ದೊಡ್ಡಬಳ್ಳಾಪುರ: ಬಿರು ಬಿಸಿಲಿನ ಪರಿಣಾಮ ಬಸವಳಿದಿದ್ದ ಧರೆಗೆ ವರುಣ ತಂಪೆರೆದಿದ್ದಾನೆ. ಶನಿವಾರ ಸಂಜೆ 4 ಗಂಟೆ ಬಳಿಕ ದೊಡ್ಡಬಳ್ಳಾಪುರ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿದಿದೆ.
ನಗರ ಭಾಗದಲ್ಲಿ ಬಿರುಮಳೆಯ ಪರಿಣಾಮ ಚರಂಡಿಗಳು ಉಕ್ಕಿ ರಸ್ತೆಗಳಲ್ಲಿ ಹರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹತ್ತಾರು ದಿನಗಳಿಂದ ಸ್ವಚ್ಛಗೊಳಿಸದೇ ಇದ್ದ ಚರಂಡಿಗಳಲ್ಲೂ ಮಳೆ ನೀರು ರಭಸವಾಗಿ ಹರಿದ ಪರಿಣಾಮ ಚರಂಡಿಗಳು ಸ್ವಚ್ಛಗೊಂಡಿವೆ. ಆದರೆ ಕೊಚ್ಚೆ ನೀರು ರಸ್ತೆಗಳಲ್ಲಿ ಹರಿದು ರಸ್ತೆಗಳೇ ಚರಂಡಿಗಳಾಗಿ ಪರಿವರ್ತನೆಯಾದದ್ದು ವಿಪರ್ಯಾಸ. ನಗರಸಭೆ ಸ್ವಚ್ಛತೆಯನ್ನು ಗಂಭೀರವಾಗಿ ನಿರ್ಲಕ್ಷ್ಯ ಮಾಡಿರುವುದಕ್ಕೆ ಇದು ಸಾಕ್ಷಿ ಎಂಬಂತಿತ್ತು.
ಸಂಜೆ 5 ಗಂಟೆ ಬಳಿಕ ಬಿರುಮಳೆಯಾಗಿದ್ದು, ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ರಸ್ತೆ ಗುಂಡಿಗಳಲ್ಲಿ ನೀರು ನಿಂತು ವಾಹನಸವಾರರು ಪರಿತಪಿಸುವಂತಾಗಿತ್ತು. ಸಂಜೆ 7 ಗಂಟೆವರೆಗೂ ತುಂತುರು ಮಳೆ ಮುಂದುವರೆದಿತ್ತು.ದೊಡ್ಡಬಳ್ಳಾಪುರ ಸುತ್ತಮುತ್ತಲ ಪ್ರದೇಶಗಳಾದ ಡಿಕ್ರಾಸ್, ರಘುನಾಥಪುರ, ನಾಗದೇನಹಳ್ಳಿ, ಕೊಡಿಗೇಹಳ್ಳಿ, ಕಂಟನಕುಂಟೆ ಮೊದಲಾದೆಡೆ ಸಾಧಾರಣ ಮಳೆಯಾಗಿದೆ.