ದಾಬಸ್ಪೇಟೆ: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿದ ದರೋಡೆಕೋರರು ಚಿನ್ನಾಭರಣ ದೋಚಲು ಬಂದವರಿಗೆ ಅಡ್ಡ ಬಂದ ಮಾಲೀಕನ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ದಾಬಸ್‍ಪೇಟೆ ಪಟ್ಟಣದಲ್ಲಿ ನಡೆದಿದೆ.
ಘಟನಾ ವಿವರ:
ಗುರುವಾರ ಮಧ್ಯಾಹ್ನ ತುಮಕೂರು ರಸ್ತೆಯಲ್ಲಿರುವ ಪ್ರೇಮ್ ಶಿವ ಜ್ಯುವೆಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ದರೋಡೆಕೋರರು 30 ನಿಮಿಷ ಅಂಗಡಿಯಲ್ಲೇ ಮಾಲೀಕ ಕುನ್ಹರಾಮ್ ಅವರನ್ನು ಪರಿಚಯ ಮಾಡಿಕೊಂಡು ಮಾತನಾಡುತ್ತಾ ಕುಳಿತಿದ್ದರು. ಅಂಗಡಿಯಲ್ಲಿ ಮಾಲೀಕ ಊಟ ಮಾಡುವಾಗ ಇಬ್ಬರು ದರೋಡೆಕೋರರು ಆತನ ಮೇಲೆ ಹಲ್ಲೆ ಮಾಡಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಮಾಲೀಕ ಕುನ್ಹರಾಮ್ ತೊಡೆಗೆ ಗುಂಡು ತಗುಲಿದೆ.ಕೂಡಲೇ ಕುನ್ಹರಾಮ್ ಇಬ್ಬರು ದರೋಡೆಕೋರರನ್ನು ಅಂಗಡಿಯಿಂದ ಹೊರಗೆ ತಳ್ಳಿಕೊಂಡು ಬರುವಾಗ ಮತ್ತೆ ಶೂಟ್ ಮಾಡಿದ್ದು, ಕಾಪಾಡುವಂತೆ ಕಿರುಚಿಕೊಂಡಿದ್ದಾರೆ. ಅಕ್ಕಪಕ್ಕದ ಅಂಗಡಿಯವರು ಬಂದರೆ ಅವರ ಮೇಲೂ ದರೋಡೆಕೋರರು ಗುಂಡು ಹಾರಿಸಲು ಯತ್ನಿಸಿ ಪರಾರಿಯಾಗಿದ್ದಾರೆ.
ದಾಳಿ ಮಾಡಲು ಒಟ್ಟು ಐವರು ಬೊಲೇರೋ ವಾಹನದಲ್ಲಿ ಬಂದಿದ್ದು, ಅಂಗಡಿ ಮಾಲೀಕನ ಮೇಲೆ ಇಬ್ಬರು ದಾಳಿ ಮಾಡಿದ್ದು, ಮೂವರು ಅಂಗಡಿಯಿಂದ ಹೊರಗೆ ನಿಂತಿದ್ದರು. ಜನ ಸೇರುತ್ತಿದ್ದಂತೆ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಘಟನಾ ವಿಷಯ ತಿಳಿದು ಬೆಂಗಳೂರು ಕೇಂದ್ರ ವಲಯ ಡಿಐಜಿಪಿ ಗಿರೀಶ್, ಎಸ್ಪಿ ಚಂದ್ರಕಾಂತ್, ಎಎಸ್ಪಿಗಳಾದ ವೆಂಕಟೇಶ್ ಪ್ರಸನ್ನ, ಲಕ್ಷ್ಮೀನಾರಾಯಣ್, ಡಿವೈಎಸ್ಪಿ ಉಮಾರಾಣಿ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಧರ್ಮೇಂದ್ರ, ಚನ್ನೇಗೌಡ, ಮೋಹನ್ ಕುಮಾರ್ ಸೇರಿದಂತೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿದರು. ದಾಬಸ್‌ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೋಟೋ 5 : ಪ್ರೇಮ್ ಶಿವ ಜ್ಯುವೆಲರ್ ಅಂಗಡಿಯ ಒಳಗೆ ಗನ್ ಬುಲೆಟ್ ಬಿದ್ದಿರುವುದು