ಅಟೋ ರಿಕ್ಷಾ ಪಲ್ಟಿ: ಓರ್ವ ಸಾವು

KannadaprabhaNewsNetwork | Published : Jan 29, 2024 1:32 AM

ಸಾರಾಂಶ

ಪುತ್ತೂರಿನಿಂದ ಪಾಣಾಜೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಆಟೋ ರಿಕ್ಷಾವು ಬಳಕ್ಕ ಎಂಬಲ್ಲಿನ ತಿರುವು ರಸ್ತೆ ಭಾಗದಲ್ಲಿ ಚಾಲಕನ ಹತೋಟಿ ಕಳಕೊಂಡು ರಸ್ತೆ ಬದಿ ಆಳಭಾಗದಲ್ಲಿರುವ ತೋಟಕ್ಕೆ ಉರುಳಿ ಬಿದ್ದಿತ್ತು. ಘಟನೆಯಲ್ಲಿ ತೀವ್ರ ಗಾಯಗೊಂಡ ಚಾಲಕ ಸಾವನ್ನಪ್ಪಿದರು.

ಕನ್ನಡಪ್ರಭವಾರ್ತೆ ಪುತ್ತೂರು ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಆಳ ಭಾಗದ ತೋಟಕ್ಕೆ ಉರುಳಿ ಬಿದ್ದು, ಓರ್ವ ಮೃತಪಟ್ಟ ಘಟನೆ ಪುತ್ತೂರು- ಸಂಟ್ಯಾರು- ಪಾಣಾಜೆ ರಸ್ತೆಯಲ್ಲಿನ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಬಳಕ್ಕ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿ ಅಬ್ದುಲ್ ರಹಿಮಾನ್ (65) ಮೃತರು.

ಉಮ್ಮರ್ ಫಾರೂಕ್ ಎಂಬವರು ಶನಿವಾರ ರಾತ್ರಿ ಪುತ್ತೂರಿನಿಂದ ಪಾಣಾಜೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಆಟೋ ರಿಕ್ಷಾವು ಬಳಕ್ಕ ಎಂಬಲ್ಲಿನ ತಿರುವು ರಸ್ತೆ ಭಾಗದಲ್ಲಿ ಚಾಲಕನ ಹತೋಟಿ ಕಳಕೊಂಡು ರಸ್ತೆ ಬದಿ ಆಳಭಾಗದಲ್ಲಿರುವ ತೋಟಕ್ಕೆ ಉರುಳಿ ಬಿದ್ದಿತ್ತು. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತ ಅಬ್ದುಲ್ ರಹಿಮಾನ್ ಅವರ ಅಳಿಯ ಅಟೋ ಚಾಲಕ ಉಮ್ಮರ್ ಫಾರೂಕ್, ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ರಹಿಮಾನ್ ಅವರ ಪುತ್ರಿ ಆಯಿಷತ್ತುಲ್ ತಾಹಿರಾ ಮತ್ತು ಮೊಮ್ಮಕ್ಕಳಾದ ಇಬ್ಬರು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಶಾಸಕರಿಂದ ಘಟನಾ ಸ್ಥಳಕ್ಕೆ ಭೇಟಿ, ಪರಿಶೀಲನೆ: ರಾತ್ರಿ ಆಟೋ ರಿಕ್ಷಾ ಪಲ್ಟಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಬಳಕ್ಕ ಎಂಬಲ್ಲಿನ ಘಟನಾ ಸ್ಥಳಕ್ಕೆ ಶಾಸಕ ಅಶೋಕ್‌ಕುಮಾರ್ ರೈ ಅವರು ಭಾನುವಾರ ಭೇಟಿ ನೀಡಿ ಅಪಾಯಕಾರಿ ಸ್ಥಳ ಪರಿಶೀಲನೆ ನಡೆಸಿದರು.

ಸಂಟ್ಯಾರಿನಿಂದ ಮುಂದೆ ಬಳಕ್ಕ ಸೇತುವೆಯ ಸಮೀಪ ರಾಜ್ಯ ಹೆದ್ದಾರಿ ರಸ್ತೆಯಲ್ಲಿನ ತಾಂತ್ರಿಕ ದೋಷಗಳಿಂದಾಗಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಸಹಿತ ರಸ್ತೆ ಅಪಫಾತದಿಂದಾಗಿ 6 ಮಂದಿ ಜೀವ ಕಳಕೊಂಡಿದ್ದಾರೆ. ಈ ಅಪಾಯಕಾರಿ ರಸ್ತೆ ಸಮಸ್ಯೆಗೆ ಮುಕ್ತಿ ನೀಡುವಂತೆ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕರು ನಿರಂತರವಾಗಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. 6 ಮಂದಿ ಪ್ರಾಣ ಕಳಕೊಂಡಿದ್ದರೂ ಇನ್ನೂ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.

ಸ್ಥಳದಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ, ಎರಡು ದಿವಸದೊಳಗೆ ಜೀವಹಾನಿಯಾಗುತ್ತಿರುವ ಘಟನಾ ಸ್ಥಳಕ್ಕೆ ಭೇಟಿ ನೀಡಿ ರಸ್ತೆಯಲ್ಲಿನ ತಾಂತ್ರಿಕ ದೋಷಗಳ ಬಗ್ಗೆ ಪರಿಶೀಲನೆ ನಡೆಸಿ ತಕ್ಷಣ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ತಕ್ಷಣ ಅಲ್ಲಿ ಅಪಾಯದ ಸೂಚನೆಯ ಬೋರ್ಡ್ ಅಳವಡಿಸಬೇಕು ಎಂದು ಸೂಚಿಸಿದರು.

Share this article