ಆಟೋ ಚಾಲಕ, ಮಾಲೀಕರ ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರಿಸಲು ಅಗತ್ಯ ಕಾನೂನು ರಚನೆ-ಸಚಿವ ಎಚ್ಕೆ

KannadaprabhaNewsNetwork | Published : Jan 29, 2024 1:32 AM

ಸಾರಾಂಶ

ಆಟೋ ಚಾಲಕ, ಮಾಲೀಕರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತಿಸಿದೆ, ಇದಕ್ಕೆ ಅಗತ್ಯವಿರುವ ಕಾನೂನು ಕೂಡಾ ರಚನೆ ಮಾಡಲಾಗುವುದು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ಆಟೋ ಚಾಲಕ, ಮಾಲೀಕರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತಿಸಿದೆ, ಇದಕ್ಕೆ ಅಗತ್ಯವಿರುವ ಕಾನೂನು ಕೂಡಾ ರಚನೆ ಮಾಡಲಾಗುವುದು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ಅವರು ಭಾನುವಾರ ಗದಗ ನಗರದ ಅಂಬೇಡ್ಕರ್ ಸಭಾಭವನದಲ್ಲಿ ಜಿಲ್ಲಾ ವಿವಿಧ ಆಟೋ ಚಾಲಕರ, ಮಾಲೀಕರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಅಟೋ ಚಾಲಕರ, ಮಾಲೀಕರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಆಟೋ ಚಾಲಕರು ಮತ್ತು ಮಾಲೀಕರು ಹಲವಾರು ಸಮಸ್ಯೆಗಳನ್ನು ಬಹಳ ವರ್ಷಗಳಿಂದ ಎದುರಿಸುತ್ತಿದ್ದಾರೆ. ಬಹು ದಿನಗಳ ಅವರ ಬೇಡಿಕೆ ಬೇಡಿಕೆ ಆಗಿಯೇ ಉಳಿದಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಲವು ಕಾರ್ಮಿಕರ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಅದೇ ರೀತಿ ಆಟೋ ಚಾಲಕರು ಮತ್ತು ಮಾಲೀಕರು ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಮ್ಮ ಸರ್ಕಾರ ಸದಾ ಶ್ರಮಿಕರು, ದುಡಿಯುವ ವರ್ಗದ ಪರವಾಗಿಯೇ ಇದೆ. ಅದರ ಭಾಗವಾಗಿ ಶೀಘ್ರದಲ್ಲಿಯೇ ಆಟೋ ಚಾಲಕರು ಹಾಗೂ ಮಾಲೀಕರ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚಚಿರ್ಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನಗರದ ತೋಂಟದಾರ್ಯ ಮಠ ಮುಂಭಾಗದಿಂದ ಆಟೋ ಚಾಲಕರ ಬೃಹತ್ ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆ ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕಾರ್ಯಕ್ರಮ ನಡೆಯುವ ಸ್ಥಳವಾದ ಅಂಬೇಡ್ಕರ್ ಭವನಕ್ಕೆ ಆಗಮಿಸಿತು. ಸಂಘದ ಜಿಲ್ಲಾಧ್ಯಕ್ಷ ವಿಜಯ ಕಲ್ಮನಿ, ಎಸ್.ಎನ್. ಬಳ್ಳಾರಿ, ಮಂಜುನಾಥ ಅಗಸಿಮನಿ, ಬಾಬಾಜಾನ ಬಳಗಾನೂರ, ಬಸವರಾಜ ಮನಗುಂಡಿ, ಹನುಮಂತ ಗೆಜ್ಜಳ್ಳಿ, ಮುಂತಾದವರು ಹಾಜರಿದ್ದರು.ಗದಗ ಜಿಲ್ಲೆಯ ಎಲ್ಲ ತಾಲೂಕುಗಳು ಸೇರಿದಂತೆ ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಕೊಪ್ಪಳ, ಹಾವೇರಿ ಜಿಲ್ಲೆಗಳಿಂದಲೂ ಅಟೋ ಚಾಲಕರು ತಮ್ಮ ಅಟೋಗಳಲ್ಲಿ ಆಗಮಿಸಿದ್ದರು. ಇನ್ನು ದೂರದ ಜಿಲ್ಲೆಗಳಿಂದ ಅಟೋ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Share this article