- ದಾವಣಗೆರೆ ಪ್ರತಿಭೆಗಳಿಗೆ ಅವಕಾಶ: ತೇಜೇಶ್ವರ ಮಾಹಿತಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ನಗರ, ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಬೀಳ್ಕೊಡುಗೆ ಸಿನಿಮಾಗಾಗಿ ಆಡಿಷನ್/ ಸ್ಕ್ರೀನ್ ಟೆಸ್ಟ್ ನ.16ರಂದು ಬೆಳಗ್ಗೆ 9 ಗಂಟೆಗೆ ವಿದ್ಯಾನಗರ ಮುಖ್ಯರಸ್ತೆಯ ಪವರ್ ಫಿಲ್ಮ್ ಅಕಾಡೆಮಿಯಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ, ಕಥೆಗಾರ ಬಿ.ತೇಜೇಶ್ವರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಟ್ಟೂರು ತಾಲೂಕು ಕೇಸರಹಳ್ಳಿ ಗ್ರಾಮದವರಾದ ತಾವು ಸಾಫ್ಟ್‌ವೇರ್ ಎಂಜಿನಿಯರ್. ಮೂವರು ಸ್ನೇಹಿತರೂ ಸೇರಿ ಬೀಳ್ಕೊಡುಗೆ ಸಿನಿಮಾ ನಿರ್ಮಿಸುತ್ತಿದ್ದು, ಅದಕ್ಕಾಗಿ ದಾವಣಗೆರೆಯ ಪ್ರತಿಭೆಗಳಿಗೆ ಇಡೀ ಚಿತ್ರದಲ್ಲಿ ಅವಕಾಶ ನೀಡುವ ಉದ್ದೇಶವಿದೆ ಎಂದರು.ಬೀಳ್ಕೊಡುಗೆ ಸಿನಿಮಾದ ಎಲ್ಲ ಪ್ರಮುಖ ಪಾತ್ರಗಳೂ ಸೇರಿದಂತೆ ಸುಮಾರು 100 ಕಲಾವಿದರನ್ನು ಆಯ್ಕೆ ಮಾಡಲಿದ್ದೇವೆ. ರಂಗಭೂಮಿ ಕಲಾವಿದರನ್ನೂ ಸಿನಿಮಾದಲ್ಲಿ ತೊಡಗಿಸಿಕೊಳ್ಳುವ ಉದ್ದೇಶವಿದೆ. 18ರಿಂದ 60 ವರ್ಷದೊಳಗಿನ ಪುರುಷರು, 50 ವರ್ಷದೊಳಗಿನ ಮಹಿಳೆಯರು, 6ರಿಂದ 12 ವರ್ಷದೊಳಗಿನ ಮಕ್ಕಳು ಆಡಿಷನ್‌ನಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಎಲ್ಲರಿಗೂ ಸಿನಿಮಾ ಚಿತ್ರೀಕರಣಕ್ಕೆ ಮುನ್ನ 20-25 ದಿನ ಕಾರ್ಯಾಗಾರ, ತರಬೇತಿ ನೀಡಲಾಗುವುದು ಎಂದು ಹೇಳಿದರು.
ಬ್ರಹ್ಮಪುತ್ರ, ದೇವರ ಆಟ ಬಲ್ಲವರಾರು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಕಿರುತೆರೆ, ಕಿರುಚಿತ್ರಗಳಲ್ಲೂ ಅನುಭವವಿದೆ. ಇದೀಗ ಬೀಳ್ಕೊಡುಗೆ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ. ಸುಮಾರು ₹50 ಲಕ್ಷ ಬಜೆಟ್‌ನಲ್ಲಿ ಸ್ನೇಹಿತರು ಸೇರಿ ಚಿತ್ರ ನಿರ್ಮಿಸುತ್ತಿದ್ದೇವೆ. ದಾವಣಗೆರೆ ತಾಲೂಕಿನ ಬಾಡ, ಕಂದಗಲ್ಲು ಭಾಗದ ಗ್ರಾಮೀಣ ಪರಿಸರ, ಸಂತೇಬೆನ್ನೂರು ಸೇರಿದಂತೆ ಜಿಲ್ಲೆಯ ಪ್ರಮುಖ, ಪ್ರವಾಸಿ ತಾಣಗಳಲ್ಲಿ 25 ದಿನಗಳ ಕಾಲ ಚಿತ್ರೀಕರಿಸುವ ಯೋಜನೆ ಇದೆ ಎಂದು ತಿಳಿಸಿದರು.ಈ ಸಂದರ್ಭ ಚಿತ್ರ ತಂಡದ ಸ್ವರೂಪ್, ಹರೀಶ, ನಾಗರಾಜ ಇತರರು ಇದ್ದರು.
- - --6ಕೆಡಿವಿಜಿ3:
ದಾವಣಗೆರೆಯಲ್ಲಿ ಗುರುವಾರ ಬೀಳ್ಕೊಡುಗೆ ಚಿತ್ರದ ನಿರ್ದೇಶಕ, ಕಥೆಗಾರ, ನಿರ್ಮಾಪಕ ಬಿ.ತೇಜೇಶ್ವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.