ಪ್ರತಿ ಹದಿನೈದು ದಿನಕ್ಕೊಮ್ಮೆ ₹50 ಸಾವಿರಕ್ಕೆ ₹5 ಸಾವಿರ ಬಡ್ಡಿ ಕಟ್ಟಲಾರದೆ ಬೇಸತ್ತು ಆಟೋ ಚಾಲಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರತಿ ಹದಿನೈದು ದಿನಕ್ಕೊಮ್ಮೆ ₹50 ಸಾವಿರಕ್ಕೆ ₹5 ಸಾವಿರ ಬಡ್ಡಿ ಕಟ್ಟಲಾರದೆ ಬೇಸತ್ತು ಆಟೋ ಚಾಲಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಮಲನಗರದ ನಿವಾಸಿ ಬಸವರಾಜು (50) ಮೃತ ದುರ್ದೈವಿ. ಮನೆಯಲ್ಲಿ ಯಾರು ಇಲ್ಲದ ವೇಳೆ ಕೋಣೆಯಲ್ಲಿ ಭಾನುವಾರ ನೇಣು ಬಿಗಿದುಕೊಂಡು ಬಸವರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಮೃತರ ಕೋಣೆಗೆ ಕುಟುಂಬದವರು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋ ಮಾಡಿಟ್ಟು ಆತ್ಮಹತ್ಯೆ:
ತನ್ನ ಕುಟುಂಬದ ಜತೆ ನೆಲೆಸಿದ್ದ ಬಸವರಾಜು ಅವರು, ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಇತ್ತೀಚಿಗೆ ಫೈನಾನ್ಷಿಯರ್ ಮಹೇಂದ್ರ ಎಂಬಾತನ ಬಳಿ ಅವರು ₹50 ಸಾವಿರ ಸಾಲ ಪಡೆದಿದ್ದರು. ಪ್ರತಿ ಹದಿನೈದು ದಿನಕ್ಕೆ 5 ಸಾವಿರ ರು ಬಡ್ಡಿಯನ್ನು ಮಹೇಂದ್ರ ವಿಧಿಸಿದ್ದ. ಆದರೆ ಈ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಬಸವರಾಜು ಸಂಕಷ್ಟಕ್ಕೆ ಸಿಲುಕಿದ್ದರು. ಸಾಲದ ವಿಚಾರವಾಗಿ ಅವರಿಗೆ ಆತ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಅವರು ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಮೃತರ ಪ್ಯಾಂಟ್ ಜೇಬಿನಲ್ಲಿ ಪತ್ರ ಹಾಗೂ ಮೊಬೈಲ್‌ನಲ್ಲಿ 20 ಸೆಕೆಂಡ್‌ಗಳ ವಿಡಿಯೋ ಪತ್ತೆಯಾಗಿದೆ. ಇವುಗಳಲ್ಲಿ ತಮ್ಮ ಸಾವಿಗೆ ಮಹೇಂದ್ರ ಕಾರಣ. ಆತನಿಗೆ ಶಿಕ್ಷೆಯಾಗಬೇಕು ಎಂದು ಮೃತರು ಆರೋಪಿಸಿದ್ದಾರೆ. ಈ ಘಟನೆ ಬಳಿಕ ತಪ್ಪಿಸಿಕೊಂಡಿರುವ ಬಡ್ಡಿ ದಂಧೆಕೋರ ಮಹೇಂದ್ರನಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.