ಹರ್ಷೋದ್ಘಾರಗಳ ನಡುವೆ ಔರಾದ್ ಅಮರೇಶ್ವರ ರಥೋತ್ಸವ

KannadaprabhaNewsNetwork |  
Published : Mar 12, 2024, 02:02 AM IST
ಚಿತ್ರ 10ಬಿಡಿಆರ್50 | Kannada Prabha

ಸಾರಾಂಶ

ಸಾವಿರಾರು ಭಕ್ತ ಸಾಗರದ ನಡುವೆ ನಸುಕಿನ ಜಾವ ರಥೋತ್ಸವ ಸಂಪನ್ನ. ಕಳೆದ ನಾಲ್ಕೈದು ದಿನಗಳಿಂದ ನಡೆದ ಜಾತ್ರೆ. ಔರಾದ್ ಪಟ್ಟಣದಲ್ಲಿ ಸಾವಿರಾರು ಭಕ್ತ ಸಾಗರದ ನಡುವೆ ಭಾನುವಾರ ನಸುಕಿನ ಜಾವ ಅಮರೇಶ್ವರ ರಥೋತ್ಸವ ಜರುಗಿತು.

ಕನ್ನಡಪ್ರಭ ವಾರ್ತೆ ಔರಾದ್

ಅಮರವಾಡಿ ಎಂಬ ಐತಹಾಸಿಕ ಹೆಸರಿನಿಂದ ಪ್ರಖ್ಯಾತವಾದ ಔರಾದ್ ಪಟ್ಟಣದ ಉದ್ಭವಲಿಂಗ ಅಮರೇಶ್ವರ ದೇವಸ್ಥಾನ ರಥೋತ್ಸವವನ್ನು ಶನಿವಾರ ತಡರಾತ್ರಿಯಿಂದ ಭಾನುವಾರ ಬೆಳಗ್ಗೆವರೆಗೆ ಅದ್ಧೂರಿಯಾಗಿ ಆಚರಿಸಲಾಯಿತು.

ಸಾವಿರಾರು ಭಕ್ತ ಸಾಗರದ ನಡುವೆ ನಸುಕಿನ ಜಾವ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸಮಿತಿಯಿಂದ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯ ನಡೆದಿದ್ದವು. ಶನಿವಾರ ರಾತ್ರಿ 8 ಗಂಟೆಯಿಂದ ಅಮರೇಶ್ವರ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಪಟ್ಟಣಾದ್ಯಂತ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಯುವಕರು, ಮಹಿಳೆಯರು, ಮಕ್ಕಳು ಹಾಗೂ ಸುತ್ತಮುತ್ತಲಿನ ಯನಗುಂದಾ, ಎಕಲಾರ, ತೇಗಂಪೂರ, ನಾಗೂರ್, ಸಂತಪೂರ್, ಬೋರಾಳ, ಚಿಂತಾಕಿ, ಭಂಡಾರಕುಮಠಾ, ಶೆಂಬೆಳ್ಳಿ, ಜಿರ್ಗಾ ಸೇರಿದಂತೆ ತಾಲೂಕಿನ ಹಲವು ಗ್ರಾಮ ಮತ್ತು ಪಕ್ಕದ ಮಹಾರಾಷ್ಟ್ರ ಮತ್ತು ತೆಲಂಗಾಣ ಮೂಲದ ಭಕ್ತರು ಆಗಮಿಸಿ ಹರಕೆ ಸಲ್ಲಿಸಿ ಭಕ್ತಿಭಾವ ಮೆರೆದರು.

ಬಣ್ಣ-ಬಣ್ಣದ ಹೂಗಳು ಹಾಗೂ ಮಹಾದೇವನ ವಿವಿಧ ಭಂಗಿಯ ಪರದೆಗಳಿಂದ ಅಲಂಕೃತಗೊಂಡಿದ್ದ ರಥವು ಎಲ್ಲರ ಕಣ್ಮನ ಸೆಳೆಯುತ್ತಿತ್ತು. ರಥವು ಮುಂದೆ ಸಾಗುತ್ತಿದ್ದಂತೆ ಭಕ್ತರು ‘ಓಂ ಭಲಾ ಶಂಕರ ಭಲಾ’ ಘೋಷಣೆ ಕೂಗುತ್ತಿದ್ದರು. ನೆರೆದಿದ್ದ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಉತ್ತತ್ತಿ ರಥದತ್ತ ಎಸೆದು ಬಾಳೆ ಹಣ್ಣು, ಟೆಂಗು ಕಾಯಿ ಕರ್ಪೂರ ಮೂಲಕ ರಥಕ್ಕೆ ಕುಟುಂಬ ಸಮೇತ ಭಕ್ತಿ ಭಾವದಿಂದ ಪೂಜೆಗೈದರು.

ರಥೋತ್ಸವಕ್ಕೆ ತಾಲೂಕಿನ ವಿವಿಧೆಡೆ, ಅಲ್ಲದೆ ನೆರೆಯ ಮಹಾರಾಷ್ಟ್ರದ ಹಣೆಗಾಂವ, ಅರಡಖೇಡ್, ಮರಖೇಲ್, ಮುಕ್ರಾಂಬಾದ್, ಉದಗೀರ್ ಹಾಗೂ ತೆಲಂಗಾಣದ ಬಿಚಕುಂದಾ, ನಾರಾಯಣಖೇಡ್, ಔದತ್‌ಪೂರ, ಮೋರ್ಗಿಯಿಂದಲೂ ಭಕ್ತರು ಬಂದಿದ್ದರು.

ದೇವಸ್ಥಾನದ ಆವರಣದಲ್ಲಿ ವಿವಿಧ ಸಮುದಾಯದವರು ಮತ್ತು ಸಂಘ ಸಂಸ್ಥೆಗಳು ಭಕ್ತರಿಗೆ ಊಟದ ವ್ಯವಸ್ಥೆ, ಲಾಡು, ಮಜ್ಜಿಗೆ, ಪಾನಕ, ಕೋಸಂಬರಿ ಸೇರಿದಂತೆ ವಿವಿಧ ರೀತಿಯ ಪ್ರಸಾದದ ವ್ಯವಸ್ಥೆಗೈದು ವಿತರಿಸಿದರು.

ರಥೋತ್ಸವಕ್ಕೆ ಮಕ್ಕಳೊಂದಿಗೆ ಬಂದಿದ್ದ ಭಕ್ತರು ಆಟಿಕೆ ಹಾಗೂ ಪೂರಿ, ಬತಾಸು ಇನ್ನಿತರ ಸಿಹಿ ಪದಾರ್ಥಗಳನ್ನು ಕೊಳ್ಳುತ್ತಿದ್ದದ್ದು, ಸಾಮಾನ್ಯವಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಅಮರೇಶ್ವರ ದೇವಸ್ಥಾನದಿಂದ ಹಳೆ ಪಪಂ ಎದುರಿನ ಅಗ್ನಿಕುಂಡದವರೆಗೆ ತೆರಳಿ ಭಕ್ತರ ಜೈಘೋಷಗಳ ನಡುವೆ ಬೆಳಗ್ಗೆ 9 ಗಂಟೆಗೆ ವಾಪಸ್‌ ತರಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಶುಕ್ರವಾರ ರಾತ್ರಿ ಹಾಗೂ ಶಾಸಕ ಪ್ರಭು ಚವ್ಹಾಣ ಶನಿವಾರ ಬೆಳಗ್ಗೆ ಅಗ್ನಿ ಪೂಜೆಗೆ ಆಗಮಿಸಿ ಅಮರೇಶ್ವರ ದರ್ಶನ ಪಡೆದರು. ಅಲ್ಲದೇ ಗ್ರಾಮದ ಮುಖಂಡರು, ಯುವಕರು ಉತ್ಸಾಹ ಉಲ್ಲಾಸದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಸಿಪಿಐ ರಘುವೀರಸಿಂಗ್ ಠಾಕೂರ್ ಅವರ ನೇತೃತ್ವದಲ್ಲಿ ಶಾಂತ ರೀತಿಯಿಂದ ಜಾತ್ರೆ ನೆರವೇರುವಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...