ಕಲಾಪೋಷಕ ರವಿಗೌಡರಿಗೆ ಭಾವನಮನ

KannadaprabhaNewsNetwork | Published : Nov 18, 2024 12:01 AM

ಸಾರಾಂಶ

ಅವರ ಹೆಸರು ಚಿರಸ್ಥಾಯಿಯಾಗಿರಬೇಕಾದರೆ ಪ್ರಶಸ್ತಿ ಸ್ವಾಪಿಸಿ, ಕಲಾವಿದರು, ಕಲಾಪೋಷಕರು ಸೇರಿದಂತೆ ಗಣನೀಯ ಸೇವೆ ಸಲ್ಲಿಸುತ್ತಿರುವವರಿಗೆ ನೀಡಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್‌ ಜಿಲ್ಲಾ ಘಟಕ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲಾಪೋಷಕ ರವಿಗೌಡ ಅವರಿಗೆ ಭಾವನಮನ ಸಲ್ಲಿಸಲಾಯಿತು.

ರವಿಗೌಡರ ಭಾವಚಿತ್ರಕ್ಕೆ ಪುಷ್ರಾರ್ಚನೆ ಮಾಡುವ ಮೂಲಕ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಕಾರ್ಯಕ್ರಮ ಉದ್ಧಾಟಿಸಿ, ರವಿಗೌಡರು ಯಾವುದೇ ಪ್ರತಿಫಲ ಬಯಸದೇ ಎಲೆಮರೆಯ ಕಾಯಿಯಂತೆ ಇದ್ದುಕೊಂಡು ಜಿಲ್ಲೆಯ ಕಲಾವಿದರಿಗೂ ಅದರಲ್ಲೂ ಗ್ರಾಮೀಣ ಪ್ರದೇಶದ ಜಾನಪದ ಕಲಾವಿದರರಿಗೆ ಆದಿವಾಸಿ ಬುಡಕಟ್ಟು ಜನಾಂಗದ ಕಲಾವಿದರಿಗೆ ನೆರವಾಗುತ್ತಿದ್ದರು. ಅವರ ಹೆಸರು ಚಿರಸ್ಥಾಯಿಯಾಗಿರಬೇಕಾದರೆ ಪ್ರಶಸ್ತಿ ಸ್ವಾಪಿಸಿ, ಕಲಾವಿದರು, ಕಲಾಪೋಷಕರು ಸೇರಿದಂತೆ ಗಣನೀಯ ಸೇವೆ ಸಲ್ಲಿಸುತ್ತಿರುವವರಿಗೆ ನೀಡಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ. ಅಪ್ಪಣ್ಣ ಮಾತನಾಡಿ,

ಕಳೆದ 42 ವರ್ಷಗಳಿಂದಲೂ ನನ್ನ ಹಾಗೂ ರವಿಗೌಡರ ನಡುವೆ ಒಡನಾಟ ಇತ್ತು. ಕಲೆ, ಕಲಾವಿದರು, ಸಂಗೀತದ ಬಗ್ಗೆ ಅಪಾರ ಆಸಕ್ತಿ ಇತ್ತು. ನಿವೃತ್ತ ಐಪಿಎಸ್‌ ಅಧಿಕಾರಿ ಕೆಂಪಯ್ಯಅವರ ಮೂಲಕ ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಅವರನ್ನು ಒಮ್ಮೆ ಭೇಟಿ ಮಾಡಿ, ಅವರ ಮುಂದೆಯೂ ನಾವು ಹಾಡಿದ್ದೇವು. ರಾಜ್‌ಕುಮಾರ್‌ ಅವರು ನಮ್ಮ ಕಾಡಿನವರು ಎಂದು ಖುಷಿಪಟ್ಟಿದ್ದರು. ಸಾಯುವ ಒಂದು ವಾರ ಮುನ್ನ ನನ್ನನ್ನು ಬಲವಂತವಾಗಿ ಸಂಗೀತ ತರಗತಿಗೆ ಸೇರಿಸಿದ್ದರು ಎಂದು ಸ್ಮರಿಸಿದರು.

ನಮ್ಮ ಟ್ರಸ್ಟ್‌ ಮೂಲಕ ಹಲವಾರು ಬಡ ವಿದ್ಯಾರ್ಥಿಗಳಿಗೆ, ಪಿಜಿಗಳಲ್ಲಿರುವ ಹೆಣ್ಣು ಮಕ್ಕಳಿಗೆ, ಶ್ಯಾದನಹಳ್ಳಿಯಲ್ಲಿರುವ ಅಲೆಮಾರಿಗಳಿಗೆ ಆರ್ಥಿಕ ನೆರವು ನೀಡುತ್ತಿದ್ದು, ಇದರ ಹಿಂದೆ ರವಿಗೌಡ ಹಾಗೂ ರಾಜಶೇಖರ ಕೋಟಿ ಅವರಿದ್ದರು. ಇದನ್ನು ಈವರೆಗೆ ಎಲ್ಲಿಯೂ ಹೇಳಿರಲಿಲ್ಲ ಎಂದರು.

ರವಿಗೌಡರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ, ಪ್ರತಿವರ್ಷ ಸ್ಮರಣೆ ಮಾಡಲು ತಮ್ಮ ಕೈಲಾದ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.

ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಮಾತನಾಡಿ, ರವಿಗೌಡರ ನೆನಪಿನಲ್ಲಿ ಪ್ರಶಸ್ತಿ ಸ್ಥಾಪನೆಗೆ ನೆರವಾಗುವುದಾಗಿ ಹೇಳಿದರು.

ಜಿಲ್ಲಾ ಜಾನಪದ ಪರಿಷತ್‌ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್‌ ಮಾತನಾಡಿ, ಮೈಸೂರಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ದೇಸಿ ಸಂಭ್ರಮ, ರಮ್ಮನಹಳ್ಳಿ ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ನಡೆದ ಜಾನಪದ ಸಂಸ್ಥಾಪನಾ ದಿನಾಚರಣೆ, ಹುಣಸೂರಿನ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ನಡೆದ ಬುಡಕಟ್ಟು ಜನಪದ ದಿನಾಚರಣೆಯಲ್ಲಿ ರವಿಗೌಡರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕಲಾವಿದರಿಗೆ ಸ್ವಯಂಸ್ಫೂರ್ತಿಯಿಂದ ತಮ್ಮ ಕೈಲಾದ ನೆರವು ನೀಡುತ್ತಿದ್ದರು. ಇವತ್ತು ಸಾಕಷ್ಟು ಕಲಾವಿದರಿಗೆ ವೇದಿಕೆ ಸಿಗಲು ರವಿಗೌಡರೇ ಕಾರಣ ಎಂದು ಸ್ಮರಿಸಿದರು.

ಸಾಯುವ ಮುನ್ನಾ ದಿನ ಕೂಡ ಜನವರಿ ತಿಂಗಳಲ್ಲಿ ಮೈಸೂರಿನಲ್ಲಿ ಬೃಹತ್‌ ಸಮ್ಮೇಳನ ನಡೆಸಬೇಕು. ಇದಕ್ಕೆ ಬೇಕಾದ ಎಲ್ಲಾ ರೀತಿಯ ನೆರವು ನೀಡುವುದಾಗಿ ಆಸಕ್ತಿ ತೋರಿಸಿದ್ದರು.ಆದರೆ ವಿಧಿಯಾಟ ಬೇರೆಯೇ ಇತ್ತು. ಬೆಳಗ್ಗೆ ಪತ್ರಿಕೆಗಳನ್ನು ಓದುವಾಗಲೇ ಹೃದಯಾಘಾತದಿಂದ ಮೃತಪಟ್ಟರು ಎಂದು ಭಾವುಕರಾದರು.

ಕಜಾಪ ವಿಭಾಗೀಯ ಸಂಚಾಲಕಿ ಡಾ.ಕಾವೇರಿ ಪ್ರಕಾಶ್, ಪದಾಧಿಕಾರಿಗಳಾದ ಬೆಸೂರು ಮೋಹನಪಾಳೇಗಾರ್‌, ಜಿ. ರವಿಶಂಕರ್‌, ಗಾಯಕಿಯರಾಗ ಪನ್ನಗ ವಿಜಯಕುಮಾರ್‌, ಗೀತಾ ಶ್ರೀಧರ್‌ ಮೊದಲಾದವರು ಇದ್ದರು. ಸುಧೀಂದ್ರ ನಿರೂಪಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕಲಾವಿದರು ಗೀತಗಾಯನದ ಮೂಲಕವು ರವಿಗೌಡರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

Share this article