ಮೂರ್ಖತನದ ಪರಮಾವಧಿ ಪ್ರದರ್ಶಿಸಿದ ಅಧಿಕಾರಿಗಳಿಗೆ ಶಿಕ್ಷೆಯಾಗಲಿ; ಮಾಜಿ ಸಚಿವ ಬಂಡಿ ಆಗ್ರಹಕನ್ನಡಪ್ರಭ ವಾರ್ತೆ ಗಜೇಂದ್ರಗಡ
ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಮಾಜಿ ಸಚಿವ ಕಳಕಪ್ಪ ಬಂಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ವೀರಮಹಿಳೆಯ ಚೆನ್ನಮ್ಮ ಮೂರ್ತಿ ತೆರವಿಗೆ ಮುಂದಾಗಿ ಮೂರ್ಖತನದ ಪರಮಾವಧಿ ಪ್ರದರ್ಶಿಸಿದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು, ಮೇಲಾಧಿಕಾರಿಗಳು ಸ್ಥಳಕ್ಕೆ ಬರುವ ವರೆಗೆ ಸ್ಥಳದಿಂದ ತೆರಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಚೆನ್ನಮ್ಮ ವೃತ್ತ, ಮೂರ್ತಿಯನ್ನು ಯಾವುದೇ ಶ್ರೀಮಂತರು, ಪ್ರಭಾವಿಗಳು ಮಾಡಿದ್ದಲ್ಲ. ಈ ಭಾಗದ ಸರ್ವ ಜನಾಂಗದ ಜನರು ತಮ್ಮ ಕೈಯಿಂದ ಹಲವು ವರ್ಷಗಳ ಹಿಂದೆ ವೃತ್ತಕ್ಕೆ ಚೆನ್ನಮ್ಮ ವೃತ್ತ ಎಂದು ಹೆಸರಿಟ್ಟಿದ್ದಾರೆ. ಇಂತಹ ವೃತ್ತದಲ್ಲಿ ಚೆನ್ನಮ್ಮ ಮೂರ್ತಿಯ ತೆರವಿಗೆ ಪಿಎಸ್‌ಐ, ಮುಖ್ಯಾಧಿಕಾರಿ ಹಾಗೂ ತಹಸೀಲ್ದಾರ್ ಮುಂದಾಗಿದ್ದು, ಸರ್ಕಾರಕ್ಕೂ ಸಹ ಕಳಂಕ ತರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.ಪಟ್ಟಣದಲ್ಲಿ ತಹಸೀಲ್ದಾರ್, ಮುಖ್ಯಾಧಿಕಾರಿ ಹಾಗೂ ಪಿಎಸ್‌ಐ ನಮ್ಮನ್ನು ಕರೆಯಿಸಿ ಚೆನ್ನಮ್ಮ ವೃತ್ತದಲ್ಲಿ ಮೂರ್ತಿ ತೆರವಿಗೆ ಸೂಚಿಸಿದ್ದರು. ಆದರೆ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ೧೫ ದಿನದ ಕಾಲಾವಕಾಶ ಕೇಳಿದ್ದೇವು. ಆದರೆ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆಯಿಂದ ಚೆನ್ನಮ್ಮ ಮೂರ್ತಿ ತೆರವಿಗೆ ಮುಂದಾಗಿದ್ದು ನೋವಿನ ಸಂಗತಿ. ಸಾರ್ವಜನಕರ ಮನಸ್ಸಿಗೆ ಘಾಸಿ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕಯಕೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಗಜೇಂದ್ರಗಡ ಪಟ್ಟಣದಲ್ಲಿ ಆದ ಘಟನೆಗೆ ವಿಷಾದ ವ್ಯಕ್ತಪಡಿಸುವುದರ ಜತೆಗೆ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವುದರ ಜತೆಗೆ ತಹಸೀಲ್ದಾರ್, ಮುಖ್ಯಾಧಿಕಾರಿ ಸೇರಿ ೩ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುತ್ತೇನೆ ಎಂದು ಜಿಲ್ಲಾ ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಹೇಳಿದರು.ಪಟ್ಟಣದ ಜನತಾ ಪ್ಲಾಟ್‌ನಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿ ಬಳಿಕ ಮಾತನಾಡಿದರು.ಪಟ್ಟಣದಲ್ಲಿ ನಡೆದ ಘಟನೆ ಕುರಿತು ವಿಷಯ ತಿಳಿಸಿದಾಗ ಜಿಲ್ಲಾಧಿಕಾರಿಯವರು ಬಹಳ ವಿಷಾದ ವ್ಯಕ್ತಪಡಿಸಿದ್ದಾರೆ. ಇಷ್ಟರ ಮಟ್ಟಿಗೆ ನಮ್ಮ ಅಧಿಕಾರಿಗಳು ಇದ್ದಾರಾ ಎಂದು ಬೇಸರಿಸಿದರು. ಹೀಗಾಗಿ ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು. ಪಿಎಸ್‌ಐ ಮೇಲೆ ಇಲಾಖೆ ಶಿಸ್ತು ಕ್ರಮ ಕುರಿತು ಕ್ರಮ ಕೈಗೊಳ್ಳಲಿದೆ ಎಂದ ಅವರು, ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ನಾಳೆಯೇ ಠರಾವ್ ಪಾಸ್ ಮಾಡಿ ಅನುಮತಿ ನೀಡಲಾಗುವುದು. ಜಯಂತಿ ಆಚರಣೆ ಸಂದರ್ಭ ನಮ್ಮನ್ನು ಕರೆಯಿರಿ, ನಾವು ಬರುತ್ತೇವೆ. ಅದ್ಧೂರಿಯಾಗಿ ಚೆನ್ನಮ್ಮ ಜಯಂತಿ ಆಚರಿಸೋಣ. ಇಂತಹ ಘಟನೆ ಮರಕಳಿಸದಂತೆ ಎಚ್ಚರಿಕೆ ವಹಿಸುವುದರ ಜತೆಗೆ ೩ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಡಳಿತ ನಿಮ್ಮೊಂದಿಗೆ ಇರಲಿದೆ ಎಂದರು.