕ ಬೇಡಿಕೆಗಳನ್ನು ಸರ್ಕಾರ ಬಗೆಹರಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ₹120 ಇದ್ದ ಕಮೀಷನ್‌ನ್ನು ₹150ಕ್ಕೆ ಹೆಚ್ಚಿಸಿದ್ದಾರೆ. ಸಂಘ ಅಕ್ಕಪಕ್ಕದ ರಾಜ್ಯಗಳಲ್ಲಿ ₹250-300 ಇದ್ದು, ಕನಿಷ್ಠ ₹250 ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಸದನದಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು. ಕಡೂರು ಸಂಘಕ್ಕೆ ನಿವೇಶನದ ಬೇಡಿಕೆಯನ್ನು ಸಾಧ್ಯವಾದಷ್ಟು ಈಡೇರಿಸುತ್ತೇನೆ ಎಂಬ ಭರವಸೆ ನೀಡಿದರು.
ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ 20 ವರ್ಷಗಳಿಂದ ಅಧ್ಯಕ್ಷನಾಗಿ ವಿತರಕರ ಪರವಾಗಿ ಹೋರಾಟ ಮಾಡಿದ್ದೇನೆ, ಇದೆಲ್ಲ ನಿಮ್ಮ ಸಲಹೆ, ಸಹಕಾರದಿಂದ ಸಾಧ್ಯವಾಗಿದೆ. ಕಾಂಗ್ರೆಸ್ ಸರ್ಕಾರ 75 ವರ್ಷ ಮೀರಿದವರ ಮನೆಗಳಿಗೆ ತೆರಳಿ ವಿತರಣೆಗೆ ಸೂಚಿಸಿದೆ ಎಂದರು.
ಕಡೂರು ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎನ್.ಸದಾಶಿವಪ್ಪ, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಕಡೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಟಿ.ಕಲ್ಲೇಶ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಿಲ್ಲಾ ಉಪ ನಿರ್ದೇಶಕ ಯೋಗಾನಂದ್, ಕಡೂರು ತಾಲೂಕು ಆಹಾರ ನಿರೀಕ್ಷಕ ಎಚ್. ಶ್ರೀನಿವಾಸ್ ಮತ್ತು ಕಾಮನಕೆರೆ ನ್ಯಾಯಬೆಲೆ ಅಂಗಡಿಯ ಪಂಚಾಕ್ಷರಪ್ಪ, ಆಹಾರ ನಿರೀಕ್ಷಕಿ ಶಿಲ್ಪ ಎಸ್., ಕಡೂರು ಆಹಾರ ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ಕೆ.ಡಿ.ವೆಂಕಟೇಶ್, ವಿಷಯ ನಿರ್ವಾಹಕಿ ಆಹಾರ ಇಲಾಖೆ ಅಂಕಿತ ಕೆ., ರಾಧ ಅವರನ್ನು ಇದೇ ಸಂದರ್ಭದಲ್ಲಿ ವಿತರಕ ಸಂಘದಿಂದ ಗೌರವಿಸಲಾಯಿತು.
ತಾಲೂಕಿನ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದ ಶಿವಕುಮಾರ್, ದಕ್ಷಿಣಮೂರ್ತಿ, ಗಂಗಾಧರಪ್ಪ, ಎಸ್.ಕೆ. ಜಗದೀಶ್, ಆನಂದ ಮೂರ್ತಿ, ಮೋಹನ್, ಆಹಾರ ಇಲಾಖೆ ಅಧಿಕಾರಿಗಳು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಇದ್ದರು.