ಕೇರಳದಲ್ಲಿ ಕರ್ನಾಟಕದ ಆನೆ ದಂತ ಮಾರಾಟಕ್ಕೆ ಯತ್ನಿಸಿದ ಕೊಡಗು ಜಿಲ್ಲೆಯ ವ್ಯಕ್ತಿಗಳು ಸೇರಿ ಆರು ಮಂದಿ ಆರೋಪಿಗಳು ಕೇರಳದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಕೇರಳದ ಮಾನಂದವಾಡಿಯಲ್ಲಿ ಆನೆ ದಂತ ಮಾರಾಟಕ್ಕೆ ಯತ್ನ ನಡೆಸಲಾಗಿದ್ದು, ಕೊಡಗು ಜಿಲ್ಲೆಯ ಗೋಣಿಕೊಪ್ಪಹಾಗೂ ವಯನಾಡಿನ ಆರು ಮಂದಿಯನ್ನು ದಂತ ಸಹಿತ ಪೋಲಿಸರು ವಶಪಡಿಸಿಕೊಂಡಿದ್ದಾರೆ. ರಾಜ್ಯದಿಂದ ದಂತ ತೆಗೆದುಕೊಂಡು ಕೇರಳದಲ್ಲಿ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಆರೋಪಿಗಳು ಕೇರಳದ ಮಾನಂದವಾಡಿಯಲ್ಲಿ ಲಾಡ್ಜ್‌ನಲ್ಲಿ ತಂಗಿದ್ದರು. ಕೇರಳ ಅರಣ್ಯ ಇಲಾಖೆಯ ಗುಪ್ತಚರ ಮತ್ತು ಫ್ಲೈಯಿಂಗ್ ಸ್ಕ್ವಾಡ್ ತಂಡಗಳ ಜಂಟಿ ಕಾರ್ಯಾಚರಣೆ ನಡೆಸಿ ಆನೆ ದಂತ ಸಹಿತ ಲಾಡ್ಜ್‌ನಲ್ಲಿ ತಂಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ವಯನಾಡು ಜಿಲ್ಲೆಯ ಮಾನಂದವಾಡಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆರು ಜನರನ್ನು ಬಂಧಿಸಿ 5.5 ಕೆಜಿ ತೂಕದ ಮತ್ತು ಅಂದಾಜು 1.5 ಕೋಟಿ ರು. ಮೌಲ್ಯದ ಆನೆ ದಂತವನ್ನು ವಶಪಡಿಸಿಕೊಂಡರು. ಬಂಧಿತರನ್ನು ಗೋಣಿಕೊಪ್ಪ ರಾಜು (52), ಪೊನ್ನಂಪೇಟೆಯ ಫಿಲಿಪ್ ಮ್ಯಾಥ್ಯೂ (68), ಕರ್ನಾಟಕದ ಶೆಟ್ಟಿಗಿರಿಯ ಗೆಪ್ (60) ಮತ್ತು ವಯನಾಡಿನ ವಕೇರಿಯ ಸುಧೀಶ್ (36), ಜಸ್ಟಿನ್ ಜೋಸೆಫ್ (24) ಮತ್ತು ಯೆಲ್ಡೊ (30) ಎಂದು ಗುರುತಿಸಲಾಗಿದೆ. ಮೊದಲ ಮೂವರು ಆರೋಪಿಗಳಾದ ರಾಜು, ಫಿಲಿಪ್ ಮ್ಯಾಥ್ಯೂ ಮತ್ತು ಗೆಪ್ ಕರ್ನಾಟಕದಿಂದ ದಂತವನ್ನು ಮಾರಾಟಕ್ಕೆ ತಂದಿದ್ದು, ಸುಧೀಶ್, ಜಸ್ಟಿನ್ ಜೋಸೆಫ್ ಮತ್ತು ಯೆಲ್ಡೋ ಮಧ್ಯವರ್ತಿಗಳಾಗಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಆರೋಪಿಗಳನ್ನು ಮಾನಂತವಾಡಿಯ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾುವುದು ಎಂದು ಮೂಲಗಳು ತಿಳಿಸಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.